UPI ಬಿಟ್ಟು ಕ್ಯಾಶ್ ವ್ಯವಹಾರ ಪರಿಹಾರನಾ? ವ್ಯಾಪಾರಸ್ಥರು GST ಕಟ್ಟದಿದ್ರೆ ಏನಾಗುತ್ತೆ?
ನೋಟಿಸ್ ಬಂದ್ರೆ ಏನ್ ಮಾಡ್ಬೇಕು?

UPI ಬಿಟ್ಟು ಕ್ಯಾಶ್ ವ್ಯವಹಾರ ಪರಿಹಾರನಾ?  ವ್ಯಾಪಾರಸ್ಥರು GST ಕಟ್ಟದಿದ್ರೆ ಏನಾಗುತ್ತೆ?ನೋಟಿಸ್ ಬಂದ್ರೆ ಏನ್ ಮಾಡ್ಬೇಕು?

ಹೆಂಗೋ ಸೆಣ್ಣ ಪುಟ್ಟ ವ್ಯಾಪಾರ ಮಾಡ್ಕೊಂಡ್ ಇದ್ವೇ ಸರ್‌..   ಜಿಎಸ್‌ಟಿ ಅಂತ ಹೇಳಿ ನಮ್ ಜೀವನನೇ ಬೀದಿಗೆ ತಂದ್ರೂ.. ನೋಟಿಸ್ ಕೊಟ್ಟು ಲಕ್ಷ ಲಕ್ಷ ಕಟ್ಟಿ ಅಂದ್ರೆ ನಾವ್ ಎಲ್ಲಿಗೆ ಹೋಗದ್ ಸರ್‌..  ಪೇಟಿಎಂ,  ಫೋನ್ ಪೇ,  ಗೂಗಲ್ ಪೇ ಅಂತ ನಮ್ ತಲೆ ಮೇಲೆ ನಾವೇ ಚಪ್ಪಲಿಕಲ್ಲು ಎಳೆಕೊಂಡ್ವೇ ಸರ್ ಅಂತ ಬೇಕರಿ, ಟೀ ಅಂಗಡಿ, ಹಾಲು, ತರಕಾರಿ ಅಂಗಡಿಗಳ ಮಾರಾಟಗಾರರು  ತಮ್ಮ ನೋವುನ್ನ ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಬೀಚ್‌ನಲ್ಲಿ ಐಷಾರಾಮಿ ಕಾರಿನ ಜೊತೆ ಸ್ಟಂಟ್‌! – ಆಮೇಲೆ ಏನಾಯ್ತು ಗೊತ್ತಾ?

ಬೇಕರಿ, ಟೀ ಅಂಗಡಿ, ತರಕಾರಿ ಅಂಗಡಿಗಳ ಮಾರಾಟಗಾರರೂ ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳಲ್ಲಿ ಜಿಎಸ್‌ಟಿ ಭಯ ಹುಟ್ಟಿಸಿದೆ. ರಾಜ್ಯದ ಅನೇಕ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ಬರೆ ಬಿದ್ದಿದೆ..ಕಂಗಾಲಾದ  ವ್ಯಾಪರಸ್ಥರು ಫೋನ್‌ಪೇ, ಗೂಗಲ್‌ ಪೇ ಸೇರಿದಂತೆ ಯಾವ ಪೇ ಗಳ ಸಹವಾಸವೇ ನಮಗೆ ಬೇಡ, ಕ್ಯಾಶ್‌ ಮಾತ್ರ ಕೊಡಿ ಎಂದು ವ್ಯಾಪಾರಿಗಳು ನೇರವಾಗಿ ಗ್ರಾಹಕರ ಹತ್ತಿರ ಕೇಳುತ್ತಿದ್ದಾರೆ.  ಕ್ಯಾಶ್ ಇಲ್ಲ ಅಂದ್ರೆ ಫೋನ್ ಪೇ ಮಾಡಿ ಸರ್‌ ಗೂಗಲ್ ಪೇ ಮಾಡಿ ಸರ್‌.. ಚೇಂಜ್ ಇಲ್ಲ ಅಂದ್ರೆ ಆನ್‌ಲೈನ್ ಪೇಮೆಂಟ್‌ ಮಾಡಿ ಅಂತ ಇಷ್ಟು  ಹಾಲು, ಗುಟ್ಕಾ, ಸಿಗರೇಟು, ಹಾಲು, ಚಹಾ, ಬೇಕರಿ, ತರಕಾರಿ ವ್ಯಾಪಾರಿಗಳು ಹೇಳತ್ತಿದ್ದರು.. ಆದ್ರೆ ಯಾವಾಗ ಸರ್ಕಾರದಿಂದ ಇವರಿಗೆಲ್ಲಾ ಜಿಎಸ್‌ಟಿ ದಂಡ ಮತ್ತು ಬಡ್ಡಿ ಕಟ್ಟುವಂತೆ ನೋಟಿಸ್ ಬಂತೋ.. ಸಾಕಪ್ಪ ಸಾಕು ಜಿಎಸ್‌ಟಿ ಸಹವಾಸ ಸಾಕು ಎನ್ನುತ್ತಿದ್ದಾರೆ.

ಯಾರಿಗೆ ಜಿಎಸ್‌ಟಿ ನೋಟಿಸ್ ಬಂದಿದೆ?

ಸಾಕಷ್ಟು ಜನಕ್ಕೆ ಗೊಂದಲವಿದೆ ಯಾಕೆ ನಮ್ಗೆ ನೋಟಿಸ್ ನೀಡುತ್ತಿದ್ದಾರೆ ಅನ್ನೋ ಗೊಂದಲವಿದೆ. ಒಂದು ಆರ್ಥಿಕ ವರ್ಷದಲ್ಲಿ ನಡೆಯುವ ಸೇವೆಗೆ ಸಂಬಂಧಿಸಿದ ವಹಿವಾಟಿನ ಮೊತ್ತ ₹20 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಂತಹ ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಮಾಡುವ ಅವಶ್ಯಕತೆ ಇಲ್ಲ. ಅದೇ ರೀತಿ, ವಾರ್ಷಿಕ ಸರಕು ವಹಿವಾಟಿನ ಮೊತ್ತ ₹40 ಲಕ್ಷದವರೆಗೆ ಇದ್ದರೆ ನೋಂದಣಿ ಮಾಡಬೇಕಾಗಿಲ್ಲ. ಒಂದು ವೇಳೆ ಸೇವೆ ಮತ್ತು ಸರಕು ವ್ಯವಹಾರದ ಮಿತಿಯು ಇದನ್ನು ಮೀರಿದ್ದರೆ, ಜಿಎಸ್‌ಟಿ ನೋಂದಣಿ ಮತ್ತು ತೆರಿಗೆ ಪಾವತಿಸುವುದು ಕಡ್ಡಾಯ. ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೆ, ವಾರ್ಷಿಕವಾಗಿ ಈ ಮಿತಿಗಿಂತ ಹೆಚ್ಚು ವಹಿವಾಟು ನಡೆಸಿದವರಿಗೆ ಈಗ ನೋಟಿಸ್ ಬಂದಿದೆ. ಜಿಎಸ್‌ಟಿ 2017ರಲ್ಲಿ ಜಾರಿಗೆ ಬಂದಿದ್ದರೂ ಆಗಿನಿಂದ ನೀಡದೆ, 2020ರಿಂದ ನೋಟಿಸ್‌ ಯಾಕೆ ಕೊಟ್ಟದ್ದು ಎನ್ನುವ ಪ್ರಶ್ನೆಯೂ ಇದೆ. 2020ರ ನಂತರ ನಡೆದಿದ್ದ ಯುಪಿಐ ವಹಿವಾಟು ಆಧರಿಸಿ ನೋಟಿಸ್ ನೀಡಲಾಗಿದೆ ಎಂಬ ವಿಷಯವನ್ನು ವಾಣಿಜ್ಯ ತೆರಿಗೆ ಇಲಾಖೆಯೇ ಹೇಳಿದೆ.

ನೋಟಿಸ್ ಕೊಟ್ಟಿದ್ದು ಕೇಂದ್ರನಾ? ರಾಜ್ಯನಾ?

 ಇನ್ನೂ ಜಿಎಸ್‌ಟಿ ಕೇಂದ್ರಕ್ಕೆ ಸೇರುತ್ತೆ ರಾಜ್ಯಕ್ಕೆ ಅಲ್ಲ ಆದ್ರೂ ರಾಜ್ಯ ಸರ್ಕಾರದ ಇಲಾಖೆಯಿಂದ ಯಾಕೆ ನೋಟಿಸ್ ಬಂತು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ.. ಅಂದಹಾಗೇ  ರಾಜ್ಯದಲ್ಲಿ ಇದುವರೆಗೆ ಬಂದ ನೋಟಿಸ್‌ಗಳನ್ನು ಆಧರಿಸಿ ಹೇಳುವುದಾದರೆ, ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ಗಳನ್ನು ನೀಡಿದೆ.   ಆದರೆ, ಸಂಗ್ರಹವಾಗುವ ಪ್ರತಿ ರೂಪಾಯಿ ತೆರಿಗೆಯಲ್ಲೂ ಕೇಂದ್ರಕ್ಕೆ ಶೇ 50 ಪಾವತಿಯಾಗುತ್ತದೆ.  ಆದ್ರೆ ಸರಕು ಮತ್ತು ಸೇವಾ ತೆರಿಗೆ ಕೇಂದ್ರ ಸರ್ಕಾರದ ನೇರ ವ್ಯಾಪ್ತಿಯಲ್ಲಿ ಇಲ್ಲ. ‘ಜಿಎಸ್‌ಟಿ ಕೌನ್ಸಿಲ್’ ಎನ್ನುವ ಪರೋಕ್ಷ ತೆರಿಗೆ ಮಂಡಳಿಯ ಅಡಿಯಲ್ಲಿ ಬರುತ್ತದೆ. ಕೇಂದ್ರ ಹಣಕಾಸು ಸಚಿವರು ಇದಕ್ಕೆ ಅಧ್ಯಕ್ಷರು. ಉಳಿದಂತೆ ಪ್ರತಿ ರಾಜ್ಯದ ಪ್ರತಿನಿಧಿ ಅಥವಾ ಹಣಕಾಸು ಮಂತ್ರಿ ಅಯಾ ರಾಜ್ಯದ ಸಮಸ್ಯೆಗಳನ್ನು, ಪ್ರಶ್ನೆಗಳನ್ನು ಮಂಡಳಿ ಸಭೆಯಲ್ಲಿ ಇರಿಸುತ್ತಾರೆ. ಅಲ್ಲಿ ಅಂಗೀಕಾರವಾದ, ಅನುಮೋದಿಸಲ್ಪಟ್ಟ ವಿಷಯಗಳನ್ನು ಮಾತ್ರ ಜಾರಿಗೆ ತರಲಾಗುತ್ತದೆಯೇ ವಿನಾ, ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಿಲಿ ತೀರ್ಮಾನ ಕೈಗೊಳ್ಳುವುದಕ್ಕೆ ಆಗುವುದಿಲ್ಲ.

 ನೋಟಿಸ್ ಬಂದ್ರೂ ಭಯ ಬೇಡ

ನೋಟಿಸ್ ಬಂದಿದೆ ಅಂತ ನೀವು ಭಯ ಪಡೋದು ಬೇಡ.   ಜಿಎಸ್ಟಿ ಸಂಪೂರ್ಣ ವಿನಾಯಿತಿ ಇರುವ ಹಣ್ಣು, ತರಕಾರಿ, ಹಾಲು ಮುಂತಾದ ಉತ್ಪನ್ನಗಳೂ ಇವೆ. ಮತ್ತೊಂದೆಡೆ ಶೇ.28ರಷ್ಟು ಜಿಎಸ್ಟಿ ಇರುವ ಗುಟ್ಕಾ ಮತ್ತು ಸಿಗರೇಟು ಉತ್ಪನ್ನಗಳೂ ಇವೆ. ಹೀಗಾಗಿ, ವರ್ತಕರು ತಮ್ಮದು ಯಾವ ವ್ಯಾಪಾರ ಎಂದು ತಿಳಿಸಿದರೆ ತೆರಿಗೆ ಕಡಿಮೆಯಾಗುತ್ತದೆ.

ನೋಟಿಸ್‌ಗೆ ಉತ್ತರಿಸುವುದು ಹೇಗೆ?

ನೋಟಿಸ್‌ ಬಂದ ತಕ್ಷಣ ಭಯಭೀತರಾಗದೆ ನಿಮ್ಮ ಯುಪಿಐ ವಹಿವಾಟಿನ ವಿವರಗಳನ್ನು ಆಯಾ ಆರ್ಥಿಕ ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದು ಅದರಲ್ಲಿ ಬಂದಿರುವುದೆಲ್ಲಾ ವ್ಯಾಪಾರದ ಹಣವಾ? ಬೇರೆ ಸಾಲಗಳಿದ್ದವೇ? ನಗದು ಠೇವಣಿ ಇದೆಯೇ? ನೀವು ಯಾವ ವಸ್ತುಗಳನ್ನು ಮಾರುತ್ತಿದ್ದೀರಿ? ಹೀಗೆ ಪ್ರತಿಯೊಂದು ವಿವರವನ್ನೂ ನೋಟಿಸ್‌ ಕೊಟ್ಟ ಅಧಿಕಾರಿಗೆ ಉತ್ತರಿಸಬೇಕು. ಇಲ್ಲದಿದ್ದರೆ ನಿಮ್ಮದೇನೂ ತಕರಾರಿಲ್ಲ ಎಂದು ಅಧಿಕಾರಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಆದೇಶ ಮಾಡಲು ಅವಕಾಶವಿದೆ. ನಿಮ್ಗೆ ನೋಟಿಸ್‌ಗೆ ಉತ್ತರಿಸಲು 7 ದಿನ ಅಥವಾ ಇನ್ನೂ ಹೆಚ್ಚಿನ ಕಾಲಾವಕಾಶವಿದೆ.

ಇನ್ನೂ ಕೆಲವರು ಏನ್ ಮಾಡ್ತಿದ್ದಾರೆ ಅಂದ್ರೆ ನೋಟಿಸ್ ಬಂದಿರೋ ಅನ್ನೋ ಭಯಕ್ಕೆ ಗ್ರಾಹಕರಿಗೆ ಡಿಜಿಟಲ್ ಪೆಮೇಂಟ್ ಮಾಡಬೇಕು.. ಕ್ಯಾಶ್ ಕೊಡಿ ಅಂತಿದ್ದಾರೆ. ಆದ್ರೆ ಇದು ಪರಿಹಾರ ಅಲ್ಲ..  ಮೊದಲು ನೋಟಿಸ್‌ಗೆ ಉತ್ತರಿಸಬೇಕು. ನಂತರ ಇಲಾಖೆಯ ಅಧಿಕಾರಿಯು ನೀವು ಕೊಡುವ ಉತ್ತರ, ಅದಕ್ಕೆ ಸಂಬಂಧಿಸಿದ ದಾಖಲೆ ಎಲ್ಲವನ್ನೂ ಪರಿಶೀಲಿಸಿ ನೀವು ತೆರಿಗೆ ಕಟ್ಟಬೇಕಾ, ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕಾ ಎಂಬ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಯಾವ ಉತ್ತರವನ್ನೂ ನೀಡದೆ ಹೋದರೆ ಜಿಎಸ್‌ಟಿ ಕಾಯ್ದೆ ಪ್ರಕಾರ, ನೀವೇ ತೆರಿಗೆ ವಂಚಿಸಿದ್ದೀರಿ ಎಂದು ಕ್ರಮ ಕೈಗೊಳ್ಳಲೂಬಹುದು. ಹಾಗಾಗಿ ನಾನ್ಯಾಕೆ ಉತ್ತರಿಸಲಿ  ಎನ್ನುವುದಕ್ಕಿಂತ ನಿಮ್ಮ ಉತ್ತರ ಲಿಖಿತ ರೂಪದಲ್ಲಿ ತೆರಿಗೆ ಇಲಾಖೆಯ ಕಚೇರಿಗೆ ಸಲ್ಲಿಸುವುದು ಸೂಕ್ತ.

Kishor KV