ಪಾಕ್ ಪರ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ – ಸಿಎಂ ಸಿದ್ಧರಾಮಯ್ಯ

ಪಾಕ್ ಪರ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ – ಸಿಎಂ ಸಿದ್ಧರಾಮಯ್ಯ

ರಾಜ್ಯಸಭಾ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ಆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಸಾಬೀತಾದರೆ ತಪ್ಪಿತ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ದೇಶ ದ್ರೋಹಿಗಳನ್ನು ಮಟ್ಟಹಾಕಬೇಕಿದೆ ಎಂದು ಅವರು ಬುಧವಾರ ಹೇಳಿದ್ದಾರೆ.

ಇದನ್ನೂ ಓದಿ: ಕೇರಳದ ವಯನಾಡು ಕ್ಷೇತ್ರ ತೊರೆದು ಮತ್ತೊಂದು ರಾಜ್ಯಕ್ಕೆ ರಾಹುಲ್ ವಲಸೆ? – ರಾಹುಲ್ ದಾರಿ ಯಾವುದಯ್ಯ?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಸಿದ್ಧರಾಮಯ್ಯ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಯೇ ಎಂಬ ಬಗ್ಗೆ ಮೊದಲು ತನಿಖೆಯಾಗಬೇಕಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಯಕ್ಕೆ ತನಿಖೆಗೆ ಕಳುಹಿಸಿಕೊಟ್ಟಿದ್ದೇವೆ. ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕೆಲವರು ‘ನಾಸಿರ್ ಸಾಬ್’ ಎಂಬ ಘೋಷಣೆ ಕೂಗಲಾಗಿದೆ ಎಂದರೆ, ಇನ್ನು ಕೆಲವರು ‘ಪಾಕಿಸ್ತಾನ’ ಪರ ಘೋಷಣೆ ಎನ್ನುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಸಹ ಬಂದಿದೆ. ಘಟನೆ ಸಂಬಂಧ ಕಾನೂನು & ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಇಂದು ಬೆಳಗ್ಗೆ ಗೃಹ ಸಚಿವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ.

Shwetha M