6 ವರ್ಷಗಳ ಮುನಿಸಿಗೆ ಕೊನೆಗೂ ಬ್ರೇಕ್ – ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ ಸಿಎಂ ಸಿದ್ಧರಾಮಯ್ಯ
ಲೋಕಸಭೆ ಚುನಾವಣೆಯ ಅಖಾಡ ರಂಗೇರಿದೆ. ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಎಲೆಕ್ಷನ್ ಹೊತ್ತಲ್ಲಿ ಶ್ರತ್ರುಗಳಾಗಿದ್ದವರು ಮಿತ್ರರಾಗುತ್ತಿದ್ದಾರೆ. ದೊಸ್ತಿಗಳಾಗಿದ್ದವರು ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಇದೀಗ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಜಕೀಯ ಕಾರಣಕ್ಕೆ 6 ವರ್ಷಗಳಿಂದ ಇದ್ದ ಮುನಿಸನ್ನು ಮರೆತು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಅಯ್ಯಯ್ಯೋ.. ಪುರುಷ ಸಿಬ್ಬಂದಿಯ ಮುಂದೆಯೇ ಬಟ್ಟೆ ಬಿಚ್ಚಿ ಟ್ರಯಲ್ ನೋಡಿದ ಯುವತಿ!
ಈ ಬಾರಿಯ ಲೋಕಸಭಾ ಚುನಾವಣೆ ಹೊತ್ತಲ್ಲಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಭಾನುವಾರ ಪ್ರಧಾನಿ ಮೋದಿ ಅವರು ಮೈಸೂರಿಗೆ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಈ ಹೊತ್ತಲ್ಲೇ ಸಿಎಂ ಸಿದ್ಧರಾಮಯ್ಯ ರಾಜಕೀಯ ಕಾರಣಕ್ಕೆ 6 ವರ್ಷಗಳಿಂದ ಇದ್ದ ಮುನಿಸನ್ನು ಮರೆತು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ. ಆರು ವರ್ಷಗಳಿಂದ ದಿಗ್ಗಜ ನಾಯಕರು ಪರಸ್ಪರ ಭೇಟಿಯಾಗಿರಲಿಲ್ಲ. ಮಾತುಕತೆಯೂ ಇರಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಪ್ರಸಾದ್ ಮನೆಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
ಇದು ಸೌಹಾರ್ದಯುತ ಭೇಟಿಯೋ ಅಥವಾ ರಾಜಕೀಯ ಭೇಟಿಯೋ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ಬನ್ರಿ ಪ್ರಸಾದ್ ಎಂದು ಸಿಎಂ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಸಿಎಂ ಬಳಿ ಪ್ರಸಾದ್ ಆರೋಗ್ಯ ಸಮಸ್ಯೆ ಹೇಳಿಕೊಂಡರು. ‘ಆರೋಗ್ಯ ನಿರ್ಲಕ್ಷ್ಯ ಮಾಡಬೇಡಿ’ ಎಂದು ಸಿಎಂ ಸಲಹೆ ನೀಡಿದರು.
2013 ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ತಮ್ಮ ಸಂಪುಟದಿಂದ ಕೈಬಿಟ್ಟಿದ್ದರು. ಇದರಿಂದ ಕುಪಿತಗೊಂಡಿದ್ದ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಚುನಾವಣೆ ಎದುರಿಸಿದ್ದರು. ಆಗ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ನಂತರ ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಸಾದ್ ಗೆಲುವು ಸಾಧಿಸಿದ್ದರು.
ಸಂಪುಟದಿಂದ ಕೈಬಿಟ್ಟಾಗಿನಿಂದ ಸಿದ್ದರಾಮಯ್ಯ ವಿರುದ್ಧ ಪ್ರಸಾದ್ ಅಸಮಾಧಾನ ಹೊಂದಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಲವು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಪ್ರಸಾದ್ ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.