ಮೇ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಬಿಗ್ಶಾಕ್! – LPG ಸಿಲಿಂಡರ್ ಬೆಲೆ 993 ರೂ. ಹೆಚ್ಚಳ!

ತಿಂಗಳ ಮೊದಲ ದಿನವೇ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಭಾರಿ ಏರಿಕೆ ಮಾಡಲಾಗಿದೆ. 19 ಕೆಜಿಯ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 993 ರೂ. ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 2,078.50 ರೂ. ನಿಂದ 3,071.50 ರೂ. ಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಕೈಲಾಸ ಯಾತ್ರೆಗೆ ನೋಂದಣಿ ಆರಂಭ – 60 ವರ್ಷಗಳ ಬಳಿಕ ಸಂಭವಿಸಲಿದೆ ದೈವಿಕ ಸಂಯೋಗ!
ಮಧ್ಯಪ್ರಾಚ್ಯ ಯುದ್ದದ ಎಫೆಕ್ಟ್ನಿಂದಾಗಿ LPG ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಬಳಕೆ ಮಾಡುವ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ. 19 ಕೆಜಿಯ ವಾಣಿಜ್ಯ ಎಲ್ಪಿಜಿ ಬೆಲೆಯನ್ನು ಸರಾಸರಿಯಾಗಿ 993 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 3,071.50 ರೂ. ಗೆ ಏರಿಕೆಯಾಗಿದ್ದು, ಹಿಂದಿನ ದರ 2,078.50 ರೂ. ಆಗಿತ್ತು. ಮುಂಬೈನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 2,031 ರೂ. ಗಳಿಂದ 3,024 ರೂ. ಗೆ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ. ದೇಶೀಯ ಅಡುಗೆ ಅನಿಲದ ಬೆಲೆ ಹೆಚ್ಚಳ ಮಾಡದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇರಾನ್ ಯುದ್ಧ ಪ್ರಾರಂಭವಾದ ಬಳಿಕ ಅಂದರೆ ಕಳೆದ ಫೆಬ್ರವರಿ 28 ರಿಂದ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ಮೂರು ಬಾರಿ ಹೆಚ್ಚಿಸಲಾಗಿದೆ. ಮಾರ್ಚ್ನಲ್ಲಿ ಆರಂಭದಲ್ಲಿ 144 ರೂ., ಏಪ್ರಿಲ್ 1 ರಂದು 200 ರೂ. ಹೆಚ್ಚಳ ಮಾಡಲಾಗಿದ್ದು, ಈಗ 993 ರೂ. ಹೆಚ್ಚಿಸಲಾಗಿದೆ. ಇದರಿಂದ ದಿನನಿತ್ಯದ ಕಾರ್ಯಾಚರಣೆಗಳಿಗೆ ಅಡುಗೆ ಇಂಧನವನ್ನು ಅವಲಂಬಿಸಿರುವ ಹೊಟೇಲ್, ರೆಸ್ಟೋರೆಂಟ್, ತಿನಿಸು ಮಳಿಗೆಗಳು ಮತ್ತು ಇತರ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಗ್ರಾಹಕರಿಗೆ ಹೊರೆಯಾಗಲಿದೆ.
ಈ ನಡುವೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿಲ್ಲ. ವಾಯುಯಾನ ವಲಯವು ಕೂಡ ಬೆಲೆ ಹೆಚ್ಚಳದ ಹೊರೆಯಿಂದ ಮುಕ್ತವಾಗಿದೆ. ಯಾಕೆಂದರೆ ದೇಶೀಯ ವಿಮಾನಯಾನ ಸಂಸ್ಥೆಗಳ ನಿಗದಿತ ಕಾರ್ಯಾಚರಣೆಗಳಿಗೆ ವಾಯುಯಾನ ಟರ್ಬೈನ್ ಇಂಧನ ಬೆಲೆಗಳಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.
14.2 ಕೆಜಿ ಯ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಇದರ ದರ ನವದೆಹಲಿಯಲ್ಲಿ 913 ರೂ., ಕೋಲ್ಕತ್ತಾದಲ್ಲಿ 939 ರೂ., ಮುಂಬೈ 912.50 ರೂ. ಚೆನ್ನೈ 928.50 ರೂ., ಗುರುಗ್ರಾಮ್ 921.50 ರೂ., ನೋಯ್ಡಾ 910.50 ರೂ., ಬೆಂಗಳೂರು 915.50 ರೂ., ಭುವನೇಶ್ವರ 939.00 ರೂ., ಚಂಡೀಗಢ 922.50 ರೂ., ಹೈದರಾಬಾದ್ 965 ರೂ., ಜೈಪುರ 916.50 ರೂ., ಲಕ್ನೋ 950.50 ರೂ., ಪಾಟ್ನಾ 1,002.50 ರೂ. ಆಗಿದೆ.
ಮನೆಗೆ ಬಳಸಲಾಗುವ ಅಡುಗೆ ಅನಿಲದ ಬೆಲೆ ಹೆಚ್ಚಳವಾಗದಿರುವುದು ಸಂತಸದ ವಿಚಾರವಾದರೂ ಕೂಡ ತೈಲ ಮಾರುಕಟ್ಟೆ ಕಂಪನಿಗಳು ಇದರ ಹೊರೆಯನ್ನು ತಾವೇ ಭರಿಸಬೇಕಿದೆ. ಇದರಿಂದಾಗಿ ಪ್ರತಿದಿನ ತೈಲ ಮಾರುಕಟ್ಟೆ ಕಂಪನಿಗಳಿಗೆ ಸರಿಸುಮಾರು 16,000 ಕೋಟಿ ರೂ. ವ್ಯಯವಾಗುತ್ತಿದೆ. ಯಾಕೆಂದರೆ ಅವು ಕಚ್ಚಾ ತೈಲವನ್ನು ಹೆಚ್ಚಿನ ದರದಲ್ಲಿ ಅಂದರೆ ಪ್ರತಿ ಬ್ಯಾರೆಲ್ಗೆ 120 ಡಾಲರ್ ಗಿಂತ ಹೆಚ್ಚು ಪಾವತಿ ಮಾಡಿ ಖರೀದಿ ಮಾಡುತ್ತಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್, ವಿಮಾನ ಟರ್ಬೈನ್ ಇಂಧನ ಮತ್ತು ಎಲ್ ಪಿಜಿ ಬೆಲೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ.
ಸರ್ಕಾರವು ಈ ನಿಟ್ಟಿನಲ್ಲಿ ಸ್ವಲ್ಪ ಕಾದು ನೋಡುವ ಕ್ರಮವನ್ನು ಅನುಸರಿಸುತ್ತಿದೆ. ಇದರಿಂದ ಮುಂದೆ ಹಣದುಬ್ಬರ ಉಂಟಾಗಿ ದೇಶದ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕವಿದೆ. ಈಗಾಗಲೇ ಎಲ್ ಪಿಜಿ ಮತ್ತು ರಸಗೊಬ್ಬರ ಸಬ್ಸಿಡಿಗಳ ಹೆಚ್ಚಿನ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ.
ದೇಶಿಯ ಎಲ್ಪಿಜಿಯ ಬೆಲೆ ಬದಲಾಗದೆ ಇದ್ದರೂ ನಗರಗಳಲ್ಲಿ ಈಗ 25 ದಿನಗಳ ಅನಂತರ ಮಾತ್ರ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತಿದೆ. ಹಿಂದೆ ಇದು 21 ದಿನಗಳಾಗಿತ್ತು. ಈ ನಡುವೆ ಮೇ 1 ರಿಂದ ಜಾರಿಗೆ ಬರುವಂತೆ ಭಾರತದ ಮೂರು ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಇಂಡೇನ್), ಭಾರತ್ ಪೆಟ್ರೋಲಿಯಂ (ಭಾರತ್ ಗ್ಯಾಸ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿ ಗ್ಯಾಸ್) ಹೊಸ ನಿಯಮಗಳನ್ನು ಅಂತಿಮಗೊಳಿಸಿವೆ. ಇದರಿಂದ ಎಲ್ಪಿಜಿ ಬುಕಿಂಗ್ಗಳ ನಡುವಿನ ಅಂತರವನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳವರೆಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸಲಾಗುತ್ತದೆ. ಇದರಿಂದ ಅಂತರ ಮುಗಿಯುವ ಮೊದಲು ಮಾಡುವ ಯಾವುದೇ ಬುಕಿಂಗ್ ಅನ್ನು ಸ್ವಯಂ ಚಾಲಿತವಾಗಿ ನಿರ್ಬಂಧಿಸಲಾಗುತ್ತದೆ.
ಹೊಸ ನಿರ್ದೇಶನಗಳ ಅಡಿಯಲ್ಲಿ ಗ್ರಾಹಕರು ಇನ್ನು ಮುಂದೆ ತಮ್ಮ ಸಿಲಿಂಡರ್ ಮರುಪೂರಣವನ್ನು ಬುಕ್ ಮಾಡಿದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನೀಡಿಯೇ ಸ್ವೀಕರಿಸಬೇಕು. ಭೌತಿಕ ನೀಲಿ ಪುಸ್ತಕ ಅಥವಾ ರಶೀದಿ ತೋರಿಸಿ ಸಿಲಿಂಡರ್ ಪಡೆಯಲು ಸಾಧ್ಯವಾಗುವುದಿಲ್ಲ.

ನೋಡಿರಿ

