ರಾಜ್ಯದ ಇತಿಹಾಸದಲ್ಲೇ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ – ಇಂದು ಸಿದ್ದರಾಮಯ್ಯರಿಂದ 17ನೇ ಬಜೆಟ್ ಮಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 2026-27ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಇದು ಅವರ 17ನೇ ಬಜೆಟ್ ಆಗಿದ್ದು, ರಾಜ್ಯದ ಇತಿಹಾಸದಲ್ಲೇ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸೃಷ್ಟಿಸಲಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ, ಅಭಿವೃದ್ಧಿ ದಿಕ್ಕು ನಿರ್ಧರಿಸುವ ಮಹತ್ವದ ಬಜೆಟ್ ಇದಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕೆಲವೇ ಕ್ಷಣದಲ್ಲಿ ಬಜೆಟ್ ಆರಂಭ ಆಗಲಿದೆ.
ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಅವರು ನಿರ್ಮಿಸಲಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆಗೆ ಜನವರಿಯಲ್ಲಿ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. 7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಹಿಂದಿಕ್ಕಿದ್ದಾರೆ. ಇದೀಗ ಬಜೆಟ್ ಮಂಡನೆಯಲ್ಲಿಯೂ ದಾಖಲೆ ನಿರ್ಮಿಸಲಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿ ಆಯವ್ಯಯದ ಅಂತಿಮ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ. ಈ ಬಾರಿ ಬಜೆಟ್ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ಯೋಜನೆಗಳಲ್ಲಿ ಬದಲಾವಣೆಗಳು ಆಗಬಹುದೇ ಎಂಬ ಕುತೂಹಲವೂ ಮೂಡಿದೆ.ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ರಾಜ್ಯದ ಜನತೆ ಮತ್ತು ವಿವಿಧ ವಲಯಗಳು ಈ ಬಜೆಟ್ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿವೆ.

ನೋಡಿರಿ

