3 ಡಿಸಿಎಂ ಹುದ್ದೆಗೆ ಪಟ್ಟು!- ಡಿಸಿಎಂ ಕಚ್ಚಾಟಕ್ಕೆ ಕಾಂಗ್ರೆಸ್ ಮನೆಯಲ್ಲಿ ಕೋಲಾಹಲ..!

3 ಡಿಸಿಎಂ ಹುದ್ದೆಗೆ ಪಟ್ಟು!- ಡಿಸಿಎಂ ಕಚ್ಚಾಟಕ್ಕೆ ಕಾಂಗ್ರೆಸ್ ಮನೆಯಲ್ಲಿ ಕೋಲಾಹಲ..!

ರಾಜ್ಯ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಪದೇಪದೆ ಸಾಬೀತಾಗ್ತಿದೆ. ಸಚಿವರು, ನಾಯಕರು ನೀಡ್ತಿರೋ ಹೇಳಿಕೆಗಳೇ ಪಕ್ಷದೊಳಗಿನ ಅಸಮಾಧಾನಕ್ಕೆ ಕನ್ನಡಿ ಹಿಡಿದಂತಿವೆ. ಸಚಿವ ಕೆ.ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ, ಡಾ.ಜಿ ಪರಮೇಶ್ವರ್ ಸೇರಿದಂತೆ ಹಲವು ಸಚಿವರು ಮೂವರು ಡಿಸಿಎಂ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಡಿ.ಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಅದ್ರಲ್ಲೂ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಡಿ.ಕೆ ಶಿವಕುಮಾರ್ ಡಿಸಿಎಂ ಸ್ಥಾನಕ್ಕೇರಿದ್ರೂ, ಅವರೇ ಕೆಪಿಸಿಸಿಘಟಕದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷರು ಬದಲಾಗದಿದ್ರೆ ಕಾರ್ಯಾಧ್ಯಕ್ಷರ ಬದಲಾವಣೆಯೂ ಬೇಡ. ಕೆಪಿಸಿಸಿ ಅಧ್ಯಕ್ಷರಿಗೂ 2 ಪ್ರಬಲ ಖಾತೆ, ಅವರ ಕಾರ್ಯಭಾರ ಆಗಿಲ್ಲ. ನಾವೂ ಕಾರ್ಯಾಧ್ಯಕ್ಷರಾಗಿ ಮುಂದುವರಿಯುತ್ತೇವೆ ಅಂತಿದ್ದಾರೆ. ಇದೇ ವಿಚಾರವಾಗಿ ದಲಿತ ಸಮುದಾಯದ ಸಚಿವರು ಕಾಂಗ್ರೆಸ್ ಹೈಕಮಾಂಡ್ ನಾಯಕರ ಮುಂದೆ ತಮ್ಮ ಬೇಡಿಕೆಯನ್ನೂ ಇಟ್ಟಿದ್ದಾರೆ.

ಇದನ್ನೂ ಓದಿ: ಡಿಕೆಶಿ ಓಟಕ್ಕೆ ಬ್ರೇಕ್  ಹಾಕಲಿದ್ಯಾ ಸಿದ್ದು ಆಪ್ತ ಬಣ?  – ಸುರ್ಜೇವಾಲ ಮುಂದೆ 3 ಡಿಸಿಎಂ ಹುದ್ದೆ ಬೇಡಿಕೆ ಇಟ್ಟ ಪಕ್ಷದ ಹಲವು ನಾಯಕರು!

ಕೆಪಿಸಿಸಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಬರ್ತಿಲ್ಲ. ಯಾಕಂದ್ರೆ ಡಿಕೆ ಶಿವಕುಮಾರ್ ಕಾರ್ಯಕರ್ತರಿಗೆ ಸ್ಪಂದಿಸುತ್ತಿಲ್ಲ. ಡಿ.ಕೆ ಶಿವಕುಮಾರ್ ಒಬ್ಬರನ್ನ ಗಮನದಲ್ಲಿಟ್ಟುಕೊಂಡು 3 ಡಿಸಿಎಂ ಹುದ್ದೆ ವಿಚಾರ ಕೈಬಿಡಬಾರದು. ಒಬ್ಬರಿಗಾಗಿ ನೀವು ಮೂರು ಡಿಸಿಎಂ ಹುದ್ದೆ ಆಗಲ್ಲ ಎನ್ನಬೇಡಿ. ಚುನಾವಣೆ ದೃಷ್ಟಿಯಿಂದ ಮೂರು ಡಿಸಿಎಂ ಹುದ್ದೆ ಕೊಡಲೇಬೇಕು ಎಂದು ಸುರ್ಜೇವಾಲಾ ಎದುರು ಹಿರಿಯ ಸಚಿವರು ಹಠ ಹಿಡಿದಿದ್ದಾರೆ. ಹೆಚ್ಚುವರಿ ಡಿಸಿಎಂ ಹುದ್ದೆಯಿಂದ ಆ ಸಮುದಾಯಗಳು ಖುಷಿಯಾಗಿ ಪಕ್ಷದ ಮೇಲೆ ವಿಶ್ವಾಸವನ್ನ ಇಡುತ್ತವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರಂತೆ. ಲೋಕಸಭಾ ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಲೇಬೇಕು ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ ಡಿ.ಕೆ ಶಿವಕುಮಾರ್ ತಮ್ಮ ಬಳಿ ಎರಡು ಖಾತೆ ಇದ್ದರೂ ಅನಗತ್ಯವಾಗಿ ಬೇರೆ ಇಲಾಖೆಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಡಾ.ಹೆಚ್.ಸಿ.ಮಹದೇವಪ್ಪ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.  ಲೋಕಸಭಾ ಚುನಾವಣೆ ಹತ್ತಿರ ಬಂದಿದ್ದು, ಸರ್ಕಾರ ಬಂದಾಗಿನಿಂದ ಯಾವ ಕಾರ್ಯಚಟುವಟಿಕೆ ಆಗಿಲ್ಲ. ಪಕ್ಷದ ಕಾರ್ಯಕರ್ತರು ನಮ್ಮ ಬಳಿ ಬರ್ತಾರೆ ಎಂದು ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್ ಬೇಸರ ಹೊರ ಹಾಕಿದ್ದಾರೆ.  ಇದೇ ವೇಳೆ ಡಿಕೆಶಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.

ಡಿಕೆಶಿ ವಿರುದ್ಧ ಆರೋಪ! 

ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವ್ರ ಬಳಿ ಎರಡು ಖಾತೆ ಇದ್ರೂ ಬೇರೆ ಇಲಾಖೆಗಳಲ್ಲಿ ಡಿಕೆಶಿ ಮೂಗು ತೂರಿಸ್ತಾರೆ. ಸರ್ಕಾರ ಬಂದಾಗಿನಿಂದ ಯಾವ ಕಾರ್ಯಚಟುವಟಿಕೆಯೂ ಆಗಿಲ್ಲ. ಹೀಗಾಗಿ ಪಕ್ಷದ ಕಾರ್ಯಕರ್ತರು ನಮ್ಮ ಬಳಿ ಬರ್ತಾರೆ, ಕಷ್ಟ ಹೇಳೋದಿಕ್ಕೆ ಎಂದು ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ ಮಹದೇವಪ್ಪ, ಕೆ.ಹೆಚ್ ಮುನಿಯಪ್ಪ, ಕೆ.ಎನ್ ರಾಜಣ್ಣ, ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ.

ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಾದ್ರೆ ತಮಗಿರುವ ವ್ಯಾಲ್ಯೂ ಕಡಿಮೆಯಾಗುತ್ತೆ ಎಂದುಕೊಂಡಿರುವ ಡಿಕೆಶಿ ಸಚಿವರ ನಡೆಗೆ ಗರಂ ಆಗಿದ್ದಾರೆ. ಹಾಗೇನಾದ್ರೂ 3 ಹೆಚ್ಚುವರಿ ಡಿಸಿಎಂ ಸ್ಥಾನ ಸೃಷ್ಟಿಸಿದ್ರೆ ಸರ್ಕಾರದ ಭಾಗವಾಗಿ ಉಳಿಯೋದಿಲ್ಲ ಎಂದು ಹೈಕಮಾಂಡ್ ನಾಯಕರ ಬಳಿ ಡಿಕೆಶಿ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಚಿವರಿಗೂ ಹೇಳೋಕೆ ಆಗ್ದೇ ಡಿಕೆಶಿಯನ್ನ ಮನವೊಲಿಸೋಕೆ ಆಗದೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಾಗಂತ ಕಾಂಗ್ರೆಸ್​ನಲ್ಲಿ ಕುರ್ಚಿ ಕಚ್ಚಾಟ ಇಂದು ನಿನ್ನೆಯದಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿಂದ್ಲೂ ಕಾಳಗ ನಡೀತಾನೇ ಇದೆ. ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿದ್ರೂ ಸಿಎಂ ಆಯ್ಕೆ ಮಾಡೋಕೆ ವಾರಗಟ್ಟಲೆ ಟೈಂ ತಗೊಂಡಿದ್ರು. ಕೊನೆಗೆ ಸಿದ್ದರಾಮಯ್ಯ ಸಿಎಂ, ಡಿ.ಕೆ ಶಿವಕುಮಾರ್ ರನ್ನ ಡಿಸಿಎಂ ಮಾಡಲಾಯ್ತು. ಹಾಗಂತ ತಲೆಬಿಸಿ ಅಲ್ಲಿಗೆ ತಣ್ಣಗಾಗಲಿಲ್ಲ. 2 ವರ್ಷ ಆದ್ಮೇಲೆ ಸಿಎಂ ಬದಲಾಗ್ತಾರೆ ಅನ್ನೋ ಬೆಂಕಿ ಧಗಧಗಿಸಿತ್ತು. ಬಳಿಕ ಮೂರು ಡಿಸಿಎಂ ಹುದ್ದೆ ಬಾಂಬ್ ಸ್ಫೋಟಗೊಳ್ತಾನೇ ಇದೆ. ಸಿದ್ದು ಬಣದ ಸಚಿವರು 3 ಉಪಮುಖ್ಯಮಂತ್ರಿಗಳನ್ನ ನೇಮಕ ಮಾಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ಈ ಎಲ್ಲಾ ಬೆಳವಣಿಗೆಗಳನ್ನ ನೋಡಿದಾಗ ಒಂದಂತೂ ಅರ್ಥ ಆಗ್ತಿದೆ. ಇಲ್ಲಿ ಕಾಂಗ್ರೆಸ್ ನ ಹಲವು ನಾಯಕರಿಗೆ ಡಿ.ಕೆ ಶಿವಕುಮಾರ್​ ಟಾರ್ಗೆಟ್ ಆಗಿದ್ದಾರೆ. ಆದ್ರೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರೋ ಡಿಕೆಶಿಯನ್ನ ಮಟ್ಟ ಹಾಕೋಕೆ ಸಿದ್ದರಾಮಯ್ಯರೇ ತಮ್ಮ ಆಪ್ತರನ್ನ ಮುಂದೆ ಬಿಟ್ಟಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗ್ತಿದೆ. ಇದೇ ಡಿಸಿಎಂ ಕಚ್ಚಾಟ ಕಾಂಗ್ರೆಸ್ ಮನೆಯಲ್ಲಿ ಕೋಲಾಹಲ ಎಬ್ಬಿಸಿರೋದಂತೂ ಸುಳ್ಳಲ್ಲ.

 

Sulekha