ಅನ್ನಭಾಗ್ಯದ ಜೊತೆ ಹಣದ ಭಾಗ್ಯಕ್ಕೆ ಷರತ್ತು ಅನ್ವಯ! – ಮತ್ತೊಂದು ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ಅನ್ನಭಾಗ್ಯದ ಜೊತೆ ಹಣದ ಭಾಗ್ಯಕ್ಕೆ ಷರತ್ತು ಅನ್ವಯ! – ಮತ್ತೊಂದು ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕಾಂಗ್ರೆಸ್‌ನ ಎರಡನೇ ಗ್ಯಾರಂಟಿ ಯೋಜನೆಗೆ ಸೋಮವಾರ ಅಧಿಕೃತ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಜು. 10 ರ ಸಂಜೆ 5 ಗಂಟೆಗೆ‌ ಅನ್ನಭಾಗ್ಯ  ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಅನ್ನಭಾಗ್ಯದ ಜೊತೆ ಹಣವೂ ಸಿಗಬೇಕೆಂದರೆ ಷರತ್ತೊಂದನ್ನು ವಿಧಿಸಿದೆ.

ರಾಜ್ಯ ಕಾಂಗ್ರೆಸ್‌ ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಹೇಳಿತ್ತು. ಇದೀಗ ಅನ್ನಭಾಗ್ಯದ ಅಕ್ಕಿ ಜೊತೆಗೆ ಹಣ ಪಡೆಯಲು ಷರತ್ತನ್ನು ವಿಧಿಸಿದೆ. ಅನ್ನಭಾಗ್ಯದ ಅಕ್ಕಿ ಜೊತೆ ಹಣ ಪಡೆಯಲು ಕಳೆದ ಒಮ್ಮೆಯಾದರೂ ಪಡಿತರ ಮೂರು ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಪಡೆದಿರಬೇಕು ಎಂದು ಸರ್ಕಾರ ನಿಬಂಧನೆ ಹೇರಿದೆ.

ಇದನ್ನೂ ಓದಿ: ಅನ್ನಭಾಗ್ಯದ ಜೊತೆ ಹಣದ ಭಾಗ್ಯ – ಜಾರಿಯಾಗುತ್ತಿದೆ ಸರ್ಕಾರದ ಎರಡನೇ ಗ್ಯಾರಂಟಿ

ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಪಡಿತರದಾರರಿಗೆ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಬದಲು 170 ರೂ.ನಂತೆ, ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಗೆ ತಕ್ಕಂತೆ ಹಣ ಜಮಾ ಆಗಲಿದೆ. ಆದರೆ ಈ ರೀತಿ ಹಣ ಪಡೆಯಲು ಬಿಪಿಎಲ್ ಕುಟುಂಬಗಳು ಕಳೆದ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಅಕ್ಕಿ ಪಡೆದಿರಬೇಕು ಎನ್ನುವ ನಿಯಮ ವಿಧಿಸಿದೆ. ಆ ಮೂಲಕ ಅಗತ್ಯ ಇರುವ ಕುಟುಂಬಕ್ಕೆ ಮಾತ್ರ ನಗದು ವರ್ಗಾವಣೆ ಮಾಡುತ್ತೇವೆ ಎನ್ನುವ ಸಂದೇಶ ನೀಡಿದೆ.

ಪಡಿತರ ಅಗತ್ಯವಿರುವಂತಹ ಕುಟುಂಬಗಳಿಗೆ ಮಾತ್ರವೇ ನಗದು ವರ್ಗಾವಣೆ ಮಾಡಲು ಯೋಜನೆ ರೂಪಿಸಿರುವ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದೆ. ಇದರೊಂದಿಗೆ ಪಡಿತರ ಚೀಟಿಯ ಮುಖ್ಯಸ್ಥರ ಆಧಾರ್​​ ಜೋಡಣೆಗೆ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್​ ಖಾತೆ ಹೊಂದಿರಬೇಕು. ಜು.10 ರಿಂದ ವರ್ಗಾವಣೆ ಪ್ರಕ್ರಿಯೆ ಶುರುವಾಗಲಿ. ನಗದು ವರ್ಗಾವಣೆ ಪ್ರಕ್ರಿಯೆ ಜುಲೈ ಅಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಐದು ಕೆ.ಜಿ ವ್ಯವಹಾರ ಅಕ್ಕಿಯ ಹಣ ಜಮೆಯಾಗಲಿದೆ.

ಇನ್ನು ಅರ್ಹರಿರುವಂತಹ ಪಡಿತರ ಚೀಟಿಗಳು ಮತ್ತು ಸದಸ್ಯರ ಪಟ್ಟಿಯನ್ನು (ಸೆಟ್ ಆಫ್ ರೇಷನ್ ಕಾರ್ಡ್) ಎನ್ ಐಸಿ ಸಂಖ್ಯೆಯ ತಂತ್ರಾಂಶದಲ್ಲಿ ಸಿದ್ಧಪಡಿಸಿ, ಆಧಾರ್ ಲಿಂಕ್ ಆಗಿರುವಂತಹ ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆಗಳ ಪರಿಶೀಲನೆಗಾಗಿ ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ) ಕೋಶಕ್ಕೆ ವರ್ಗಾಯಿಸಲಾಗುತ್ತದೆ. ಅದರಂತೆ ನ್ಯಾಷನಲ್ ಪೇಮೆಂಟ್ಸ್‌ ಕಾರ್ಪೋರೇಷನ್‌ ಆಫ್ ಇಂಡಿಯಾ (ಎನ್ ಪಿಸಿಐ) ನಿಂದ ಕಾರ್ಡ್ದಾರರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆಯಲಾಗುತ್ತದೆ. ಹೀಗಾಗಿ ಪಡಿತರ ಚೀಟಿದಾರರು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕಾಗಿಲ್ಲ.

ಇನ್ನು ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚಿನ ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳು ಅಕ್ಕಿ ಬದಲಿಗೆ ಹಣ ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಅದರಂತೆ ಕುಟುಂಬದ ಮುಖ್ಯಸ್ಥರನ್ನು ಗುರುತಿಸದ ಹಾಗೂ ಒಂದಕ್ಕಿಂತಲೂ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವವರು ಆಹಾರ ಇಲಾಖೆ ಅಧಿಕಾರಿಗಳ ಸಹಕಾರ ಪಡೆದು ಸರಿಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

suddiyaana