ಸಿಲಿಕಾನ್ ಸಿಟಿಯಲ್ಲಿ ಚಳಿ ಚಳಿ – ರಾಜ್ಯದ ಹಲವೆಡೆ ಬೀಸಲಿದೆ ಶೀತಗಾಳಿ
ಕರ್ನಾಟಕಕ್ಕೆ ಶೀತಮಾರುತ ಬೀಸಲಿದೆ - ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಸಿಲಿಕಾನ್ ಸಿಟಿಯಲ್ಲಿ ಚಳಿ ಚಳಿ – ರಾಜ್ಯದ ಹಲವೆಡೆ ಬೀಸಲಿದೆ  ಶೀತಗಾಳಿಕರ್ನಾಟಕಕ್ಕೆ ಶೀತಮಾರುತ ಬೀಸಲಿದೆ - ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಕೆಲದಿನಗಳಿಂದ ರಾಜದಾನಿ ಬೆಂಗಳೂರು ಕೂಲ್ ಆಗಿದೆ. ಅದರಲ್ಲೂ ಮುಂಜಾನೆ ಮತ್ತು ಸಂಜೆ ಹೊತ್ತಲ್ಲಿ ಜನ ಚಳಿಯಿಂದ ನಡುಗುತ್ತಿದ್ದಾರೆ.  ಶೀತಮಾರುತಗಳ ಪ್ರಭಾವದಿಂದ ಬೆಂಗಳೂರಿನಲ್ಲಿಯೂ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಈ ಋತುಮಾನದ ಚಳಿಗಾಲದಲ್ಲಿ ಇದೇ ಮೊದಲ ಬಾರಿಗೆ ಹವಾಮಾನ ಇಲಾಖೆ ಕೂಡಾ ಶೀತಮಾರುತದ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದ್ದು, ಉಷ್ಣಾಂಶವು 5.5 ಡಿಗ್ರಿ ಸೆಲ್ಸಿಯಸ್​ಗೆ ಕುಸಿಯಬಹುದು ಎಂದು ತಿಳಿಸಿದೆ. ಯಾವುದೇ ಎರಡು ಹವಾಮಾನ ಮಾಪಕ ಕೇಂದ್ರಗಳಲ್ಲಿ ಉಷ್ಣಾಂಶವು 4.5ರಿಂದ 6.5 ಡಿಗ್ರಿ ಸೆಲ್ಸಿಯಸ್​ನಷ್ಟು ಕುಸಿಯುವುದು ದೃಢಪಟ್ಟಾಗ ಅಥವಾ ಉಷ್ಣಾಂಶವು ಕುಸಿದಾಗ ಶೀತ ಮಾರುತದ ಎಚ್ಚರಿಕೆಯನ್ನು ನೀಡಲಾಗುವುದು ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ಹೇಳಿದ್ದಾರೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಿಗೂ ಶೀತಮಾರುತದ ಮುನ್ನೆಚ್ಚರಿಕೆ ನೀಡಿದ್ದೇವೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ರಮೇಶ್ ಅವರ ಹೇಳಿಕೆಯನ್ನು ‘ಟೈಮ್ಸ್​ ಆಫ್ ಇಂಡಿಯಾ’ ವರದಿ ಮಾಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ‘ತೀವ್ರ ಶೀತಮಾರುತ’ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಲಿದೆ. ಇನ್ನು ಶೀತಮಾರುತಗಳ ಪ್ರಭಾವದಿಂದ ಬೆಂಗಳೂರಿನಲ್ಲಿಯೂ ಉಷ್ಣಾಂಶ ತೀವ್ರವಾಗಿ ಕುಸಿದಿದೆ.

ಶೀತಮಾರುತದ ವಾತಾವರಣವಿದ್ದಾಗ ಮನೆಯಲ್ಲಿಯೇ ಇರುವುದು ಕ್ಷೇಮ. ಹೊರಗಿನ ಸಂಚಾರವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಎಚ್ಚರಿಸಿದ್ದಾರೆ. ಮೂರ್ನಾಲ್ಕು ಪದರಗಳಿರುವಂತೆ ಉಡುಗೆಗಳನ್ನು ಧರಿಸಬೇಕು ಎಂದು ಸಲಹೆ ಮಾಡಿದ್ದಾರೆ.

‘ಬಹುಕಾಲ ಶೀತಮಾರುತದ ವಾತಾವರಣದಲ್ಲಿದ್ದರೆ ಮೂಗಿನಿಂದ ರಕ್ತ ಸುರಿಯುವುದು, ಅಸ್ತಮಾ ಉಲ್ಬಣಗೊಳ್ಳುವುದು, ಜ್ವರದ ಲಕ್ಷಣಗಳು ಹಾಗೂ ಚರ್ಮದ ತುರಿಕೆಯಂಥ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಿವಿ ಮುಚ್ಚುವಂತೆ ಟೋಪಿ ಧರಿಸುವುದು, ಮನೆಗಳಲ್ಲಿಯೂ ಪಾದರಕ್ಷೆ-ಕಾಲುಚೀಲ ಬಳಸುವುದು ಒಳ್ಳೆಯದು. ಬಿಸಿನೀರು, ಬಿಸಿ ಪಾನೀಯಗಳ ಸೇವನೆ ಒಳ್ಳೆಯದು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

suddiyaana