ಮೀನೂಟ ತಿಂದು ದೇವಸ್ಥಾನಕ್ಕೆ ಹೋಗಿದ್ರಾ ಸಿ.ಟಿ ರವಿ ?- ಅದು ‘ಮೀನಲ್ಲ ಗೋಬಿ ಮಂಚೂರಿ’ ಎಂದ ಬಿಜೆಪಿ

ಮೀನೂಟ ತಿಂದು ದೇವಸ್ಥಾನಕ್ಕೆ ಹೋಗಿದ್ರಾ ಸಿ.ಟಿ ರವಿ ?- ಅದು ‘ಮೀನಲ್ಲ ಗೋಬಿ ಮಂಚೂರಿ’ ಎಂದ ಬಿಜೆಪಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನೂಟ ತಿಂದು ಧರ್ಮಸ್ಥಳಕ್ಕೆ ಹೋಗಿದ್ದಾರೆ ಅನ್ನೋದನ್ನು ಬಿಜೆಪಿಯವರು ದೊಡ್ಡ ವಿವಾದ ಮಾಡಿದ್ರು. ಇದೀಗ ಇಂಥದ್ದೇ ವಿವಾದದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಸಿಲುಕಿದ್ದಾರೆ. ಸಿ.ಟಿ ರವಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಭಟ್ಕಳದ ಶಿರಾಲಿಯಲ್ಲಿ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಮೀನೂಟ ಸವಿದು ದೇವರ ದರ್ಶನ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಫೆಬ್ರವರಿ 19 ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಸಿ.ಟಿ ರವಿ ಕಾರವಾರದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಭಟ್ಕಳಕ್ಕೆ ಆಗಮಿಸಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಮೀನೂಟ ಸೇವಿಸಿದ್ದರು. ನಂತರ ಸಿ.ಟಿ ರವಿ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:  ‘ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ’ – ಸದನದಲ್ಲಿ ಗುಡುಗಿದ ಸಿದ್ದರಾಮಯ್ಯ

ಸಿಟಿ ರವಿ ಮೀನೂಟ ಸೇವಿಸುತ್ತಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸಿಟಿ ರವಿ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಜನರಿಗೆ ಗೊತ್ತಾಗಿದೆ. ಬಿಜೆಪಿಯವರು ಸುಳ್ಳು ಹೇಳ್ತಾರೆ ಅಂತಾ ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳಿದರು. ಇನ್ನು ಔತಣಕೂಟ ಏರ್ಪಡಿಸಿದ್ದ ಸ್ವತಃ ಬಿಜೆಪಿ ಶಾಸಕ ಸುನೀಲ್ ನಾಯ್ಕ ಈ ಪ್ರತಿಕ್ರಿಯಿಸಿದ್ದು, ಸಿ.ಟಿ.ರವಿ ಮಾಂಸಾಹಾರ ಸೇವಿಸಿಲ್ಲ. ಆವತ್ತು ಮಾಂಸದ ಅಡುಗೆ ಮಾಡಿರಲಿಲ್ಲ. ಚಪಾತಿ, ಗೋಬಿಮಂಚೂರಿ, ಅನ್ನ, ರಸಂ ಮಾತ್ರ ಸೇವಿಸಿದ್ದಾರೆ. ವಿವಾದ ಸೃಷ್ಟಿ ಮಾಡಲು ಫೋಟೋ ವೈರಲ್ ಮಾಡಲಾಗುತ್ತಿದೆ. ಸಿ.ಟಿ.ರವಿ ಜೊತೆ ನಾವೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

suddiyaana