ಡೊನಾಲ್ಡ್‌ ಟ್ರಂಪ್‌ ಗೆ ದೊಡ್ಡ ಶಾಕ್‌! – ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹಗೊಳಿಸಿದ ಕೋರ್ಟ್‌!

ಡೊನಾಲ್ಡ್‌ ಟ್ರಂಪ್‌ ಗೆ ದೊಡ್ಡ ಶಾಕ್‌! – ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹಗೊಳಿಸಿದ ಕೋರ್ಟ್‌!

ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷಗಿರಿ ಪಡೆಯಲು ಕನಸು ಕಾಣುತ್ತಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕನಸು ಭಗ್ನವಾಗಿದೆ. ಡೊನಾಲ್ಡ್‌ ಟ್ರಂಪ್‌ಗೆ ಕೊಲೊರಾಡೊ ಸುಪ್ರೀಂಕೋರ್ಟ್ ದೊಡ್ಡ ಶಾಕ್‌ ನೀಡಿದೆ. ಮುಂದಿನ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಟ್ರಂಪ್ ಅವರನ್ನು ಕೋರ್ಟ್ ಅನರ್ಹಗೊಳಿಸಿದೆ.

ಹೌದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸಲು ಮುಂದಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕೊಲೊರಾಡೋ ಕೋರ್ಟ್ ಅನರ್ಹಗೊಳಿಸಿದೆ. ಕ್ಯಾಪಿಟಲ್‌ ಹಿಲ್‌ ದಂಗೆಯಲ್ಲಿ ಟ್ರಂಪ್‌ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್‌ ಆದೇಶ ಪ್ರಕಟಿಸಿದೆ. ಆದೇಶವನ್ನು ಪ್ರಶ್ನಿಸಲು ಜ.4ರವರೆಗೆ ಮೇಲ್ಮನವಿ ಸಲ್ಲಿಸಲು ಟ್ರಂಪ್‌ಗೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಆರ್ಭಟ – 9 ದಿನಗಳಲ್ಲಿ ಕೋವಿಡ್ ಪ್ರಕರಣ ದ್ವಿಗುಣ

ಅಮೆರಿಕದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷರೊಬ್ಬರನ್ನು ಚುನಾವಣೆಯಿಂದಲೇ ಅನರ್ಹಗೊಳಿಸಿದ್ದು ಇದೇ ಮೊದಲು. ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್‌ ವಕ್ತಾರರು, ಇದೊಂದು ಸಂಪೂರ್ಣ ದೋಷಪೂರಿತ ಆದೇಶ. ಈ ತೀರ್ಪನ್ನು ಪ್ರಶ್ನಿಸಿ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಏನಿದು ಪ್ರಕರಣ?

2021ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ಟ್ರಂಪ್‌ ಪ್ರಚೋದನಕಾರಿ ಭಾಷಣ ಮಾಡಿದ್ದರು. ಭಾಷಣದಿಂದ ಪ್ರಭಾವಿತರಾಗಿ 2 ಸಾವಿರಕ್ಕೂ ಹೆಚ್ಚು ಟ್ರಂಪ್‌ ಬೆಂಬಲಿಗರು ಜನವರಿ 6 ರಂದು ಅಮೆರಿಕದ ಸಂಸತ್‌ ಕಟ್ಟಡ ಅಥವಾ ಕ್ಯಾಪಿಟಲ್‌ ಹಿಲ್‌ ಮೇಲೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಸಂಬಂಧ ವಾಷಿಂಗ್ಟನ್‌ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಈ ಸಂಬಂಧ ಟ್ರಂಪ್‌ ವಿರುದ್ಧ ಕೇಸ್‌ ದಾಖಲಾಗಿತ್ತು. ಇದೀಗ ಈ ಪ್ರಕರಣದ ಸಂಬಂಧ ಕೋರ್ಟ್‌ ತೀರ್ಪು ನೀಡಿದ್ದು, ಮುಂದಿನ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಟ್ರಂಪ್ ಅವರನ್ನು ಕೋರ್ಟ್ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.

Shwetha M