ಬೇಲೂರು ರಥೋತ್ಸವದಲ್ಲಿ ಕುರಾನ್ ಪಠಣ ನಡೆಯಿತಾ, ಇಲ್ವಾ – ಮುಸ್ಲಿಂ ಖಾಜಿ ಪತ್ರ ಗೊಂದಲ ಸೃಷ್ಟಿಸಿದ್ದೇಕೆ?

ಬೇಲೂರು ರಥೋತ್ಸವದಲ್ಲಿ ಕುರಾನ್ ಪಠಣ ನಡೆಯಿತಾ, ಇಲ್ವಾ – ಮುಸ್ಲಿಂ ಖಾಜಿ ಪತ್ರ ಗೊಂದಲ ಸೃಷ್ಟಿಸಿದ್ದೇಕೆ?

ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶ್ವರ ದೇವಾಲಯದಲ್ಲಿ ತಲೆಮಾರುಗಳಿಂದ ರಥೋತ್ಸವ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ಕೂಡ ಅದ್ಧೂರಿಯಾಗಿ ರಥೋತ್ಸವ ನೆರವೇರಿದೆ. ಆದರೆ ರಥೋತ್ಸವದ ಸಂದರ್ಭದಲ್ಲಿ, ರಥದ ಎದುರು ಕುರಾನ್​ ಪಠಣ ಮಾಡುವ ವಿಚಾರವಾಗಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಇಂದು ಚನ್ನಕೇಶವಸ್ವಾಮಿ ರಥೋತ್ಸವ (Chariot Festival) ನಡೆದಿದ್ದು, ಕುರಾನ್ ಪಠಣ ನಡೆದಿದೆಯಾ, ನಡೆದಿಲ್ಲವಾ ಎನ್ನುವುದೇ ಗೊಂದಲವಾಗಿದೆ.

ಹಾಸನ ಜಿಲ್ಲೆ ಬೇಲೂರಿನ ಚೆನ್ನಕೇಶ್ವರಸ್ವಾಮಿ ರಥೋತ್ಸವ ಇವತ್ತು ವಿಜೃಂಭಣೆಯಿಂದ ನೆರವೇರಿದೆ. ಬಿಗಿ ಪೊಲೀಸ್​ ಭದ್ರತೆ ನಡುವೆ ಸಂಪ್ರದಾಯದಂತೆ ದೇವಸ್ಥಾನದ ಮೆಟ್ಟಿಲಿನ ಸಮೀಪ, ದೊಡ್ಡಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಅವರು ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ಬಳಿಕ ಭಕ್ತರು ಚನ್ನಕೇಶವಸ್ವಾಮಿ ರಥವನ್ನು ಎಳೆದರು. ಆದರೆ ಈ ಬಗ್ಗೆ ಗೊಂದಲ ವ್ಯಕ್ತವಾಗಿದ್ದು, ಕುರಾನ್​ ಪಠಣ ಮಾಡಿದ್ದಾರೋ ಅಥವಾ ಇಲ್ಲವೋ ಎಂಬುವುದು ಸ್ಪಷ್ಟವಾಗಿಲ್ಲ. ಈ ಬಾರಿ ರಥದ ಬದಲಿಗೆ ದೇಗುಲದ ಮೆಟ್ಟಿಲು ಮೇಲೆ ನಿಂತು ಕುರಾನ್ ಓದಲು ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಕುರಾನ್​​ ಪಠಣವನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ರಥದ ಬಳಿ ಜೈಶ್ರೀರಾಮ್​, ಗೋವಿಂದ, ಗೋವಿಂದ ಎಂದು ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು.

ಇದನ್ನೂ ಓದಿ : ದೇಗುಲದ ತುಂಬಾ ರಾಶಿ ರಾಶಿ ಚಿನ್ನ, ಬೆಳ್ಳಿ ಆಭರಣ – ಬೆತ್ತಲೆಯಾಗಿ ಬಂದು ಬೆತ್ತಲೆಯಾಗೇ ಹೋಗಬೇಕು ಭಕ್ತರು!

ಕನ್ನಡ ನಾಡನ್ನಾಳಿದ ಹೊಯ್ಸಳ ಸಾಮ್ರಾಜ್ಯದ ಆರಾಧ್ಯ ದೈವವಾದ ಹಾಗೂ ರಾಜ್ಯದ ವಾಸ್ತುಶಿಲ್ಪ ಮತ್ತು ಕಲೆಗಳಿಗೆ ಪ್ರಸಿದ್ಧಿಯಾಗಿರುವ ಬೇಲೂರಿನ ಚನ್ನಕೇಶವ ದೇವಾಲಯದ ಮುಂದೆ ಮುಸ್ಲಿಂ ಖಾಜಿಗಳಿಂದ ರಥದ ಮುಂದೆ ಕುರಾನ್‌ ಪಠಣ ಮಾಡಲಾಗುತ್ತಿತ್ತು. ಈ ಬಗ್ಗೆ ಸುಮಾರು 90 ವರ್ಷಗಳ ಹಿಂದೆ ದೇವಾಲಯದ ಆಡಳಿತ ಕೈಪಿಡಿಯಲ್ಲಿ ಸೇರಿಸಲಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಹಿಂದೂಪರ ಸಂಘಟನೆಗಳಿಂದ ಕುರಾನ್‌ ಪಠಣದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೈಪಿಡಿಯನ್ನು ಪರಿಶೀಲನೆ ಮಾಡಿದಾಗ ದೇವಾಲಯದ ಮೆಟ್ಟಿಲುಗಳ ಬಳಿ ಮುಸ್ಲಿಂ ಖಾಜಿಗಳಿಂದ ಗೌರವ ಸಲ್ಲಿಸಲು ಹೇಳಲಾಗಿದೆ. ಆದ್ದರಿಂದ ಹಿಂದೆ ಇದ್ದ ನಿಯಮಾವಳಿಗಳನ್ನು ಬದಲಿಸಲಾಗಿದೆ ಎನ್ನಲಾಗಿತ್ತು.

ಕುರಾನ್ ಪಠಣ ಮಾಡಿಲ್ಲ, ಬರೀ ಪ್ರಾರ್ಥನೆ ಸಲ್ಲಿಕೆ :

ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಮುಸ್ಲಿಂ ಖಾಜಿಯವರು ಕುರಾನ್ ಪಠಣ ಮಾಡಿಲ್ಲ, ಕೇವಲ ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ಯಾವುದೇ ಗೊಂದಲ ಆಗಿಲ್ಲ ಎಂದು ರಥೋತ್ಸವದ ಬಳಿಕ ಮಾದ್ಯಮಗಳಿಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಪಷ್ಟನೆ ನೀಡಿದ್ದಾರೆ. ಖಾಜಿಯವರು ಬಂದು ರಥದ ಸಮೀಪ ಇರೋ ಬಾವಿ ಎದುರು ದೇವರಿಗೆ ನಮಿಸಿ ಪ್ರಾರ್ಥನೆ ಮಾಡಿದ್ದಾರೆ. ಇನ್ನು ಅವರು ಪ್ರಾರ್ಥನೆ ಮಾಡಿದ್ದಕ್ಕೆ ದೇವಾಲಯದಿಂದ ಗೌರವ ಸಮರ್ಪಣೆ ಮಾಡಲಾಗಿದೆ. ತಾನು ಕುರಾನ್ ಪಠಣ ಮಾಡಿಲ್ಲ ಪ್ರಾರ್ಥನೆ ಮಾಡಿ ಗೌರವ ಸ್ವೀಕಾರ ಮಾಡಿದ್ದೇನೆ ಎಂದು ಬರೆದು ಸಹಿ ಮಾಡಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಬರೀ ಪ್ರಾರ್ಥನೆ ಮಾಡಿದ್ದಾಗಿ ಮುಸ್ಲಿಂ ಖಾಜಿ ಸಹಿ :

ಈ ಕುರಿತು ಮಾತನಾಡಿರುವ ಮುಸ್ಲಿಂ ಖಾಜಿ ಸಜ್ಜದ್ ಭಾಷಾ ಖಾದ್ರಿ ಸಾಹೇಬ್ ಅವರು, ಇಂದು ಬೆಳಗ್ಗೆ ನಡೆದ ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ದಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ಈ ದಿನ ನಾನು ದೇವಾಲಯದ ಮೆಟ್ಟಿಲ ಬಳಿ ನಮ್ಮ ರೀತಿಯಂತೆ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಣೆ ಮಾಡಿದ್ದೇನೆ. ದೇವಾಲಯದ ವತಿಯಿಂದ ನೀಡಿದ ಮರ್ಯಾದೆಯನ್ನು ಸ್ವೀಕರಿಸುತ್ತೇನೆ. ಈ ದಿನ ನಾನು ಕುರಾನ್ ಪಠಣ ಮಾಡಿಲ್ಲ ಎಂದು ಮಾಹಿತಿ ನೀಡಿದರು. ಹಾಗೇ ಚನ್ನಕೇಶವರ ರಥದ ಎದುರು ಮುಸ್ಲಿಂ ಧಾರ್ಮಿಕ ವಿಧಿಯಂತೆ ನಮಿಸಿದ ಬಗ್ಗೆ ಮುಸ್ಲಿಂ ಖಾಜಿ ಸಜ್ಜದ್ ಭಾಷಾ ಖಾದ್ರಿ ಸಾಹೇಬ್ ಅವರು ಪತ್ರ ಬರೆದು ಸಹಿ ಮಾಡಿಕೊಟ್ಟಿದ್ದಾರೆ.

ದೇವಾಲಯ ದ ಲೆಟರ್ ಹೆಡ್‌ನಲ್ಲಿ ಬರೆದು ಸಹಿ ಮಾಡಿಕೊಟ್ಟಿದ್ದಾರೆ. ಇನ್ನು ದೇವರ ರಥದ ಮುಂದೆ ಕುರಾನ್ ಪಠಣಕ್ಕೆ ತೀವ್ರ ವಿರೊಧ ವ್ಯಕ್ತವಾಗಿತ್ತು. ಹಾಗಾಗಿ ವಿರೋಧದ ನಡುವೆ ಕೂಡ ರಥದ ಸಮೀಪ ಪ್ರತ್ಯೇಕ ಜಾಗದಲ್ಲಿ ಕುರಾನ್ ಪಠಣಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಕೇಳಿಬಂದಿದೆ. ಆದರೆ, ಕುರಾನ್ ಸಾಲುಗಳನ್ನು ಹೇಳಿದ ಮುಸ್ಲಿಂ ಖಾಜಿ ಅವರೇ ಸ್ವತಃ ತಾನು ಕುರಾನ್ ಓದಿಲ್ಲ ಎಂದು ಪತ್ರ ಬರೆದುಕೊಟ್ಟಿದ್ದಾರೆ.

suddiyaana