ಅನ್ನಭಾಗ್ಯದ ಹಣ ಪಡೆಯಲು ಷರತ್ತು– ಆಧಾರ್ ಲಿಂಕ್ ಆಗಿದ್ರೆ ಮಾತ್ರ ಧನಭಾಗ್ಯ!
ಬೆಂಗಳೂರು: ಚುನಾವಣಾ ವೇಳೆ ಕಾಂಗ್ರೆಸ್ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಘೋಷಿಸಿತ್ತು. ಆದರೆ ಈಗ ಅನ್ನಭಾಗ್ಯ ಯೋಜನೆಗೆ ಹಿನ್ನೆಡೆ ಉಂಟಾಗಿದೆ. ಹೀಗಾಗಿ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುವುದಾಗಿ ಘೋಷಿಸಿದೆ. ಇದೀಗ ಹಣಭಾಗ್ಯಕ್ಕಾಗಿ ಸರ್ಕಾರ ಷರತ್ತುಗಳನ್ನು ವಿಧಿಸಿದೆ.
ಇದನ್ನೂ ಓದಿ: ಇತಿಹಾಸದಲ್ಲಿ ಮೊದಲ ಬಾರಿಗೆ RSS ಲಾಠಿ ಉಪಯೋಗಕ್ಕೆ: ಬಡಿದಾಟದಲ್ಲಿ ಉಳಿದವರು ಬಿಜೆಪಿ ನಾಯಕನಾಗಲಿ – ಕಾಂಗ್ರೆಸ್ ಲೇವಡಿ
ಅಕ್ಕಿ ಬದಲಾಗಿ ಹಣ ನೀಡುವುದಾಗಿ ಸರ್ಕಾರ ಹೇಳಿದೆ. ಧನಭಾಗ್ಯಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಕೆ ಮಾಡಬೇಕಿಲ್ಲ. ಈ ಹಣ ನೇರವಾಗಿ ಕುಟುಂಬದ ಯಜಮಾನನ ಖಾತೆಗೆ ಜಮೆಯಾಗುತ್ತದೆ. ಈ ಹಣ ಬ್ಯಾಂಕ್ ಖಾತೆಗೆ ಜಮೆಯಾಗಬೇಕಾದರೆ ಆಧಾರ್ ಲಿಂಕ್ ಕಡ್ಡಾಯವಾಗಿರುತ್ತದೆ. ಅನ್ನಭಾಗ್ಯದ ಹಣ ಬ್ಯಾಂಕ್ ಖಾತೆಗೆ ಜಮೆ ಆಗಬೇಕಾದರೆ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು. ಬಿಪಿಎಲ್ ಪಡಿತರ ಚೀಟಿಯನ್ನು ನೀವು ಹೊಂದಿರಬೇಕು. ಪಡಿತರ ಚೀಟಿಯಲ್ಲಿ ಮನೆ ಮುಖ್ಯಸ್ಥರು ಯಾರು ಅನ್ನೋದು ಕಾರ್ಡ್ ನಲ್ಲಿ ನಮೂದಾಗಿರುತ್ತದೆ ಅವರ ಖಾತೆಗೆ ಹಣ ಜಮೆಯಾಗಲಿದೆ. ಹೀಗಾಗಿ ಮನೆ ಯಜಮಾನನ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಕಡ್ಡಾಯವಾಗಿ ಇರಬೇಕಾಗುತ್ತದೆ. ಒಂದು ವೇಳೆ ಮನೆಯ ಮುಖ್ಯಸ್ಥರದ್ದು ಇಲ್ಲದೇ ಹೋದಲ್ಲಿ, ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬರ ಹೆಸರಿನಲ್ಲಿ ಖಾತೆ ಆಧಾರ್ ಲಿಂಕ್ ಆಗಿರಬೇಕು ಎಂದು ಸರ್ಕಾರ ಹೇಳಿದೆ.
ಆಹಾರ ಇಲಾಖೆ ಮಾಹಿತಿ ಪ್ರಕಾರ, ಸದ್ಯ 1.28 ಫಲಾನುಭವಿಗಳು ಇದ್ದು ಅದರಲ್ಲಿ 6 ಲಕ್ಷ ಖಾತೆದಾರರ ಆಕೌಂಟ್ ಸಮಸ್ಯೆ ಹಾಗೂ ಅಧಾರ್ ಲಿಂಕ್ ಆಗದೇ ಇರುವ ಸಮಸ್ಯೆ ಇದೆ. ಹೀಗಾಗಿ ಜುಲೈ 1 ನಲ್ಲಿ ಇವರಿಗೆ ದುಡ್ಡು ಕೊಡಲು ಸಮಸ್ಯೆಯಾಗಬಹುದು. ಅಕೌಂಟ್, ಆಧಾರ್ ಲಿಂಕ್ ಮಾಡಿಸಿದ ಬಳಿಕವಷ್ಟೇ ದುಡ್ಡು ನೇರವಾಗಿ ಡಿಬಿಟಿ ಮೂಲಕ ಜಮೆಯಾಗುತ್ತೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.