ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – KD ಚಿತ್ರ ತಂಡದ ವಿರುದ್ದ ದಾಖಲಾಯ್ತು ಸಾಲು ಸಾಲು ದೂರು!

ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡು ರಿಲೀಸ್ ಆಗಿದೆ. ಈ ಹಾಡಿನ ಸಾಹಿತ್ಯದ ವಿರುದ್ದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಿನಿಮಾ ತಂಡದ ವಿರುದ್ದ ರಾಜ್ಯ ಮಹಿಳಾ ಆಯೋಗ ದೂರು ನೀಡಿದೆ.
ಇದನ್ನೂ ಓದಿ: ಗೌತಮ್ ಘರ್ಜನೆ.. ಜೈದೇವ್ ಗಡಗಡ.. ಕೇಡಿ ಜೇಡಿಗೆ ಕೇಡುಗಾಲ ಶುರು! – ಶಕುಂತಲಾನೂ ಗೌತಮ್ ಪರನಾ?
ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ಕೊಟ್ಟ ಮಹಿಳಾ ಆಯೋಗ ಕೆಡಿ ಚಿತ್ರದ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಹಾಡಿನಲ್ಲಿ ಡಬಲ್ ಮೀನಿಂಗ್ ಇದ್ದು, ಇದು ಕೇಳಲು ಅಸಾಧ್ಯವಾಗಿದೆ. ಕೆಟ್ಟ ಸಾಹಿತ್ಯದ ಮೂಲಕ ಹೆಣ್ಣುಮಕ್ಕಳನ್ನು ಅವಮಾನ ಮಾಡಲಾಗ್ತಾ ಇದೆ ಎಂದು ಆರೋಪ ಮಾಡಲಾಗಿದೆ.
ಪ್ರೇಮ್ ಸಾಹಿತ್ಯ ಬರೆದ ಹಾಡಿಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಅವಮಾನಿಸಲಾಗ್ತಾಯಿದೆ. ಅಸಭ್ಯ ಪೋಸ್ಟ್ಗಳು ಹರಿದಾಡುತ್ತಿರುವ ಬಗ್ಗೆ ಆಯೋಗಕ್ಕೆ ದೂರು ಬಂದಿದ್ದು ಮಹಿಳೆಯರ ಮಾನಮರ್ಯಾದೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎನ್ನಲಾಗಿದೆ.ಅವಾಚ್ಯ ಕಾಮೆಂಟ್ಗಳು ಹಾಗೂ ವಿಡಿಯೋಗಳ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಲಾಗಿದ್ದು ಈ ವಿಷಯವನ್ನು ತಕ್ಷಣ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಸಭ್ಯ ಮತ್ತು ಅವಮಾನಕಾರಿ ವಿಷಯಗಳನ್ನು ಡಿಲೀಟ್ ಮಾಡುವಂತೆ ದೂರಿನಲ್ಲಿ ತಿಳಿಸಲಾಗಿದೆ. ಹಾಡಿನಲ್ಲಿರುವ ಸಾಹಿತ್ಯವನ್ನು ಬದಲಾಯಿಸುವಂತೆ ಸೂಚನೆ ನೀಡಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದ್ದು ಮಹಿಳೆಯರ ಗೌರವ-ಸುರಕ್ಷತೆ ಕಾಯುವುದು ಪೊಲೀಸರ ಜವಾಬ್ದಾರಿ ಎಂದು ಉಲ್ಲೇಖ ಮಾಡಲಾಗಿದೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಿನಿಮಾ ತಂಡದ ವಿರುದ್ದ ಫಿಲ್ಮ್ ಚೇಂಬರ್ಗೆ ದೂರು!
ಇನ್ನು ಕೆಡಿ ಸಿನಿಮಾದ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಸಿನಿಮಾದ ಈ ಹಾಡು ಅಶ್ಲೀಲವಾಗಿದೆ. ಮಹಿಳೆಯರ ಘನತೆಗೆ ಕುತ್ತು ಬರುತ್ತೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ದೆಹಲಿ, ಮುಂಬೈನಲ್ಲೂ ಕೇಸ್ ದಾಖಲು!
ಇನ್ನು ಕನ್ನಡದಲ್ಲಿ ಸರ್ಸೆ ಸೆರಗ ಸರ್ಸೆ ವಿವಾದದ ಬೆನ್ನಲ್ಲೇ ದೆಹಲಿ ಹಾಗೂ ಮುಂಬೈನಲ್ಲೂ ದೂರು ದಾಖಲಾಗಿದೆ. ದೆಹಲಿಯ ವಕೀಲ ವಿನೀತ್ ಜಿಂದಾಲ್ ಎಂಬುವರು ಹಾಡಿನ ವಿರುದ್ಧ ಸಿಬಿಎಫ್ಸಿಗೆ ದೂರು ನೀಡಿದ್ದು, ಈ ಕೂಡಲೇ ಹಾಡನ್ನು ತೆಗೆಸಬೇಕು ಎಂದು ಮನವಿ ಮಾಡಿದ್ದಾರೆ. ವಕೀಲ ವಿನೀತ್ ಅವರು ದೆಹಲಿ ಸೈಬರ್ ಪೊಲೀಸರಿಗೂ ಸಹ ದೂರು ನೀಡಿದ್ದು, ಈ ಹಾಡಿನ ಸಾಹಿತ್ಯ ಬರೆದವರು, ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 (ಮಹಿಳೆಯ ಮಾನಕ್ಕೆ ಧಕ್ಕೆ) ಮತ್ತು ಪೋಕ್ಸೊ ಕಾಯ್ದೆಯ ಅಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ದೆಹಲಿ ಮಾತ್ರವೇ ಅಲ್ಲದೆ ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿಯೂ ಸಹ ಈ ಸಂಬಂಧ ದೂರು ದಾಖಲಾಗಿದೆ.
ಚಿತ್ರ ತಂಡಕ್ಕೆ ನೋಟಿಸ್ ಜಾರಿ ಮಾಡಿದ NHRC
ವಕೀಲ ವಿನೀತ್ ಮಾತ್ರವೇ ಅಲ್ಲದೆ ಕೆಲವು ಗಾಯಕರು ಸಹ ಈ ಹಾಡಿನ ಸಾಹಿತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇದರ ಗಂಭೀರತೆಯನ್ನು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳನ್ನು ಪ್ರದರ್ಶಿಸಿರುವುದನ್ನು ಆಯೋಗವು ಆಕ್ಷೇಪಿಸಿದೆ ಎನ್ನಲಾಗಿದೆ.

ನೋಡಿರಿ

