LSG ನಾಯಕತ್ವಗೆ ಕೆ‌ಎಲ್ ಗುಡ್ ಬೈ? – RCB ಗೆ ಬರ್ತಾರಾ ಕೆ.ಎಲ್ ರಾಹುಲ್?
ಕನ್ನಡಿಗನ ಕಣ್ಣೀರಿಗೆ ಕರಗಿದ ಕರ್ನಾಟಕ 

LSG ನಾಯಕತ್ವಗೆ ಕೆ‌ಎಲ್ ಗುಡ್ ಬೈ? – RCB ಗೆ ಬರ್ತಾರಾ ಕೆ.ಎಲ್ ರಾಹುಲ್?ಕನ್ನಡಿಗನ ಕಣ್ಣೀರಿಗೆ ಕರಗಿದ ಕರ್ನಾಟಕ 

ಕ್ರಿಕೆಟ್ ಅನ್ನೋದು ಒಂದು ಜಂಟಲ್​ಮೆನ್ ಗೇಮ್. ಈ ಆಟದಲ್ಲಿ ಸೋಲು, ಗೆಲುವು ಕಾಮನ್. ಸೋತರೂ ಗೆದ್ದರೂ ಅದನ್ನ ಸ್ಫೋಟಿವ್ ಆಗಿ ತಗೊಳ್ಬೇಕು. ಅದನ್ನ ಬಿಟ್ಟು ಗೆದ್ದಾಗ ಕುಣಿದಾಡೋದು ಸೋತಾಗ ಕುಗ್ಗೋದು ಮಾಡಬಾರದು. ಇದು ಆಟಗಾರ ಆದ್ರೂ ಸರಿಯೇ.. ಮಾಲೀಕರಾದ್ರೂ ಸರಿಯೇ. ಅಷ್ಟೇ ಯಾಕೆ ಫ್ಯಾನ್ಸ್ ಆದ್ರೂ ಕೂಡ ಎರಡನ್ನೂ ಸಮನಾಗಿ ಸ್ವೀಕರಿಸ್ಬೇಕು. ಆದ್ರೆ, ಲಕ್ನೋ ಸೂಪರ್ ಜೇಂಟ್ಸ್ ನ ಒಂದು ಸೋಲು ಮಾಲೀಕನ ನಿಜಬಣ್ಣ ಬಯಲು ಮಾಡಿದೆ. ತಂಡದ ನಾಯಕನನ್ನ ನಡೆಸಿಕೊಂಡ ಬಗ್ಗೆ ಆಕ್ರೋಶ ಭುಗಿಲೆದ್ದಿದೆ. ಇದೇ ಈಗ ಕ್ಯಾಪ್ಟನ್ಸಿ ಬದಲಾವಣೆಯ ಹಂತಕ್ಕೂ ಬಂದಿದೆ. ಹಾಗಾದ್ರೆ ಎಲ್​ಎಸ್​ಜಿ ತಂಡದ ಕ್ಯಾಪ್ಟನ್ ಕೆ.ಎಲ್ ರಾಹುಲ್ ತಂಡ ತೊರೆಯೋದು ನಿಜನಾ? ಕನ್ನಡಿಗ ಆರ್​ಸಿಬಿಗೆ ಮರಳುತ್ತಾರಾ? ಧೋನಿ ಕೂಡ ಇಂಥದ್ದೇ ಸ್ಥಿತಿ ಅನುಭವಿಸಿದ್ರಾ..? ಈ ಬಗ್ಗೆ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಿಸಲ್ಟ್‌ ಗೂ ಮುನ್ನವೇ ಈಶ್ವರಪ್ಪಗೆ ಸೋಲಿನ ಭಯ – ಬಿಎಸ್‌ವೈ ಪುತ್ರನನ್ನು ಬಂಧಿಸಿ ಎಂದಿದ್ಯಾಕೆ?

ಭಾರತೀಯ ಕ್ರಿಕೆಟ್​​ನ ಪ್ರತಿಭಾವಂತ ಕ್ರಿಕೆಟಿಗ ಕೆ.ಎಲ್ ರಾಹುಲ್ ತಾನೆಂಥ ಬ್ಯಾಟರ್​ ಅನ್ನೋದನ್ನು ಹಲವು ಸಲ ಪ್ರೂವ್ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲೂ ಬಿಗ್ ಸ್ಕೋರ್ ಗಳಿಸಿದವರಲ್ಲಿ ರಾಹುಲ್ ಕೂಡ ಒಬ್ರು. ಸದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಆಗಿದ್ದು, ಮೊದಲ ಎರಡು ಸೀಸನ್‌ಗಳಲ್ಲಿ ಪ್ಲೇಆಫ್‌ಗೆ ಮುನ್ನಡೆಸಿದ್ದಾರೆ. ಆದ್ರೆ ಮೇ 8ರಂದು ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ನೇತೃತ್ವದ ಲಕ್ನೋ ತಂಡವು ಅತ್ಯಂತ ಹೀನಾಯ ಪ್ರದರ್ಶನ ತೋರಿತ್ತು. ಇದೇ ಪ್ರದರ್ಶನ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಸಿಟ್ಟಿಗೆ ಕಾರಣವಾಗಿತ್ತು. ಬಳಿಕ ತಾನೊಬ್ಬ ತಂಡದ ಮಾಲೀಕ, ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ, ಅದೆಲ್ಲದಕ್ಕಿಂತ ಹೆಚ್ಚಾಗಿ ಕ್ರೀಡಾಂಗಣದಲ್ಲಿ ಇದ್ದೇನೆ ಅನ್ನೋ ಪರಿಜ್ಞಾನವೂ ಇಲ್ಲದಂತೆ ವರ್ತಿಸಿದ್ರು. ಕೆ.ಎಲ್ ರಾಹುಲ್​ರನ್ನ ಎದುರಿಗೆ ನಿಲ್ಲಿಸಿಕೊಂಡು ಏರು ಧ್ವನಿಯಲ್ಲಿ ಬೈಯುತ್ತಾ ಸಣ್ಣ ಮಕ್ಕಳಿಗಿಂತಲೂ ಕಡೆಯಾಗಿ ನಡೆಸಿಕೊಂಡಿದ್ರು. ಗೋಯೆಂಕಾರ ಇದೇ ವರ್ತನೆ ಈಗ ಕ್ರಿಕೆಟ್ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದೆ. ಕ್ರಿಕೆಟರ್​ಗಳೇ ರೊಚ್ಚಿಗೆದ್ದಿದ್ದಾರೆ. ಇದೀಗ ಕೆ.ಎಲ್ ರಾಹುಲ್ ಆರ್​ಸಿಬಿ ಸೇರ್ತಾರೆ ಅನ್ನೋ ಚರ್ಚೆ ನಡೀತಿದೆ.

LSG ಗೆ ರಾಹುಲ್ ಗುಡ್ ಬೈ?

ಹೈದ್ರಾಬಾದ್ ವಿರುದ್ಧ ಮೇ 8ರಂದು ನಡೆದ ಪಂದ್ಯದಲ್ಲಿ ಎಲ್​ಎಸ್​ಜಿ ಕಳಪೆ ಪ್ರದರ್ಶನ ನೀಡಿ ಐತಿಹಾಸಿಕ ಸೋಲು ಕಂಡಿತ್ತು. ಇದ್ರಿಂದ ಕೋಪಗೊಂಡಿದ್ದ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿಯೇ ರಾಹುಲ್ ವಿರುದ್ಧ ಕೂಗಾಡಿದ್ದರು. ಇದೇ ಈಗ ಕ್ರಿಕೆಟರ್ಸ್ ಮತ್ತು ಫ್ಯಾನ್ಸ್ ಸಿಟ್ಟಗೆ ಕಾರಣವಾಗಿದ್ದು, ಎಲ್​ಎಸ್​ಜಿ ತಂಡವನ್ನ ತೊರೆಯುವಂತೆ ರಾಹುಲ್​ಗೆ ಒತ್ತಾಯಿಸಿದ್ದಾರೆ. ಅದ್ರಲ್ಲೂ ಆರ್​ಸಿಬಿ ಫ್ಯಾನ್ಸ್ ಅಂತೂ ನೀವು ನಮ್ಮ ಕನ್ನಡಿಗ. ನಿಮ್ಮ ಪ್ರತಿಭೆ ಎಂಥಾದ್ದು ಅನ್ನೋದು ನಮಗೆ ಗೊತ್ತಿದೆ. ದಯವಿಟ್ಟು ಆರ್​ಸಿಬಿಗೆ ಬಂದು ಬಿಡಿ ಅಂತಾ ಮನವಿ ಮಾಡ್ತಿದ್ದಾರೆ. ಕೆ.ಎಲ್.ರಾಹುಲ್​ಗೆ ಮುಂದಿನ ಎರಡು ಪಂದ್ಯಗಳಿಗೆ ಕೊಕ್ ನೀಡಿ, ವೆಸ್ಟ್​​ ವಿಂಡೀಸ್ ಪ್ರತಿಭೆ ನಿಕೊಲಸ್ ಪೂರನ್​​ಗೆ ಕ್ಯಾಪ್ಟನ್ಸಿ ನೀಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ವದಂತಿಯನ್ನು ಎಲ್​​ಎಸ್​ಜಿ ತಂಡದ ಅಧಿಕಾರಿಯೊಬ್ಬರು ತಳ್ಳಿ ಹಾಕಿದ್ದಾರೆ. ನಮ್ಮ ಬಳಿ ಅಂತಹ ಯಾವುದೇ ಯೋಜನೆಗಳು ಇಲ್ಲ ಎಂದಿದ್ದಾರೆ. ಅಲ್ದೇ ಈ ಟೂರ್ನಿ ಬಳಿಕ ಕೆಎಲ್ ರಾಹುಲ್ ಅವರನ್ನು ಫ್ರಾಂಚೈಸಿಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇಲ್ಲಾಂದ್ರೆ ರಾಹುಲ್ ಅವ್ರೇ ಎಲ್​ಎಸ್​ಜಿ ತಂಡದಿಂದ ಹೊರಬರುವ ಎಲ್ಲಾ ಚಾನ್ಸಸ್ ಇದೆ. ಒಂದು ವೇಳೆ ಕರ್ನಾಟಕದ ಈ ಆಟಗಾರ ಮೆಗಾ ಹರಾಜಿಗೆ ಬಂದಿದ್ದೇ ಆದರೆ ಬೃಹತ್ ಮೊತ್ತಕ್ಕೆ ಸೇಲ್ ಆಗುವುದು ಖಚಿತ. ಆರ್​ಸಿಬಿ ತಂಡಕ್ಕೆ ಸೇರಿಸಿಕೊಳ್ಳಲು ಒಂದೊಳ್ಳೆ ಅವಕಾಶ ಇರಲಿದೆ.

ಅಷ್ಟಕ್ಕೂ ಈ ಗೋಯೆಂಕಾ ತಲೆ ಕೆಟ್ಟವರಂತೆ ಆಡೋದು ಇದೇ ಮೊದಲೇನಲ್ಲ. 2016ರ ಐಪಿಎಲ್​ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್​ ತಂಡದ ಮಾಲೀಕರಾಗಿದ್ರು. ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಆಗಿದ್ರು. ಆದ್ರೆ ತಂಡದ ಪ್ರದರ್ಶನ ನೀರಸವಾಗಿತ್ತು ಅಂತಾ ಧೋನಿಯನ್ನ ಕೆಳಗಿಳಿಸಿ ಸ್ಟೀವ್ ಸ್ಮಿತ್​ಗೆ ನಾಯಕನ ಪಟ್ಟ ಕಟ್ಟಿದ್ರು. ಇದೀಗ ಲಕ್ನೋ ಫ್ರಾಂಚೈಸಿ ಮಾಲೀಕ ಅಂದು ತಾಳಿದ ನಿಲುವನ್ನೇ ರಾಹುಲ್ ವಿಚಾರಲ್ಲೂ ತಾಳುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಸದ್ಯ ಲಕ್ನೋ ಇದುವರೆಗೆ ಐಪಿಎಲ್​ನಲ್ಲಿ ಮೂರು ಆವೃತ್ತಿಗಳನ್ನು ಆಡಿದೆ. ಇದರಲ್ಲಿ ತಂಡ ಸತತವಾಗಿ 2 ಬಾರಿ ಪ್ಲೇಆಫ್‌ ಆಡಿದೆ. ಆದರೆ ಆರ್​ಸಿಬಿ, ಪಂಜಾಬ್, ಡೆಲ್ಲಿಯಂತಹ ತಂಡಗಳು 17 ವರ್ಷಗಳಿಂದ ಐಪಿಎಲ್ ಆಡುತ್ತಿವೆ. ಈ ತಂಡಗಳು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ತಂಡದ ಮಾಲೀಕರು ಒಮ್ಮೆಯೂ ನಾಯಕನ ಬಳಿ ಬಹಿರಂಗವಾಗಿ ಹೀಗೆ ನಡೆದುಕೊಂಡಿಲ್ಲ. ಮೊದಲ ಆವೃತ್ತಿಯಲ್ಲಿ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿಯನ್ನು ನಾಯಕರನ್ನಾಗಿ ಮಾಡಿತ್ತು. ಆದರೆ ಧೋನಿ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಧೋನಿಯನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ ಸ್ಟೀವ್ ಸ್ಮಿತ್​ರನ್ನು ನಾಯಕರನ್ನಾಗಿ ನೇಮಿಸಿದ್ದರು. ಆದರೆ ಇದಾದ ನಂತರವೂ ತಂಡ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ 2025ರ ಮೆಗಾ ಹರಾಜಿನಲ್ಲಿ ಆರ್​ಸಿಬಿ ಹಲವು ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. 2025ರ ಐಪಿಎಲ್​ನಲ್ಲಿ ಹೊಸದಾಗಿ ಪ್ರಾರಂಭಿಸಲು ಆರ್​ಸಿಬಿ, ಚಿಂತನೆ ನಡೆಸಿದೆ. ಪ್ರಸ್ತುತ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನೂ ಸಹ ಕೈಬಿಡುವುದು ಖಚಿತವಾಗಿದೆ. ಹಾಗಾಗಿ ನೂತನ ನಾಯಕನ ಹುಟುಕಾಟ ನಡೆಸಲಿದೆ. ಒಂದು ವೇಳೆ ರಾಹುಲ್ ಮೆಗಾ ಹರಾಜಿಗೆ ಬಂದರೆ ಆರ್​ಸಿಬಿ ಆತನ ಮೇಲೆ ಬಿಡ್ ಮಾಡಬಹುದು. ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಿರಲಿದೆ. ಅಲ್ದೇ ರಾಹುಲ್​ಗೂ ಕೂಡ ಆರ್​ಸಿಬಿ ಹೊಸದೇನು ಅಲ್ಲ.

RCB ಗೆ ಮರಳುತ್ತಾರಾ ರಾಹುಲ್?  

2013ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಕೆ.ಎಲ್ ರಾಹುಲ್ ಈವರೆಗೂ ನಾಲ್ಕು ಫ್ರಾಂಚೈಸಿಗಳ ಪರ ಆಡಿದ್ದಾರೆ. ಮೊದಲ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಾಗಿ ಆಡಿದ್ರು. ಬಳಿಕ 2014 ಮತ್ತು 2015 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಭಾಗವಾಗಿದ್ದರು. 2016 ರಲ್ಲಿ ಮತ್ತೆ RCB ಗೆ  ಸೇರ್ಪಡೆಯಾದ ರಾಹುಲ್ ಗಾಯದ ಕಾರಣದಿಂದ 2017ರ ಐಪಿಎಲ್ ಸೀಸನ್ ಮಿಸ್ ಮಾಡಿಕೊಂಡ್ರು. ನಂತ್ರ 2018 ರಿಂದ 2021 ರವರೆಗೆ ಪಂಜಾಬ್ ಕಿಂಗ್ಸ್  ನಲ್ಲಿ ಆಡಿದ್ರು. ಬಳಿಕ 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಆಗಿ ಮುನ್ನಡೆಸುತ್ತಿದ್ದಾರೆ. ಬೇರೆ ಟೀಮ್​ಗಾಗಿ ಆಡುತ್ತಿದ್ರೂ ರಾಹುಲ್​ಗೆ ಆರ್​​ಸಿಬಿ ಪರ ಆಡುವ ಮಹದಾಸೆ ಇದೆ. ಇತ್ತೀಚೆಗಷ್ಟೇ ಈ ಬಗ್ಗೆ ಹೇಳಿಕೊಂಡಿದ್ದರು. ನಾನು ಮೊದಲು ಕರ್ನಾಟಕದ ಆಟಗಾರ. ಅದರಲ್ಲೂ ಬೆಂಗಳೂರಿನವ. ಈ ಅಂಶಗಳನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನನಗೆ ತವರು ಮನೆ ಎಂದಿದ್ರು.

ಇತ್ತ ಫ್ಯಾನ್ಸ್ ಕೂಡ ರಾಹುಲ್​ರನ್ನ ಆರ್​ಸಿಬಿಗೆ ಕರೆಸಿಕೊಳ್ಳಿ ಅಂತಿದ್ದಾರೆ. ದುಡ್ಡು ಬೇಕಾದ್ರೆ ನಾವೇ ಕೊಡ್ತೀವಿ. ಮುಂದಿನ ಸಲ ಆರ್‌ಸಿಬಿಗೆ ರಾಹುಲ್‌ರನ್ನ ವಾಪಸ್‌ ಕರೆಸಿ ಪ್ಲೀಸ್ ಅಂತ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಫ್ಯಾನ್ಸ್ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಹುಲ್‌ರನ್ನ ಈ ಥರ ನೋಡೋದಕ್ಕೆ ಆಗಲ್ಲ ಅಂತಿದ್ದಾರೆ. ಸದ್ಯ ಲಕ್ನೋ ಸೂಪರ್ ಜೇಂಟ್ಸ್ ತಂಡದ ಮಾಲೀಕನ ಹುಚ್ಚಾಟ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕ್ರಿಕೆಟರ್​ಗಳಾದ ಎಸ್.ಬದ್ರಿನಾಥ್​, ಮೊಹಮ್ಮದ್ ಶಮಿ ಸೇರಿದಂತೆ ಹಲವು ಆಟಗಾರರು ಕೆ.ಎಲ್ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ. ಆಟಗಾರರಿಗೆ ಬೆಲೆ ಇಲ್ಲವೇ ಎಂದು ಮಾಲೀಕನನ್ನ ಪ್ರಶ್ನಿಸಿದ್ದಾರೆ. ಹೀಗಾಗಿ ರಾಹುಲ್ ಲಕ್ನೋ ತಂಡವನ್ನ ತೊರೆಯೋ ಎಲ್ಲಾ ಸಾಧ್ಯತೆಯೂ ಇದೆ. ಹಾಗೇನಾದ್ರೂ ತೊರೆದ್ರೆ ಆರ್​ಸಿಬಿಗೆ ಖರೀದಿಸಲು ಒಂದೊಳ್ಳೆ ಅವಕಾಶವೂ ಸಿಗಲಿದೆ.

Shwetha M