ಸಂಜು ಸಾಮರ್ಥ್ಯಕ್ಕೆ ಸಾಕ್ಷಿ 97 ರನ್- ಕೋಚ್ ಗೌತಮ್ ಗಂಭೀರ್ ಯೂಟರ್ನ್

ಸಂಜು ಸಾಮರ್ಥ್ಯಕ್ಕೆ ಸಾಕ್ಷಿ 97 ರನ್- ಕೋಚ್ ಗೌತಮ್ ಗಂಭೀರ್ ಯೂಟರ್ನ್

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ ಎಂಟ್ರಿಕೊಡಲು ಕಾರಣ ಸಂಜು ಸ್ಯಾಮ್ಸನ್ ಅವರ ಅದ್ಭುತ ಇನ್ನಿಂಗ್ಸ್. ಹೀಗಂತಾ ಎಲ್ಲರೂ ಸಂಜು ಬ್ಯಾಟಿಂಗ್ ಬಗ್ಗೆ ಹೊಗಳುತ್ತಿದ್ದರೆ ಕೋಚ್ ಗೌತಮ್ ಗಂಭೀರ್ ಮಾತ್ರ ಸಂಜು ಬಗ್ಗೆ ಒಂದು ಮಾತು ಕೂಡಾ ಆಡಿರಲಿಲ್ಲ. ಕೊನೆಗೂ ಈಗ ಗೌತಮ್ ಗಂಭೀರ್ ಸಂಜು ಬ್ಯಾಟಿಂಗ್ ವರ್ಣನೆ ಮಾಡಿದ್ದಾರೆ.

ಇದನ್ನೂ ಓದಿ:ಭಾರತದ ವಿರುದ್ಧ ಸೋಲು ಸಹಿಸದ ಪಿಸಿಬಿ – ಪಾಕಿಸ್ತಾನ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ದಂಡ..!

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಈ ಬಾರಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ ವಿಶ್ವಕಪ್ ಆರಂಭವಾದ ಬಳಿಕ ಸಂಜು ಸ್ಯಾಮ್ಸನ್ ಬೆಂಚ್​ ಬಿಸಿಗಷ್ಟೇ ಸೀಮಿತರಾಗಿದ್ದರು. ಆರಂಭಿಕನಾಗಿ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಕಾಣಿಸಿಕೊಂಡಿದ್ದರು. ಅತ್ತ ಅಭಿಷೇಕ್ ಶರ್ಮಾ ಸತತವಾಗಿ ವಿಫಲರಾದರೂ ಸಂಜು ಸ್ಯಾಮ್ಸನ್​ಗೆ ಚಾನ್ಸ್ ನೀಡಿರಲಿಲ್ಲ. ಇದೀಗ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಸ್ಯಾಮ್ಸನ್ ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶ್ವಕಪ್​ನ ಸೆಮಿಫೈನಲ್​ಗೇರಿದೆ. ಭಾರತ ತಂಡ ವಿಶ್ವಕಪ್​ನ ಸೆಮಿಫೈನಲ್​ಗೇರಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಕೋಚ್​ ಗೌತಮ್ ಗಂಭೀರ್​ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ವಿವರಿಸಿದ್ದಾರೆ. ಅವರು ಒಬ್ಬ ವಿಶ್ವದರ್ಜೆಯ ಆಟಗಾರ ಎಂದು ಗಂಭೀರ್ ಹೊಗಳಿದ್ದಾರೆ. ವಿಂಡೀಸ್​ ವಿರುದ್ಧದ 97  ರನ್‌ಗಳ ಅದ್ಭುತ ಇನ್ನಿಂಗ್ಸ್ ಅವರ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಜು ಸಾಮರ್ಥ್ಯವನ್ನು ಹೊಗಳಿದ ಗೌತಮ್ ಗಂಭೀರ್, ಇಷ್ಟು ದಿನ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್​​ನಿಂದ ಹೊರಗಿಟ್ಟಿರುವುದೇಕೆ? ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಬೇಗನೆ ವಿಕೆಟ್ ಒಪ್ಪಿಸುತ್ತಿದ್ದರು. ಅವರು ಕಣಕ್ಕಿಳಿದ ಐದು ಇನಿಂಗ್ಸ್​ಗಳಲ್ಲಿ ಕಲೆಹಾಕಿದ್ದು 10, 6, 0, 24, 6 ರನ್ ಮಾತ್ರ. ಅಂದರೆ ಅವರು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಒತ್ತಡದ ಪರಿಸ್ಥಿತಿಯಿಂದ ಅವರನ್ನು ಹೊರತರಲು ಮತ್ತು ಮಾನಸಿಕವಾಗಿ ರಿಫ್ರೆಶ್ ಆಗಲು ವಿರಾಮ ನೀಡಬೇಕಿತ್ತು. ಹೀಗಾಗಿ ಟಿ20 ವಿಶ್ವಕಪ್​ನ ಆರಂಭಿಕ ಪಂದ್ಯಗಳಿಗೆ ಸಂಜು ಸ್ಯಾಮ್ಸನ್​ರನ್ನು ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆ ಮಾಡಿರಲಿಲ್ಲ  ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ. ಇದಲ್ಲದೆ ಆರಂಭದಲ್ಲಿ ತಂಡದ ಕಾಂಬಿನೇಷನ್ ಮತ್ತು ಬ್ಯಾಟಿಂಗ್ ಆಳವನ್ನು  ಹೆಚ್ಚಿಸಲು ಶಿವಂ ದುಬೆ ಹಾಗೂ ರಿಂಕು ಸಿಂಗ್​ ಅವರಂತಹ ಆಟಗಾರರಿಗೆ ಆದ್ಯತೆ ನೀಡಲಾಗಿತ್ತು. ಇದಾಗ್ಯೂ ಸ್ಯಾಮ್ಸನ್​ ನೆಟ್ಸ್​ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಹೀಗಾಗಿ ಬ್ಯಾಟಿಂಗ್ ಲೈನಪ್​ನಲ್ಲಿ ಬದಲಾವಣೆ ಮಾಡಿ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗಿದೆ ಎಂದು ಗಂಭೀರ್ ತಿಳಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ಲೈನಪ್​ನಲ್ಲಿ ಎರಡು ಬದಲಾವಣೆ ಮಾಡಿದೆ. ಆರಂಭದ ಪಂದ್ಯಗಳಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್ ಅವರನ್ನು ಮೂರನೇ ಕ್ರಮಾಂಕಕ್ಕೆ ಹಿಂಬಡ್ತಿ ನೀಡಲಾಗಿದೆ. ಹಾಗೆಯೇ ಮೂರನೇ ಕ್ರಮಾಂಕದಲ್ಲಿದ್ದ ತಿಲಕ್ ವರ್ಮಾ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿದೆ. ತಿಲಕ್ ವರ್ಮಾ ಅವರನ್ನು ಮಿಡಲ್ ಆರ್ಡರ್​ನಲ್ಲಿ ಆಡಿಸಲು ಇಲ್ಲಿ ಟೀಮ್ ಮ್ಯಾನೇಜ್ಮೆಂಟ್ ರಿಂಕು ಸಿಂಗ್ ಅವರನ್ನು ಕೈ ಬಿಟ್ಟಿದ್ದಾರೆ. ಈ ಮೂಲಕ ಸಂಜು ಸ್ಯಾಮ್ಸನ್​ ಅವರಿಗೆ ಆರಂಭಿಕನಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

Sulekha

Leave a Reply

Your email address will not be published. Required fields are marked *