ಕರುನಾಡು ಕಂಡ ಶ್ರೇಷ್ಠ ತತ್ವಜ್ಞಾನಿ ಅಗಲಿಕೆಗೆ ಗಣ್ಯರಿಂದ ಸಂತಾಪ

ಕರುನಾಡು ಕಂಡ ಶ್ರೇಷ್ಠ ತತ್ವಜ್ಞಾನಿ ಅಗಲಿಕೆಗೆ ಗಣ್ಯರಿಂದ ಸಂತಾಪ

ಕರುನಾಡು ಕಂಡ ಶ್ರೇಷ್ಠ ತತ್ವಜ್ಞಾನಿ ಅಗಲಿಕೆಗೆ ಗಣ್ಯರಿಂದ ಸಂತಾಪ ಭಕ್ತರ ಪಾಲಿನ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ, ಜಗತ್ತಿಗೆ ಒಳಿತಿನ ಮಾರ್ಗ ತೋರಿಸಿದ ಪ್ರಬುದ್ಧ ಚೇತನ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಸಂಸದ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ‘ಸಿದ್ದೇಶ್ವರ ಶ್ರೀ ಜಗತ್ತಿಗೆ ಒಳಿತಿನ ಮಾರ್ಗ ತೋರಿಸಿದ ಪ್ರಬುದ್ಧ ಚೇತನ. ಸಿದ್ದೇಶ್ವರ ಶ್ರೀಗಳು ತಮ್ಮ ಸರಳತೆ, ಜ್ಞಾನಕ್ಕಾಗಿ ಗೌರವಾನ್ವಿತರಾಗಿದ್ದರು. ಸಮಾಜಕ್ಕೆ ಸಿದ್ದೇಶ್ವರ ಶ್ರೀಗಳ ಅತ್ಯುತ್ತಮ ಸೇವೆ ಸ್ಮರಣೀಯವಾಗಿದೆ. ಸಿದ್ದೇಶ್ವರ ಸ್ವಾಮೀಜಿ ಅನುಯಾಯಿಗಳ ದುಃಖದಲ್ಲಿ ಭಾಗಿಯಾಗಿದ್ದೇನೆ. ಅವರ ಬೋಧನೆ ಜೀವನದಲ್ಲಿ ಅನುಸರಿಸಬೇಕು’ ಎಂದು ಫೇಸ್ ಬುಕ್ನಲ್ಲಿ ಫೋಸ್ಟ್ ಹಾಕುವ ಮೂಲಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:  ಬಾಲಕ ‘ಸಿದ್ದಗೊಂಡ’.. ‘ಶತಮಾನದ ಸಂತ’ನಾಗಿದ್ದು ಹೇಗೆ?

ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ನಿರ್ಮಲಾನಂದನಾಥ ಶ್ರೀ ಸಂತಾಪ ಸೂಚಿಸಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ನಿರ್ಮಲಾನಂದನಾಥಶ್ರೀ ಅವರು ಸಂತಾಪ ಸೂಚಿಸಿದ್ದಾರೆ. ‘ನಮ್ಮ ನಾಡು ಕಂಡ ಅಪರೂಪದ ಅನುಭವಿ ಸಂತರಾದ ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರಸ್ವಾಮೀಜಿರವರು ಭೌತಿಕವಾಗಿ ಇನ್ನಿಲ್ಲವಾದುದು ಅತ್ಯಂತ ದುಃಖದ ಸಂಗತಿ. ಪೂಜ್ಯ ಸ್ವಾಮೀಜಿರವರು ಪಂಚಭಾಷಾ ಪ್ರವೀಣರಾಗಿದ್ದರು, ವಾಗ್ದೇವಿಯ ಆರಾಧಕರಾಗಿದ್ದರು, ಮಹಾನ್ ಆಧ್ಯಾತ್ಮಿಕ ಜೀವಿಯಾಗಿದ್ದರು. ಸನಾತನ ಶಾಸ್ತ್ರಗ್ರಂಥಗಳು ಮತ್ತು ವಚನ ಸಾಹಿತ್ಯವನ್ನು ಆಧುನಿಕ ಸಮಾಜದ ವಿದ್ಯಾವಂತರಿಗೆ ಮನದಟ್ಟಾಗುವಂತೆ ಸರಳವಾಗಿ ಬೋಧಿಸಿ ಅವರ ಆಂತರ್ಯದ ಪರಿವರ್ತನೆಗೆ ಕಾರಣರಾಗಿದ್ದರು. ಕ್ಲಿಷ್ಟಕರವಾದ ವೇದೋಪನಿಷತ್ತುಗಳ ಮಂತ್ರಗಳು ಮತ್ತು ಯೋಗಸೂತ್ರಗಳನ್ನು, ಭಗವದ್ಗೀತೆ ಹಾಗೂ ವಚನ ಶಾಸ್ತ್ರ ಮುಂತಾದುವನ್ನು ಆಧುನಿಕ ವೈಜ್ಞಾನಿಕ ಭಾಷೆಯಲ್ಲಿ ಬೋಧಿಸುತ್ತಿದ್ದರು. ಕಠಿಣವಾದ ತತ್ವಗಳನ್ನು ಜನ ಸಾಮಾನ್ಯರಿಗೆ ನಿಲುಕುವ ಭಾಷೆಯಲ್ಲಿ ಬೋಧಿಸಿ ಪಂಡಿತ ಪಾಮರರಿಗೂ ಜ್ಞಾನ ಸುಧೆಯನ್ನು ಉಣಬಡಿಸುತ್ತಿದ್ದರು’ ಎಂದು ಸಂತಾಪ ಸೂಚಿಸಿದ್ದಾರೆ.

ಇನ್ನು ಶ್ರೀಗಳ ಅಳಿಯ ರಾಜಕುಮಾರ ಸವದಿ ಕೂಡಾ ಸಂತಾಪ ಸೂಚಿಸಿದ್ದಾರೆ. ‘ಸಿದ್ದೇಶ್ವರ ಸ್ವಾಮೀಜಿಗಳು ಮನೆಗೆ, ಊರಿಗೆ ಮೀಸಲಾಗಿರಲಿಲ್ಲ. ಸಿದ್ದೇಶ್ವರ ಸ್ವಾಮೀಜಿ ಅವರು ಸಂಬಂಧಿಕರಿಂದ ದೂರವಾಗಿದ್ದರು. ಶ್ರೀಗಳು ಚಿಕ್ಕಂದಿನಿಂದಲೂ ಧ್ಯಾನ, ಆಧ್ಯಾತ್ಮದತ್ತ ಒಲವು ಹೊಂದಿದ್ದರು. ಗ್ರಾಮದ ಹೊರಗಿನ ಸನ್ಯಾಸಿ ಮಠಕ್ಕೆ ತೆರಳಿ ಧ್ಯಾನ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಹೋದವರು ತಿರುಗಿ ನೋಡಲಿಲ್ಲ. ತಂದೆ-ತಾಯಿ ನಿಧನರಾದರೂ ನೋಡುವುದಕ್ಕೆ ಅವರು ಬಂದಿರಲಿಲ್ಲ. ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಎಲ್ಲರಿಗೂ ದುಃಖ ತಂದಿದೆ’ ಎಂದು ಬಿಜ್ಜರಗಿ ಗ್ರಾಮದಲ್ಲಿ ಶ್ರೀಗಳ ಅಳಿಯ ರಾಜಕುಮಾರ ಸವದಿ ಸಂತಾಪ ಸೂಚಿಸಿದ್ದಾರೆ.

suddiyaana