ವಿಧಾನಸಭೆ ಸಭಾಂಗಣದಲ್ಲಿ ಭಾವಚಿತ್ರ ಅನಾವರಣ- ಕಾರ್ಯಕ್ರಮ ಬಹಿಷ್ಕರಿಸಿದ ಕಾಂಗ್ರೆಸ್
ಬೆಳಗಾವಿ : ಬೆಳಗಾವಿಯ ವಿಧಾನಸಭೆ ಸಭಾಂಗಣದಲ್ಲಿ ಇಂದು ಏಳು ಮಹನೀಯರ ಭಾವಚಿತ್ರಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಅನಾವರಣ ಮಾಡಿದ್ದಾರೆ. ಬಸವಣ್ಣನ ಫೋಟೋವನ್ನು ಸ್ಪೀಕರ್ ಕುರ್ಚಿಯ ಮೇಲೆ ಹಾಗೂ ಎಡ ಬಲದಲ್ಲಿ ಉಳಿದ ಮಹನೀಯರ ಬಾವಚಿತ್ರಗಳನ್ನು ಹಾಕಲಾಗಿದೆ. ಸ್ಪೀಕರ್ ಕುರ್ಚಿಯ ಎಡಭಾಗದ ಮೇಲೆ ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭ್‌ಬಾಯ್ ಪಟೇಲ್ ಜೊತೆಗೆ ವೀರ್ ಸಾವರ್ಕರ್ ಫೋಟೋ ಹಾಕಲಾಗಿದೆ. ಎಡಭಾಗದಲ್ಲಿ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್‌ಚಂದ್ರ ಬೋಸ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಫೋಟೋವನ್ನು ಹಾಕಲಾಗಿದೆ. ಸದನದಲ್ಲಿ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಪ್ರತಿಪಕ್ಷ ಕಾಂಗ್ರೆಸ್ ಇನ್ನಷ್ಟು ಮಹನೀಯರ ಫೋಟೋಗಳನ್ನು ಹಾಕುವಂತೆ ಆಗ್ರಹಿಸಿದೆ. ಆದರೆ ಸರ್ಕಾರ ಮಾತ್ರ ಸಾವರ್ಕರ್ ಕೂಡ ಓರ್ವ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ. ಅವರನ್ನು ಗೌರವಿಸುವ ಸಲುವಾಗಿಯೇ ವಿಧಾನಸಭೆಯ ಸಭಾಂಗಣದಲ್ಲಿ ಸಾವರ್ಕರ್ ಫೋಟೋ ಹಾಕಲಾಗಿದೆ ಎಂದು ಬಿಜೆಪಿ ನಾಯಕರು ಹಾಗೂ ಸರ್ಕಾರದ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಡಿಕೆಶಿ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ
ಸಾವರ್ಕರ್ ಫೋಟೋವನ್ನು ವಿಧಾನಸಭೆಯಲ್ಲಿ ಅನಾವರಣ ಮಾಡುವ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಪ್ರತಿಪಕ್ಷ ಕಾಂಗ್ರೆಸ್ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರತಿಭಟನೆ ನಡೆಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಕೈಯಲ್ಲಿ ಪಂಡಿತ್ ಜವಾಹರಲಾಲ್ ನೆಹರು, ಬಸವಣ್ಣ, ರಾಷ್ಟ್ರಕವಿ ಕುವೆಂಪು, ಮಹರ್ಷಿ ವಾಲ್ಮೀಕಿ, ನಾರಾಯಣ ಗುರು, ಬಾಬು ಜಗಜೀವನ್‌ರಾಮ್ ಫೋಟೋಗಳನ್ನು ಹಿಡಿದಿದ್ದರು. ಸದನದಲ್ಲಿ ಈ ಎಲ್ಲಾ ಮಹನೀಯರ ಬಾವಚಿತ್ರಗಳನ್ನು ಕೂಡ ಹಾಕಬೇಕು ಎನ್ನುವ ಆಗ್ರಹವನ್ನು ಕಾಂಗ್ರೆಸ್ ಮಾಡಿದೆ. ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್ ಹಿಂದೆಲ್ಲಾ ತೀವ್ರ ವಿರೋಧ ವ್ಯಕ್ತಪಡಿಸಿದಂತೆ ಬಾವಚಿತ್ರ ಅನಾವರಣ ವಿಚಾರದಲ್ಲಿ ಯಾವುದೇ ವಿರೋಧವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಹಿಂದುತ್ವ ಅಜೆಂಡಾ ಮುನ್ನೆಲೆಗೆ ತಂದು ಬಿಜೆಪಿ ತಮ್ಮನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ವಿವಾದದ ಸುಳಿಗೆ ಸಿಲುಕಿಸಬಹುದು ಎಂಬ ಕಾರಣಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆಯಿಟ್ಟಿದೆ. ಅಲ್ಲದೆ ವಾಜಪೇಯಿ ಸರ್ಕಾರ 2003ರಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಫೋಟೋವನ್ನು ಸಂಸತ್ ಭವನದಲ್ಲಿ ಅನಾವರಣಗೊಳಿಸಿತ್ತು. ಹೀಗಾಗಿ ಕರ್ನಾಟಕದಲ್ಲಿ ಸಾವರ್ಕರ್ ಫೋಟೋ ಅನಾವರಣಕ್ಕೆ ತಮ್ಮ ವಿರೋಧವಿಲ್ಲ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.