ಅಫ್ಘಾನಿಸ್ತಾನದಲ್ಲಿ ಶೀತ ಗಾಳಿಯ ಆರ್ಭಟ – ನೂರಾರು ಜನ ಬಲಿ, 2 ಲಕ್ಷಕ್ಕೂ ಅಧಿಕ ಜಾನುವಾರುಗಳು ಸಾವು
ಕಾಬೂಲ್: ಅಫ್ಘಾನಿಸ್ತಾನ ದೇಶದ ಜನ ತಾಲಿಬಾನಿಗಳ ಕೈಗೆ ಸಿಲುಕಿ ಪಡಬಾರದ ಕಷ್ಟ ಪಡ್ತಿದ್ದಾರೆ. ಇದರ ಮಧ್ಯೆ, ಈಗ ವಿಪರೀತ ಶೀತ ಗಾಳಿ ಬೀಸುತ್ತಿದ್ದು, ಸಾವು ನೋವಿನ ಆರ್ತನಾದದಿಂದ ಜನರ ಬದುಕು ದುಸ್ತರವಾಗಿದೆ. ಕಳೆದೆರಡು ವಾರಗಳಿಂದ ಶೀತಮಾರುತಕ್ಕೆ ನೂರಾರು ಮಂದಿ ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೇ, 2 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಶೀತದ ಕಾರಣದಿಂದ ಮೃತಪಟ್ಟಿವೆ. ದೇಶದ ಉತ್ತರ ಭಾಗದ ಬಾಲ್ಕ್, ಜವಝಾನ್ ಮತ್ತು ಪಂಜಶೀರ್ ಪ್ರಾಂತ್ಯಗಳಲ್ಲಿ ಶೀತಗಾಳಿಗೆ ಅತಿ ಹೆಚ್ಚು ಸಾವು ನೋವುಗಳಾಗಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 20 ಪ್ರಾಂತ್ಯಗಳಿಂದ 2.6 ಲಕ್ಷ ಜಾನುವಾರುಗಳು ಸಾವನ್ನಪ್ಪಿವೆ. ಇವುಗಳ ಪೈಕಿ 1.29 ಲಕ್ಷದಷ್ಟು ಜಾನುವಾರುಗಳು ಮೇಕೆ ಮತ್ತು ಕುರಿಗಳೇ ಆಗಿವೆ. ಶೀತದ ಅಲೆಯ ಜೊತೆಗೆ ಮೇವಿನ ಕೊರತೆಯಿಂದಲೂ ಜಾನುವಾರುಗಳು ಸಾವನ್ನಪ್ಪುತ್ತಿವೆ ಎಂದು ಅಲ್ಲಿನ ರೈತರು ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಜನರಿಗೆ ಗಾಯದ ಮೇಲೆ ಮತ್ತೆ ಬರೆ – ಲೀಟರ್‌ಗೆ 262 ರೂಪಾಯಿ ದಾಟಿದ ಡೀಸೆಲ್ ದರ
ಅಫ್ಘಾನಿಸ್ತಾನದಲ್ಲಿ 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಸಂಕಷ್ಟದ ಪರಿಸ್ಥಿತಿಗೆ ತಲುಪಿದೆ. ಅಂತಾರಾಷ್ಟ್ರೀಯ ನೆರವು ಕಡಿಮೆಯಾಗಿ ಆ ದೇಶದ ಆರ್ಥಿಕ ವ್ಯವಸ್ಥೆ ಶೋಚನೀಯವಾಗಿದೆ. ಅನ್ನಾಹಾರ ಇತ್ಯಾದಿ ಅಗತ್ಯ ವಸ್ತುಗಳ ಕೊರತೆ ಕಾಡುತ್ತಿದೆ. ವಿದ್ಯುತ್ ಅಭಾವ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯೂ ಇದೆ. ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿ ಈಗ ಮಹಿಳೆಯರು ಶಾಲೆ ಹೋಗುವುದನ್ನು ನಿರ್ಬಂಧಿಸಿದ ಮೇಲಂತೂ ಅಂತಾರಾಷ್ಟ್ರೀಯ ನೆರವು ಸಿಗುವುದು ಇನ್ನೂ ದುಸ್ತರವಾಗಿದೆ.