ಭಿನ್ನಮತದ ಬೆಂಕಿಗೆ ಕೇಸರಿ ಕೋಟೆಯಲ್ಲಿ ಕಂಪನ – ಯಡಿಯೂರಪ್ಪ ಮೇಲುಗೈ, ಈಶ್ವರಪ್ಪ ಕನಸಿಗೆ ಕೊಳ್ಳಿ..!
ಲೋಕಸಭಾ ಚುನಾವಣೆಗೆ ಕರ್ನಾಟಕದ 20 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. 9 ಹಾಲಿ ಸಂಸದರಿಗೆ ಕೊಕ್ ಕೊಡಲಾಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಆದ್ರೆ ಬಿಜೆಪಿಯ ಇದೇ ಅಸ್ತ್ರ ಕೇಸರಿ ಕೋಟೆಯಲ್ಲಿ ಕಂಪನ ಎಬ್ಬಿಸಿದೆ. ಬಂಡಾಯದ ಬಿಸಿ ತಟ್ಟಿದೆ. ಚುನಾವಣೆಗೂ ಮುನ್ನವೇ ಚಾಮರಾಜನಗರದ ವಿ.ಶ್ರೀನಿವಾಸ್ ಪ್ರಸಾದ್, ತುಮಕೂರಿನ ಎಲ್. ಬಸವರಾಜ್, ಹಾವೇರಿಯ ಶಿವಕುಮಾರ್ ಉದಾಸಿ ಈ ಹಿಂದೆಯೇ ತಾವು ಸ್ಪರ್ಧೆ ಮಾಡುವುದಿಲ್ಲವೆಂದು ಘೋಷಿಸಿದ್ದರು. ಅದರಂತೆಯೇ ಈ ಕ್ಷೇತ್ರಗಳಿಗೆ ಹೊಸಬರಿಗೆ ಮಣೆ ಹಾಕಲಾಗಿದೆ. ಹಾವೇರಿ ಕ್ಷೇತ್ರದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ನಿರಾಸೆ ಉಂಟಾಗಿದೆ. ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ಮತ್ತೊಂದೆಡೆ ಶೋಭಾ ಕರಂದ್ಲಾಜೆಗೆ ಕ್ಷೇತ್ರ ಬದಲಾವಣೆ ಮಾಡ್ಲಾಗಿದೆ. ಹಾವೇರಿ ಅಥವಾ ಧಾರವಾಡ ಟಿಕೆಟ್ ನಿರೀಕ್ಷೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೂ ಟಿಕೆಟ್ ಮಿಸ್ ಆಗಿದೆ. ಹೀಗೆ ನಾಲ್ಕೈದು ಕ್ಷೇತ್ರಗಳನ್ನ ಹೊರತು ಪಡಿಸಿದ್ರೆ ಉಳೆದೆಲ್ಲಾ ಕ್ಷೇತ್ರಗಳಲ್ಲೂ ಪ್ರಯೋಗ ನಡೆದಿದೆ. ಇದು ಜಿಲ್ಲಾ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ.
ಇದನ್ನೂ ಓದಿ:ಮೈತ್ರಿ ಧರ್ಮ ಪಾಲನೆಗೆ ಸಿದ್ಧ ಎಂದ ಸುಮಲತಾ! – ಜೆಡಿಎಸ್‌ಗೆ ಲಾಭವೋ? ನಷ್ಟವೋ?
ಪುತ್ರ ಕಾಂತೇಶ್ಗೆ ಹಾವೇರಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಕೆಂಡವಾಗಿದ್ದಾರೆ. ನನ್ನ ಮಗನಿಗೆ ಲೋಕಸಭೆ ಟಿಕೆಟ್ ಭರವಸೆ ಕೊಟ್ಟು ಈಗ ಯಡಿಯೂರಪ್ಪ ಮೋಸ ಮಾಡಿದ್ದಾರೆ ಎಂದು ಬಹಿರಂಗವಾಗೇ ಕಿಡಿ ಕಾರಿದ್ದಾರೆ. ಅಲ್ಲದೆ ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ. ಹೀಗೆ ಈಶ್ವರಪ್ಪ ರೆಬೆಲ್ ಆಗ್ತಿದ್ದಂತೆ ಯಡಿಯೂರಪ್ಪ ಹೊಸ ದಾಳ ಉರುಳಿಸಿದ್ದಾರೆ. ಕಾಂತೇಶ್ ಈಶ್ವರಪ್ಪ ಅವರನ್ನು ಎಂಎಲ್ಸಿ ಮಾಡುವ ಆಫರ್ ನೀಡಿದ್ದಾರೆ. ಆದ್ರೆ ಇದನ್ನ ಒಪ್ಪಿಕೊಳ್ತಾರಾ ಅನ್ನೋದನ್ನ ಕಾದು ನೋಡ್ಬೇಕು. ಮತ್ತೊಂದೆಡೆ ಶೆಟ್ಟರ್ ನಿರೀಕ್ಷೆ ಇಟ್ಟಿದ್ದ ಹಾವೇರಿ, ಧಾರವಾಡ ಕ್ಷೇತ್ರಗಳು ಬೇರೆಯವರ ಪಾಲಾಗಿವೆ. ಇದೀಗ ಕೊನೆಯದಾಗಿ ಉಳಿದಿರುವ ಬೆಳಗಾವಿ ಕ್ಷೇತ್ರವನ್ನು ಬಿಜೆಪಿ ನೀಡದಿದ್ದರೆ, ಅವರ ರಾಜಕೀಯ ಜೀವನ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಶುಕ್ರವಾರ ಮಹತ್ವದ ನಿರ್ಧಾರ ಕೈಗೊಳ್ಳೋದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಶೋಭಾ ಕರಂದ್ಲಾಜೆಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಂತೆಯೇ ಬೆಂಗಳೂರು ಕೇಂದ್ರದಲ್ಲೂ ಗೋ ಬ್ಯಾಕ್ ಶೋಭಾ ಅಭಿಯಾನ ಶುರುವಾಗಿದೆ. ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಕಾರಣ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ತಮ್ಮ ನಾಯಕರಿಗೆ ಟಿಕೆಟ್ ನೀಡದೇ ಇರುವುದು ಅನ್ಯಾಯ ಎಂದು ಘೋಷಣೆಗಳನ್ನು ಕೂಗಿತ್ತಾ ಕಲ್ಲು ತೂರಾಟ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ನೋಡಿದ್ರೆ ಇಲ್ಲಿ ಯಡಿಯೂರಪ್ಪಗೆ ಮಣೆ ಹಾಕಿದಂತೆ ಕಾಣ್ತಿದೆ. ಯಾಕಂದ್ರೆ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬ ಸೈಡ್‌ಲೈನ್ ಆಗಿತ್ತು. ಇದರ ಪರಿಣಾಮವೂ ಫಲಿತಾಂಶದಲ್ಲಿ ಕಂಡು ಬಂದಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಬಹುಮುಖ್ಯವಾಗಿದೆ. ರಿಲೀಸ್ ಆಗಿರುವ ಅಭ್ಯರ್ಥಿಗಳ ಲಿಸ್ಟ್ ನಲ್ಲಿ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದಂತಿದೆ. ವಿರೋಧದ ನಡುವೆಯೂ ‘ತಮ್ಮವರಿಗೆ’ ಟಿಕೆಟ್ ಕೊಡಿಸುವಲ್ಲಿ ಸಫಲರಾದರೆ, ವಿರೋಧಿ ಗುಂಪಿನ ಸದ್ದಡಗಿಸುವಲ್ಲೂ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಬಿಎಲ್ ಸಂತೋಷ್ ಬಣದ ಕೆಲವು ನಾಯಕರೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಸಂಸದ, ಬಿಜೆಪಿಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಟಿಕೆಟ್ ದೊರೆಯದಂತೆ ಮಾಡುವಲ್ಲಿ ಬಿಎಸ್ವೈ ಬಣ ಯಶಸ್ವಿಯಾಗಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ತಮ್ಮನ್ನು ವಿರೋಧಿಸಿದ್ದವರಿಗೆ ಟಿಕೇಟ್ ಸಿಗದಂತೆ ಮಾಡುವಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಪಿ.ಸಿ ಗದ್ದಿಗೌಡರ್ಗೆ ಯಡಿಯೂರಪ್ಪ ಮತ್ತು ಪಕ್ಷದ ಬೆಂಬಲವಿರುವುದರಿಂದ 5ನೆ ಬಾರಿ ಟಿಕೆಟ್ ದೊರೆತಿದೆ. ಗಾಯತ್ರಿ ಸಿದ್ದೇಶ್ವರ್ ಕೂಡ ಯಡಿಯೂರಪ್ಪ ಬಣ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಮತ್ತೊಂದೆಡೆ ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಯಡಿಯೂರಪ್ಪ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಹೈಕಮಾಂಡ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ನಿರೀಕ್ಷೆಯಂತೆ ಶೋಭಾ ಕರಂದ್ಲಾಜೆಗೆ ಉಡುಪಿ- ಚಿಕ್ಕಮಗಳೂರು ಟಿಕೆಟ್ ಕೈತಪ್ಪಿದರೂ ಬೆಂಗಳೂರು ಉತ್ತರದಲ್ಲಿ ಟಿಕೆಟ್ ಕೊಡಿಸುವಲ್ಲಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೆ ಉಡುಪಿ ಚಿಕ್ಕಮಗಳೂರಿಗೆ ತಮ್ಮದೇ ಬಳಗದ ಕೋಟ ಶ್ರೀನಿವಾಸ್ ಪೂಜಾರಿಗೆ ಟಿಕೆಟ್ ಕೊಡಿಸುವಲ್ಲೂ ಅವರು ಸಕ್ಸಸ್ ಆಗಿದ್ದಾರೆ.
ಇಷ್ಟು ದಿನ ಟಿಕೆಟ್ ಟಿಕೆಟ್ ಅಂತಿದ್ದ ಆಕಾಂಕ್ಷಿಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಕೆಲವ್ರು ಖುಷಿಯಾಗಿದ್ದಾರೆ. ಇನ್ನೂ ಕೆಲವ್ರು ಟಿಕೆಟ್ ಮಿಸ್ ಗಿ ರೆಬೆಲ್ ಆಗಿದ್ದಾರೆ. ಅದ್ರಲ್ಲೂ ಈಶ್ವರಪ್ಪ, ಶೆಟ್ಟರ್ರಂತಹ ನಾಯಕರೇ ತಿರುಗಿ ಬಿದ್ದಿರೋದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರೋದ್ರಿಂದ ಎಲ್ಲಾ ನಾಯಕರ ಸಿಟ್ಟನ್ನ ತಣಿಸಿ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳೋ ಸವಾಲೂ ಇದೆ.