‘ಸಿಎಂ ನಟರಿಗೆ ಶರಣು, ನನ್ನ ಪಕ್ಷಕ್ಕೆ ನಾನೇ ಸ್ಟಾರ್’! – ಸುದೀಪ್ ಬಿಜೆಪಿ ಬೆಂಬಲಕ್ಕೆ ‘ಕೈ, ದಳ’ ವ್ಯಂಗ್ಯ

‘ಸಿಎಂ ನಟರಿಗೆ ಶರಣು, ನನ್ನ ಪಕ್ಷಕ್ಕೆ ನಾನೇ ಸ್ಟಾರ್’! – ಸುದೀಪ್ ಬಿಜೆಪಿ ಬೆಂಬಲಕ್ಕೆ ‘ಕೈ, ದಳ’ ವ್ಯಂಗ್ಯ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ನಟ ಕಿಚ್ಚ ಸುದೀಪ್ ಪ್ರಚಾರ ನಡೆಸುವುದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರು ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ರಾಜ್ಯ ಕಾಂಗ್ರೆಸ್  ಟ್ವೀಟ್ ಮಾಡಿದ್ದು, ‘ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ ಸಿಎಂ ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ’ ಅಂತಾ ವ್ಯಂಗ್ಯವಾಡಿದೆ.

ಇದನ್ನೂ ಓದಿ: ‘ಬಿಜೆಪಿ ಸೇರಲ್ಲ.. ಚುನಾವಣೆಗೆ ಸ್ಪರ್ಧಿಸಲ್ಲ.. ಬೆಂಬಲ ಅಷ್ಟೇ’ – ಸುದೀಪ್ ನಡೆಯೇ ನಿಗೂಢವಾಯ್ತಾ?

‘ಜನರಿಗೆ ತೋರಿಸಲು ಬಿಜೆಪಿಗೆ ರಾಜಕೀಯ ನಾಯಕರಿಲ್ಲದ ಕಾರಣ ಸಿನಿಮಾ ನಾಯಕರ ಮೊರೆ ಹೋಗಿದೆ! ಬಿಎಸ್ ಯಡಿಯೂರಪ್ಪ ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ಸಿನ ನಾಯಕರಿಲ್ಲದಿರುವುದು ದುರಂತ! ಅಂತಾ ಲೇವಡಿ ಮಾಡಿದೆ.

ಇನ್ನು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಕೂಡ ಈ ಬಗ್ಗೆ ಬೆಂಗಳೂರಿನ್ಲಲಿ ಪ್ರತಿಕ್ರಿಯಿಸಿದ್ದಾರೆ. ಸಿಎಂ ಬೊಮ್ಮಾಯಿ ಪರ ನಟ ಸುದೀಪ್ ಚುನಾವಣಾ ಪ್ರಚಾರ ನಡೆಸೋದಾಗಿ ಹೇಳಿರೋದು ಅವರ ವೈಯಕ್ತಿ ವಿಚಾರ. ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ವೈಫಲ್ಯ ಕಂಡಿದ್ದು, ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇದ್ರಿಂದ ಯಾವುದೇ ಪ್ರಯೋಜನ ಆಗೋದಿಲ್ಲ ಅಂತಾ ಹೇಳಿದ್ದಾರೆ.

ನಟರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ನಟರನ್ನು ನೋಡಲು ಜನರು ಬರುತ್ತಾರೆ. ಕೆಲವು ಕಡೆ ಕಾಂಗ್ರೆಸ್ ಪರ, ಕೆಲವು ಕಡೆ ಬಿಜೆಪಿ ಪರ ಪ್ರಚಾರ ಮಾಡುವ ನಟರು ಇದ್ದಾರೆ. ಆದರೆ ಅವರೆಲ್ಲ ಒಂದು ಪಕ್ಷಕ್ಕೆ ಸ್ಥಿರವಾಗಿ ಪ್ರಚಾರ ಮಾಡೋದಿಲ್ಲ. ಅವರವರ ಬಾಂಧವ್ಯದ ಮೇಲೆ ಪ್ರಚಾರಕ್ಕೆ ಬರುತ್ತಾರೆ ಅಷ್ಟೇ ಅಂತಾ ಹೇಳಿದ್ದಾರೆ.

ಇನ್ನು ಹೆಚ್ ಡಿಕೆ ತಮ್ಮ ಪಕ್ಷದ ಕುರಿತಾಗಿ ಮಾತನಾಡಿದ್ದು, ನಾವು ಯಾವುದೇ ಸಿನಿಮಾ ನಟರನ್ನು ಪ್ರಚಾರಕ್ಕೆ ಬಳಸಿಕೊಳ್ಳೋದಿಲ್ಲ. ನನ್ನ ಪಕ್ಷಕ್ಕೆ ನಾನೇ ಸ್ಟಾರ್ ಪ್ರಚಾರಕ. ನನ್ನ ಕಾರ್ಯಕ್ರಮಗಳೇ ನಮಗೆ ಸ್ಟಾರ್. ಪಂಚರತ್ನ ಯೋಜನೆಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತೇನೆ. ಯಾವ ಚಿತ್ರ ನಟರನ್ನು ಕೂಡಾ ವೈಯಕ್ತಿಕವಾಗಿ ದುರುಪಯೋಗಪಡಿಸಿಕೊಳ್ಳುವುದಿಲ್ಲ. ನಟರಲ್ಲಿ ಎಲ್ಲಾ ವರ್ಗದ ಜನರಿಗೂ ಬೇಕಾದವರು ಇರುತ್ತಾರೆ. ಹೀಗೆ ದುರುಪಯೋಗ ಪಡಿಸಿಕೊಂಡು ಅವರ ಘನತೆ ಹಾಳು ಮಾಡಬಾರದು ಅಂತಾ ಹೇಳಿದ್ದಾರೆ.

suddiyaana