ಕುಂಭಮೇಳದಲ್ಲಿ 50 ಕೋಟಿ ಜನ ಪವಿತ್ರ ಸ್ನಾನ – ಯೋಗಿ ಆದಿತ್ಯನಾಥ್

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಈಗಾಗಲೇ, ಒಂದು ತಿಂಗಳ ಅವಧಿಯಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಕ್ತರು ‘ಏಕ ಭಾರತ ಶ್ರೇಷ್ಠ ಭಾರತ’ದ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ರು.
ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ರಸ್ತೆ ಮಾರ್ಗವಾಗಿ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ ಎಂದು ಹೇಳಿದರು. ಇದರೊಂದಿಗೆ ರೈಲು ಮತ್ತು ವಿಮಾನ ಸಂಚಾರ ವ್ಯವಸ್ಥೆಯೂ ಉತ್ತಮವಾಗಿತ್ತು ಎಂದ ಅವರು, ಉತ್ತಮ ರಸ್ತೆ ಸಾರಿಗೆ ವ್ಯವಸ್ಥೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಶ್ಲಾಘಿಸಿದರು. ಇನ್ನು 110 ಕೋಟಿ ಭಾರತೀಯ ಹಿಂದೂಗಳಲ್ಲಿ 50 ಕೋಟಿ ಜನರು ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದರು. ಇದರೊಂದಿಗೆ ಮಹಾಕುಂಭ ಮೇಳ ಅಂತ್ಯವಾಗುವುದರೊಳಗೆ ಇನ್ನು ಹೆಚ್ಚಿನ ಅಂದಾಜು 6 ರಿಂದ 7 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಯೋಗಿ ಆದಿತ್ಯನಾಥ್ ಅವರು, 50-55 ಕೋಟಿ ಭಕ್ತರ ಆಗಮನದಿಂದ ಉತ್ತರ ಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ.ಗಳಷ್ಟು ಆದಾಯ ಬಂದಿದೆ ಎಂದು ಅಂದಾಜಿಸಿದ್ದಾರೆ. ಮಹಾಕುಂಭಕ್ಕೆಂದು ನಿಗದಿಪಡಿಸಿದ ಬಜೆಟ್ ಮಹಾಕುಂಭದ ಜೊತೆಗೆ ಪ್ರಯಾಗ್‌ರಾಜ್ ನಗರದ ಸೌಂದರ್ಯೀಕರಣಕ್ಕೂ ಕಾರಣವಾಗಿದೆ ಎಂದೂ ಅವರು ಹೇಳಿದರು. 15 ಸಾವಿರ ಕೋಟಿ ರೂ. ಖರ್ಚು ಮಾಡಿದರೆ, 3 ಲಕ್ಷ ಕೋಟಿ ರೂ. ಲಾಭ ಬಂದಿದೆ ಎಂದು ಅವರು ಹೇಳಿದರು.