ಕೊಹ್ಲಿ ಕಾಲು ಹಿಡಿದ ಆರ್‌ಸಿಬಿ ಅಭಿಮಾನಿಗೆ ಥಳಿತ – ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಕೊಹ್ಲಿ ಕಾಲು ಹಿಡಿದ ಆರ್‌ಸಿಬಿ ಅಭಿಮಾನಿಗೆ ಥಳಿತ – ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಕಳೆದ ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ಅಭಿಮಾನಿಯೊಬ್ಬ ಕ್ರೀಸ್‌ಗೆ ನುಗ್ಗಿ ವಿರಾಟ್‌ ಕೊಹ್ಲಿ ಕಾಲು ಹಿಡಿದಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೈದಾನ ಪ್ರವೇಶಿಸಿದ್ದ ಯುವಕನಿಗೆ ಥಳಿಸಿದ್ದರು. ಯುವಕನಿಗೆ ಥಳಿಸಿದ್ದನ್ನು ಪ್ರಶ್ನಿಸಿ ಇದೀಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ.

ಮಾರ್ಚ್‌ 25 ರಂದು ಪಂಜಾಬ್ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಧ್ಯೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿತ್ತು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಬರುತ್ತಿದ್ದಂತೆ ಅಭಿಮಾನಿಯೊಬ್ಬ ಹೈ ಸೆಕ್ಯೂರಿಟಿ ಮಧ್ಯೆಯೂ ಕ್ರೀಸ್ ಒಳಗಡೆ ನುಗ್ಗಿ ಕೊಹ್ಲಿ ಕಾಲು ಹಿಡಿದು ಹುಚ್ಚಾಟ ನಡೆಸಿದ್ದ.

ಇದನ್ನೂ ಓದಿ: ಬೆಂಗಳೂರಿನಲ್ಲಿ RCB vs LSG ಹೈವೋಲ್ಟೇಜ್‌ ಮ್ಯಾಚ್‌ – ಈ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ

ಕೊಹ್ಲಿ ಬರುವುದನ್ನೇ ಕಾಯುತ್ತಿದ್ದ ಅಭಿಮಾನಿ ಎಲ್ಲಾ ರೂಲ್ಸ್‌ಗಳನ್ನು ಮುರಿದು ಕ್ರೀಸ್ ಒಳಗಡೆ ನುಗ್ಗಿ ಏಕಾಏಕಿ ಕೊಹ್ಲಿ ಕಾಲಿಗೆ ಬಿದ್ದು ಬಳಿಕ ಅಪ್ಪಿಕೊಳ್ಳಲು ಪ್ರಯತ್ನಿಸಿದ್ದ. ಕೂಡಲೇ ಒಳನುಗ್ಗಿದ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ನಂತರ ಮೈದಾನ ದಿಂದ ಹೊರಗೆ ಕರೆತಂದು ಸಿಬ್ಬಂದಿ ಥಳಿಸಿದ್ದರು. ಥಳಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಯುವಕನಿಗೆ ಥಳಿಸಿದ್ದನ್ನು ಪ್ರಶ್ನಿಸಿ ಇದೀಗ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡಮಾಲಿ ಪಾಟೀಲ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಮಾನವೀಯತೆ ಮರೆತು ಲಕ್ಷಾಂತರ ಜನರ ಮುಂದೆ ಯುವಕನಿಗೆ ಥಳಿಸಿದ್ದಾರೆ‌‌. ಹಲ್ಲೆ ಮಾಡಲು ಇವರಿಗೆ ಏನು ಹಕ್ಕಿದೆ? ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಹಲ್ಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

Shwetha M