ಅಡ್ಜೆಸ್ಟ್ಮೆಂಟ್ ಗಿರಾಕಿ ಇರೋ ತನಕ ನಾನು ಸಿಎಂ ಆಗಲ್ಲವೆಂದ ಯತ್ನಾಳ್!
ಲೋಕಸಭಾ ಚುನಾವಣೆ ಬಳಿಕ ನೀವೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೀರಾ ಅಂತಾ ಏನು ಗ್ಯಾರಂಟಿ ಎಂದು ಬಸನಗೌಡ ಪಾಟೀಲ ಯತ್ನಾಳ್ ಅವರು ಸಿಎಂ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.
ರಾಜ್ಯ ಬಜೆಟ್ ಮಂಡನೆ ಮಾಡಿದ ಬಳಿಕ ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿದೆ. ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯ ಪ್ರವೇಶಿಸಿ ಸಿಎಂ ಸಿದ್ಧರಾಮಯ್ಯ ಅವರ ಕಾಲೆಳೆದಿದ್ದಾರೆ. ‘ಲೋಕಸಭಾ ಚುನಾವಣೆ ಬಳಿಕ ನೀವೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತೀರಾ ಅಂತಾ ಏನು ಗ್ಯಾರಂಟಿ’ ಎಂದು ಬಸನಗೌಡ ಪಾಟೀಲ ಯತ್ನಾಳ್ ಅವರು ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ಅನ್ನದಾತರು – ಫೆ.21ರಂದು ದಿಲ್ಲಿಯತ್ತ ಪಾದಯಾತ್ರೆ
ಈ ವೇಳೆ ಹಾಸ್ಯವಾಗಿಯೇ ಯತ್ನಾಳ್ಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಯತ್ನಾಳ್ ನನ್ನ ಒಳ್ಳೆಯ ಸ್ನೇಹಿತ, ವೈಯಕ್ತಿಕವಾಗಿ ಸಿಕ್ಕಾಗ ಉಭಯ ಕುಶಲೋಪರಿ ವಿಚಾರಿಸಿ ನನ್ನನ್ನು ಹೊಗಳುತ್ತಿರುತ್ತಾನೆ. ನಾನಿಲ್ಲದೇ ಇದ್ದಾಗ ನನ್ನನ್ನು ಹೊಗಳೆದೆಯೂ ಇರಬಹುದು ಎಂದು ಹೇಳಿದರು. ಅಲ್ಲದೇ, ‘ಯತ್ನಾಳ್ ನೀನು ಸಿಎಂ ಆಗಬೇಕು ಅಂತಾ ಇರುವವನು ಎಂದು ಹೇಳಿದರು. ಆಗ ಅದಕ್ಕುತ್ತರಿಸಿದ ಬಸನ ಗೌಡ ಪಾಟೀಲ್, ‘ಅಡ್ಜೆಸ್ಟ್ಮೆಂಟ್ ಗಿರಾಕಿಗಳು ಇರುವಾಗ ನಾನು ಏನೂ ಆಗಲ್ಲ ಅಂತಾ ಗೊತ್ತಿದೆ’ ಎಂದು ಬೇಸರದಿಂದ ನಗುತ್ತಲೇ ಹೇಳಿದರು.
ಆಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಮರುಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ‘ಯಾರು ಅಡ್ಜೆಸ್ಟ್ ಮೆಂಟ್ ಗಿರಾಕಿಗಳು ಹೇಳಪ್ಪಾ’ ಎಂದು ಕೇಳಿದರು. ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಏನು ಮಾತನಾಡದೇ ಸುಮ್ಮನಾಗಿದ್ದಾರೆ.
ಇನ್ನು ಸಿಎಂ ಸಿದ್ಧರಾಮಯ್ಯ ಅವರು ರಾಜ್ಯಪಾಲರ ಭಾಷಣದ ವಿಚಾರವಾಗಿ ಮಾತನಾಡಿದ್ದಾರೆ. ನಾವು ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದೇವೆ ಎಂಬುದಾಗಿ ಬಿಜೆಪಿಯವರು ಆರೋಪ ಮಾಡಿದ್ದಾರೆ. ರಾಜ್ಯಪಾಲರ ಭಾಷಣ ನೀರಸ ಭಾಷಣ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರು ಒಳ್ಳೆಯವರು. ಅವರ ಬಾಯಿಂದ ನೀವು ಏನೇನೋ ಹೇಳಿಸಿದ್ದೀರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ. ಆದರೆ, ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ, ಅವರು ಸುಳ್ಳು ಹೇಳಿಲ್ಲ. ಬಿಜೆಪಿಯವರು ಹೇಳುತ್ತಿರುವುದು ಸುಳ್ಳು ಎಂಬುದು ಜನರಿಗೂ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಪಕ್ಷ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಇನ್ನು ಮಾತಿನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಿಎಂ ಸಿದ್ದರಾಮಯ್ಯ ಮಧ್ಯೆಯೂ ಮಾತುಕತೆ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದ ವೇಳೆ ಪ್ರಶ್ನೆಯೊಂದಕ್ಕೆ ಬೊಮ್ಮಾಯಿ ಅವರು, ‘ನಾನು ನೀವು ಎಲ್ಲಾ ಒಟ್ಟಿಗೆ ಇದ್ದವರು ಎಂದು ಹೇಳಿದರು. ಆಗ ಬೊಮ್ಮಾಯಿ ಹೇಳಿದ ಮಾತಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಸದನದಲ್ಲಿ ಇದು ಒಂದೇ ನೀನು ಸತ್ಯ ಹೇಳಿದ್ದು ಎಂದು ಕಾಲೆಳೆದರು.
ಅಲ್ಲದೇ, ಬಸವರಾಜ ಬೊಮ್ಮಾಯಿ ಲವ್ ಮೀ ವೆರಿ ಮಚ್, ಹೊರಗಡೆ ನನ್ನನ್ನು ತುಂಬಾ ಲವ್ ಮಾಡ್ತಾನೆ ಎಂದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರಿಗೆ ಯಾವತ್ತೂ ಜನರ ಆಶೀರ್ವಾದ ಸಿಕ್ಕಿಲ್ಲ, ಆಪರೇಷನ್ ಕಮಲ ಮೂಲಕ ಹಿಂಬಾಗಿಲ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ ಎಂದರು. ಆಗ ಬೊಮ್ಮಾಯಿ ಅವರು, ‘ಏನು ಹಿಂಬಾಗಿಲ ಮೂಲಕ? ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿ ಬಂದ ಮೇಲೆ ಹಿಂಬಾಗಿಲು ಹೇಗಾಗುತ್ತದೆ’ ಎಂದು ಆಕ್ಷೇಪಿಸಿದರು.
ಆಗ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಹಾಗಾದರೆ ನಮ್ಮ ಶಾಸಕರನ್ನು ಬಾಂಬೆಗೆ ಕರೆದುಕೊಂಡು ಹೋದವರು ಯಾರು? ಸಿ.ಡಿ ಮಾಡಿದವರು ಯಾರು? ಎಂದು ಕೇಳಿದರು. ಅದಕ್ಕುತ್ತರಿಸಿದ ಬೊಮ್ಮಾಯಿ, ನಿಮ್ಮ ಶಾಸಕರೇ ಬರಲು ತಯಾರಾಗಿದ್ದಾಗ ನಾವು ಏನು ಮಾಡಲಿ ಎಂದು. ಅದಕ್ಕೆ ಸಿಎಂ, ನೀವು ಆಸೆ ಆಮಿಷ ಒಡ್ಡಿದ್ದಕ್ಕೆ ಬಂದರು ಎಂದರು.