ಕಾಂಗ್ರೆಸ್‌ ಪ್ರಕಟಿಸಿದ್ದ ಪ್ರಣಾಳಿಕೆ ʼಸರ್ವ ಜನಾಂಗದ ಶಾಂತಿಯ ತೋಟ ಅಲ್ಲ ಸುಳ್ಳಿನ ಕೂಪʼ – ಬಿಜೆಪಿ ಕಿಡಿ

ಕಾಂಗ್ರೆಸ್‌ ಪ್ರಕಟಿಸಿದ್ದ ಪ್ರಣಾಳಿಕೆ ʼಸರ್ವ ಜನಾಂಗದ ಶಾಂತಿಯ ತೋಟ ಅಲ್ಲ ಸುಳ್ಳಿನ ಕೂಪʼ – ಬಿಜೆಪಿ ಕಿಡಿ

ಬೆಂಗಳೂರು: ಕಾಂಗ್ರೆಸ್‌ ಬಿಜೆಪಿ ನಡುವೆ ಟ್ವೀಟ್‌ ಸಮರ ನಿಲ್ಲುವಂತೆ ಕಾಣುತ್ತಿಲ್ಲ. ಪರಸ್ಪರ ಆರೋಪ, ಪ್ರತ್ಯಾರೋಪ ನಡೆಸುತ್ತಲೇ ಇದ್ದಾರೆ. ಇದೀಗ ಬಿಜೆಪಿ, ಕಾಂಗ್ರೆಸ್‌ ಚುನಾವಣೆ ವೇಳೆ ಪ್ರಕಟಿಸಿದ್ದ ಪ್ರಣಾಳಿಕೆ “ಸರ್ವ ಜನಾಂಗದ ಶಾಂತಿಯ ತೋಟ” ಅಲ್ಲ ಸುಳ್ಳಿನ ಕೂಪ ಎಂದು ಆರೋಪಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಚುನಾವಣೆಗೂ ಮುನ್ನ ಕಾಂಗ್ರೆಸ್ ಪ್ರಕಟಿಸಿದ್ದ “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಪ್ರಣಾಳಿಕೆಯು ಸಂಪೂರ್ಣ ಸುಳ್ಳಿನ ಕೂಪವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಯಾವ ಅಂಶಗಳಿಗೂ ಒತ್ತು ನೀಡದೇ, ಕೇವಲ ಓಲೈಕೆ ರಾಜಕಾರಣಕ್ಕೆ ಮಾತ್ರ ಭರಪೂರ ಅನುದಾನ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ – ಜೆಡಿಎಸ್ ಮಾಜಿ ಶಾಸಕ ಆಂಬುಲೆನ್ಸ್ ತಡೆದ ದೃಶ್ಯ ವೈರಲ್

ಪ್ರಣಾಳಿಕೆಯಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಹಿಂದುಳಿದ & ಶೋಷಿತ ಸಮುದಾಯಗಳ ಕಲ್ಯಾಣಕ್ಕೆ ಅಗಸದಷ್ಟು ಆಶ್ವಾಸನೆಯನ್ನು ಕಾಂಗ್ರೆಸ್ ನೀಡಿತ್ತು. ಆದರೇ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಹಿಂದುಳಿದ & ಶೋಷಿತ ವರ್ಗಗಳನ್ನು ಕಡೆಗಣಿಸಿ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹100 ಕೋಟಿ ಅನುದಾನ ನೀಡಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಕೋಲಾರದ ಕನಸು ಕಂಡಿದ್ದ ವರುಣಾ ಪುತ್ರ ಮಹಿಳೆಯರ ಮತಗಳ ಆಸೆಗಾಗಿ ರಾಜ್ಯದ ಎಲ್ಲಾ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆಂದು ಹೇಳಿದ್ದರು. ಆದರೇ ಗೆದ್ದ ಬಳಿಕ ಅವರು ಮಂಡಿಸಿದ ಪ್ರಥಮ ಬಜೆಟ್ ನಲ್ಲಿ, ಸ್ತ್ರೀ ಸಬಲೀಕರಣಕ್ಕೆ ಯಾವುದೇ ಅಂಶಗಳನ್ನು ಒದಗಿಸದೇ, ನಾಡಿನ ಸ್ತ್ರೀ ಸಮುದಾಯವನ್ನು ವಂಚಿಸಿದ್ದಾರೆ ಎಂದು ಆರೋಪಿಸಿದೆ.

ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮಾಸಿಕ ವೇತನ ಹೆಚ್ಚಳ, ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ, ಒ.ಪಿ.ಎಸ್  ಜಾರಿ, ಹೀಗೆ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಜಾರಿಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಒಂದು ಬಿಡಿಗಾಸು ಸಹ ಮೀಸಲಿಟ್ಟಿಲ್ಲ. ಜನರಿಗೆ ಸುಳ್ಳು ಹೇಳಿ, ನಂಬಿಕೆ ದ್ರೋಹವೆಸಗುವುದು ಕೈ ಪಕ್ಷದ ಡಿಎನ್‌ಎ ಯಲ್ಲಿ ಅಡಕವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

suddiyaana