ಮಳೆಯ ರೌದ್ರಾವತಾರಕ್ಕೆ 22 ಮಂದಿ ಬಲಿ – ಜನಜೀವನ ಅಸ್ತವ್ಯಸ್ತ

ಮಳೆಯ ರೌದ್ರಾವತಾರಕ್ಕೆ 22 ಮಂದಿ ಬಲಿ – ಜನಜೀವನ ಅಸ್ತವ್ಯಸ್ತ

ಆಫ್ರಿಕಾದ ಮಧ್ಯ ಕಾಂಗೋದ ಕಸಾಯಿಯಲ್ಲಿ ಮಂಗಳವಾರ ಭಾರಿ ಮಳೆ ಸುರಿದಿದೆ. ಭಾರಿ ಮಳೆಯಿಂದಾಗಿ ಒಂದೇ ಕುಟುಂಬದ 10 ಮಂದಿ ಸೇರಿ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕಾಂಗೋದ ಕಸಾಯಿ-ಮಧ್ಯ ಪ್ರಾಂತ್ಯದಲ್ಲಿ ಮಂಗಳವಾರ ಏಕಾಏಕಿ ಮಳೆ ಸುರಿದಿದೆ. ಇದರಿಂದಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಹಲವೆಡೆ ಮನೆಗಳು, ಚರ್ಚ್‌ಗಳು ಮತ್ತು ರಸ್ತೆಗಳು ಸಹ ಕುಸಿತ ಕಂಡಿವೆ. ಮಳೆ ಸಂಬಂಧಿತ ಅವಘಡಗಳಲ್ಲಿ 22 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕ್ಸಿಡೆಂಟ್‌ – 5 ಖಾಸಗಿ ಬಸ್‌ಗಳ ನಡುವೆ ಸರಣಿ ಅಪಘಾತ

ನೂರಾರು ಮನೆಗಳಿಗೆ ನೀರು ನುಗ್ಗಿರುವುದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮೂಲಸೌಕರ್ಯವಿಲ್ಲದೇ ಸ್ಥಳೀಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಕನಂಗಾದ ಕಮ್ಯೂನ್‌ಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಹಾನಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುವುದು ಎಂದು ಗವರ್ನರ್ ಜಾನ್ ಕಬೆಯಾ ತಿಳಿಸಿದ್ದಾರೆ.

ಸೂಕ್ತವಲ್ಲದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದೇ ಈ ಸಾವುಗಳಿಗೆ ಕಾರಣವಾಗಿದೆ. ಮನೆಗಳ ಗೋಡೆಗಳು ಕುಸಿದು ಹೆಚ್ಚಿನ ಜೀವಹಾನಿಯಾಗಿದೆ ಎಂದು ಕನಂಗಾ ಮೇಯರ್ ರೋಸ್ ಮುವಾಡಿ ಮುಸುಬೆ ತಿಳಿಸಿದ್ದಾರೆ.

ಮೃತರ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ. ಪೂರ್ವ ಕಾಂಗೋದಲ್ಲಿ ಡಿಸೆಂಬರ್ ಆರಂಭದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 14 ಜನರು ಸಾವನ್ನಪ್ಪಿದ್ದರು. ಕಳೆದ ಮೇ ತಿಂಗಳಿನಲ್ಲಿ ಉಂಟಾದ ಪ್ರವಾಹದಿಂದ 400 ಜನರು ಸಾವನ್ನಪ್ಪಿದ್ದರು.

Shwetha M