ಉಗ್ರರ ಗುಂಡಿಗೆ ಬಲಿಯಾದ ಭರತ್ ಭೂಷಣ್ ಅಂತಿಮ ದರ್ಶನ – ಮಗು ಮುಖ ನೋಡಿ ಸಿಎಂ ಭಾವುಕ

ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ಇಂದು ಮುಂಜಾನೆ ಬೆಂಗಳೂರು ತಲುಪಿದೆ. ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಪಾರ್ಥಿವ ಶರೀರ ಬೆಳಗಿನ ಜಾವ ಬೆಂಗಳೂರು ತಲುಪಿದೆ. ಬೆಂಗಳೂರಿನ ನಿವಾಸಿ ಭರತ್ ಭೂಷನ್ ಅವರ ಅಂತಿಮ ದರ್ಶನವನ್ನು ಸಿಎಂ ಸಿದ್ಧರಾಮಯ್ಯ ಪಡೆದಿದ್ದಾರೆ.
ಇದನ್ನೂ ಓದಿ: ವಧುವಿನ ಬಗ್ಗೆ ಸುಳ್ಳು ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಮಂಟಪದಿಂದಲೇ ಎದ್ದು ಹೋದ ವರ- ಮದುವೆ ಮಾಡಿಸಿದ ಖಾಕಿ
ಇಂದು ಮುಂಜಾನೆ ಸಿಎಂ ಹತ್ಯೆಯಾದ ನಗರದ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದರು. ಸಿಎಂ ಭೇಟಿಯ ವೇಳೆ, ಮಗುವನ್ನು ತೋರಿಸಿ ಘಟನೆಯ ಭೀಕರತೆಯನ್ನು ಹೇಳಿ ಭರತ್ ಪತ್ನಿ ಸುಜಾತ ಅವರು ಕಣ್ಣಿರಿಟ್ಟರು. ಸಿಎಂ ಮುಂದೆ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದು, ಮಗುವಿನ ಮುಖ ನೋಡಿ ಸಿಎಂ ಸಹ ಭಾವುಕರಾದರು. ಭರತ್ ಪತ್ನಿ, ಸೋದರಮಾವ ಸೀತಾರಾಮ್ ಹಾಗೂ ಭರತ್ ತಂದೆಯವರಿಗೆ ಸಿಎಂ ಸಾಂತ್ವನ ಹೇಳಿದರು. ಸಿದ್ದರಾಮಯ್ಯ ಅವರ ಜೊತೆ ಸಚಿವ ರಾಮಲಿಂಗಾರೆಡ್ಡಿಯವರು ಸಹ ಭರತ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಭಯೋತ್ಪಾದಕರ ದಾಳಿಯಲ್ಲಿ ಭರತ್ ಭೂಷಣ್, ಮಂಜುನಾಥ್ ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅಲ್ಲದೆ, ಭರತ್ ಭೂಷಣ್, ಮಂಜುನಾಥ್ ಅಂತ್ಯಕ್ರಿಯೆಗೆ ಸರ್ಕಾರದಿಂದ ವ್ಯವಸ್ಥೆ ಮಾಡಲಾಗುತ್ತದೆ. ಭರತ್ ಅಂತಿಮ ಸಂಸ್ಕಾರದಲ್ಲಿ ರಾಮಲಿಂಗಾರೆಡ್ಡಿ ಭಾಗಿಯಾಗುತ್ತಾರೆ. ಮಂಜುನಾಥ್ ಅಂತ್ಯಕ್ರಿಯೆಯಲ್ಲಿ ಮಧು ಬಂಗಾರಪ್ಪ ಭಾಗಿಯಾಗುತ್ತಾರೆ ಎಂದು ಅವರು ಹೇಳಿದರು.
ಭರತ್ ಸ್ಮರಣೆಗಾಗಿ ಪಾರ್ಕ್‌ಗೆ ಭರತ್ ಭೂಷಣ್ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ವಾರ್ಡ್‌ನ ಪಾರ್ಕ್ ಇದಾಗಿದ್ದು, ಭರತ್ ಭೂಷಣ್ ನಿವಾಸದ ಬಳಿ ಇದೆ. ಅಲ್ಲದೇ ಭರತ್ ಭೂಷಣ್ ಇದೇ ಪಾರ್ಕ್‌ನಲ್ಲಿ ಪ್ರತಿದಿನ ವಾಕಿಂಗ್ ಮಾಡುತ್ತಿದ್ದರು. ಪಾರ್ಕ್ ಒಳಗಿನ ಸಬಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಭರತ್ ಅದರಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಈಗ ಭರತ್ ಸ್ಮರಣೆಗಾಗಿ ಶಾಸಕ ಮುನಿರತ್ನ ಅವರು ಭರತ್ ಹೆಸರನ್ನೇ ಪಾರ್ಕ್‌ಗೆ ನಾಮಕರಣ ಮಾಡಿದ್ದಾರೆ.
ಇನ್ನು ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸಂಬಂಧಿಕರು ಬೆಂಗಳೂರಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಮಂಜುನಾಥ್ ಮೃತದೇಹ ಶಿವಮೊಗ್ಗದತ್ತ ಸಾಗಿದೆ. ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ನೋಡಿರಿ

