ತೆರಿಗೆ ತಾರತಮ್ಯ.. ಕೇಂದ್ರಸರ್ಕಾರದಿಂದ ರಾಜ್ಯಕ್ಕೆ ನಷ್ಟ..! – ದಾಖಲೆ ಸಮೇತ ಸಾಕ್ಷ್ಯ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
140 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಜಾಗತಿಕವಾಗಿಯೂ ಬಲಿಷ್ಠವಾಗುತ್ತಿದೆ. ಭಾರತದ ಅಭಿವೃದ್ಧಿಗಾಗಿ ಕೇಂದ್ರಕ್ಕೆ ಪಾವತಿಯಾಗುವ ತೆರಿಗೆಯಲ್ಲಿ ದಕ್ಷಿಣದ ರಾಜ್ಯಗಳದ್ದೇ ಪಾರುಪತ್ಯವಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಒಟ್ಟು ಜಿಡಿಪಿಯ ಮೂರನೇ ಒಂದರಷ್ಟು ಹಾಗೂ ತೆರಿಗೆಯ ಶೇ. 30 ರಷ್ಟು ಮೊತ್ತ ಸಂಗ್ರಹವಾಗುತ್ತೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹೀಗಿದ್ರೂ ಕೂಡ ತೆರಿಗೆ ಪಾಲು ನೀಡುವಾಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಚಿಲ್ಲರೆ ಕಾಸು ನೀಡುತ್ತೆ ಅನ್ನೋದು ಈ ಹಿಂದಿನಿಂದ್ಲೂ ಇರುವ ಆರೋಪ. ಇದೀಗ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ದಾಖಲೆ ಸಮೇತ ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡುವ ತೆರಿಗೆ ಎಷ್ಟು? ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಪಾಲು ಕೊಡುತ್ತಿದೆ ಎಂಬ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಮಂಡ್ಯ, ಹಾಸನದ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ರೆಬೆಲ್ – ದಳಪತಿಗಳಿಗೆ ಶುರುವಾಯ್ತು ಆತಂಕ
GST ತೆರಿಗೆಯಿಂದ ₹59,274 ಕೋಟಿ ರಾಜ್ಯಕ್ಕೆ ನಷ್ಟವಾಗಿದೆ. 15ನೇ ಹಣಕಾಸು ಆಯೋಗದಿಂದ ತೆರಿಗೆ ಪಾಲು ₹62,098 ಕೋಟಿ ಬರಬೇಕಿದೆ. ಸೆಸ್ ಮತ್ತು ಸರ್ಚಾರ್ಜ್‌ನಿಂದ ₹55,000 ಕೋಟಿ ಬಾಕಿ ಇದೆ. 15ನೇ ಹಣಕಾಸು ಆಯೋಗ ವಿಶೇಷ ಅನುದಾನದಿಂದ ₹11,495 ಕೋಟಿ ಬಾಕಿ ಇದೆ. ಒಟ್ಟಾರೆ 1,87,867 ಕೋಟಿ ರೂಪಾಯಿ ನಷ್ಟವಾಗಿದೆ. ಹಾಗೇ ಕೋವಿಡ್ ಸಂದರ್ಭದಲ್ಲೂ ಅನ್ಯಾಯವಾಗಿದ್ದು, ನೆರೆ-ಬರ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ. ರಾಜ್ಯದ ನೀರಾವರಿಗೆ ಅನುದಾನ ನೀಡಿಲ್ಲ. ಭದ್ರಾಮೇಲ್ದಂಡೆ ಯೋಜನೆಗೆ ₹5,300 ಕೋಟಿ ಕೊಟ್ಟಿಲ್ಲ. 2024-25ರಲ್ಲೂ ತೆರಿಗೆ ವಿಚಾರದಲ್ಲಿ ಅನ್ಯಾಯ ಮಾಡಿದ್ದು ಪೆರಿಪರಲ್ ರಿಂಗ್ ರಸ್ತೆಗೆ ₹3000 ಕೋಟಿ ಬರಬೇಕು. ಜಲಮೂಲಗಳ ಅಭಿವೃದ್ಧಿಗೆ ₹3,000 ಕೋಟಿ ನೀಡಬೇಕು. 5 ವರ್ಷದಲ್ಲಿ 73 ಸಾವಿರ ಕೋಟಿ ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ರಾಜ್ಯದಿಂದ 100 ರೂಪಾಯಿ ತೆಗೆದುಕೊಂಡು 12 ರಿಂದ 13 ರೂಪಾಯಿ ಮಾತ್ರ ಕೊಡ್ತಾರೆ. ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. 223 ತಾಲೂಕುಗಳನ್ನು ಬರ ಎಂದು ಘೋಷಿಸಿದ್ದೇವೆ. ಬರಗಾಲದಲ್ಲಿ 37 ಸಾವಿರ ಕೋಟಿ ನಷ್ಟವಾಗಿದೆ. 17,901 ಕೋಟಿ ಪರಿಹಾರ ಕೇಳಿದ್ರೂ ಎನ್‌ಡಿಆರ್‌ಎಫ್‌ನಡಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಅನುದಾನ ತಾರತಮ್ಯ ಮಾಡುತ್ತಿರುವ ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಫೆಬ್ರವರಿ 7ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಎಲ್ಲಾ ಸಚಿವರು, ಶಾಸಕರು, ಮೇಲ್ಮನೆ, ಕೆಳಮನೆ ಸದಸ್ಯರೆಲ್ಲ ಭಾಗವಹಿಸ್ತಾರೆ. ಮಂಗಳವಾರ ಸಂಜೆಯೇ ಎಲ್ಲರೂ ದೆಹಲಿಗೆ ಹೋಗೋದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ಧ ತಿರುಗಿ ಬಿದ್ದಿದ್ರೆ ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ್ಕೆ ಎಷ್ಟು ಹಣ ಬಂದಿದೆ? ಎಷ್ಟು ರಸ್ತೆ ಅಭಿವೃದ್ಧಿಯಾಗಿದೆ? ರೈಲ್ವೆ ಯೋಜನೆಗಳಿಗೆ ಎಷ್ಟು ಹಣ ನೀಡಿದೆ ಎಂಬುದರ ಬಗ್ಗೆ ಸಂಖ್ಯಾ ಮಾಹಿತಿಗಳಿರುವ ಪೋಸ್ಟ್ ಬಿಡುಗಡೆ ಮಾಡಿ ರಾಜ್ಯ ಬಿಜೆಪಿ ಕಿಡಿಕಾರಿದೆ.
ಬಿಜೆಪಿ ಪೋಸ್ಟ್‌ನಲ್ಲಿ ಏನಿದೆ?
- ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನೀಡಿದ್ದಕ್ಕಿಂತ 3 ಪಟ್ಟು ಅಧಿಕ ತೆರಿಗೆ ಪಾಲು
- ಮತ್ತು ಅನುದಾನಗಳನ್ನು ನೀಡಿದ್ದು ನರೇಂದ್ರ ಮೋದಿ ಸರ್ಕಾರ
- 2004 ರಿಂದ 2014ರ ವರೆಗೆ ಯುಪಿಎ ಅಧಿಕಾರದಲ್ಲಿದ್ದಾಗ ಕಲ್ಲಿದ್ದಲು ಹಗರಣ
- 2ಜಿ ಹಗರಣ, ಕಾಮನ್‌ವೆಲ್ತ್ ಹಗರಣಗಳಂಥ ಬಾನ ಗಡಿಗಳ ನಡುವೆ ಅನುದಾನ
- ಕರ್ನಾಟಕಕ್ಕೆ ನೀಡಲು ಅಂದಿನ ಸರ್ಕಾರದ ಬಳಿ ಇದ್ದದ್ದೇ 81,795 ಕೋಟಿ ರೂ.
- ಇದಕ್ಕೆ ಹೋಲಿಸಿದರೆ ಮೋದಿ ಸರ್ಕಾರ ನೀಡಿರುವ 2,82,791 ಕೋಟಿ ರೂಪಾಯಿ
- ಶೇ.245 ರಷ್ಟು ಹೆಚ್ಚು ಎಂಬುದನ್ನು ಕಾಂಗ್ರೆಸ್ ಯಾವತ್ತೂ ಮರೆಮಾಚಲು ಸಾಧ್ಯವಿಲ್ಲ
- ಕರ್ನಾಟಕದ ಅಭಿವೃದ್ಧಿಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ಸಿಕ್ಕಿದೆ ಎಂಬುದನ್ನು ತಿರುಚಬೇಡಿ
- ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಬಂದ 60,779 ಕೋಟಿ ರೂಪಾಯಿಗಿಂತಲೂ ಹೆಚ್ಚು
- ಮೋದಿ ಸರ್ಕಾರ ನೀಡಿದ 2,08,882 ಕೋಟಿ ರೂಪಾಯಿ ಹೆಚ್ಚು ಎಂಬುದು ಸತ್ಯ
- ಸತ್ಯ ಅರಿಯಲು ಅರ್ಥಶಾಸ್ತ್ರ ಗೊತ್ತಿರಲೇಬೇಕೆಂದು ಇಲ್ಲ, ಲೆಕ್ಕ ಗೊತ್ತಿದ್ದರೂ ಸಾಕು
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನೀಡಿದ್ದಕ್ಕಿಂತ ಮೂರುಪಟ್ಟು ಅಧಿಕ ತೆರಿಗೆಪಾಲು ಮತ್ತು ಅನುದಾನಗಳನ್ನು ನೀಡಿದ್ದು ನರೇಂದ್ರ ಮೋದಿ ಸರ್ಕಾರ. 2004 ರಿಂದ 2014ರ ವರೆಗೆ ಯುಪಿಎ ಅಧಿಕಾರದಲ್ಲಿದ್ದಾಗ ಕಲ್ಲಿದ್ದಲು ಹಗರಣ, 2ಜಿ ಹಗರಣ, ಕಾಮನ್‌ವೆಲ್ತ್ ಹಗರಣಗಳಂಥ ಬಾನ ಗಡಿಗಳ ನಡುವೆ ಕರ್ನಾಟಕಕ್ಕೆ ನೀಡಲು ಅಂದಿನ ಕೇಂದ್ರ ಸರ್ಕಾರದ ಬಳಿ ಇದ್ದದ್ದೇ 81,795 ಕೋಟಿ ರೂಪಾಯಿ. ಇದಕ್ಕೆ ಹೋಲಿಸಿದರೆ ಮೋದಿ ಸರ್ಕಾರ ನೀಡಿರುವ 2,82,791 ಕೋಟಿ ರೂಪಾಯಿ ಶೇ.245 ರಷ್ಟು ಹೆಚ್ಚು ಎಂಬುದನ್ನು ಕಾಂಗ್ರೆಸ್ ಯಾವತ್ತೂ ಮರೆಮಾಚಲು ಸಾಧ್ಯವಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ಸಿಕ್ಕಿದೆ ಎಂಬುದನ್ನು ತಿರುಚಲು ನೀವು ಎಷ್ಟೇ ಪ್ರಯತ್ನಿಸಿದರೂ ಅಸಾಧ್ಯ. ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಬಂದ 60,779 ಕೋಟಿ ರೂಪಾಯಿಗಿಂತಲೂ ಮೋದಿ ಸರ್ಕಾರ ನೀಡಿದ 2,08,882 ಕೋಟಿ ರೂಪಾಯಿ ಹೆಚ್ಚು ಎಂಬುದನ್ನು ಅರಿಯಲು ಅರ್ಥಶಾಸ್ತ್ರ ಗೊತ್ತಿರಲೇಬೇಕೆಂದು ಇಲ್ಲ, ಲೆಕ್ಕ ಗೊತ್ತಿದ್ದರೂ ಸಾಕು ಎಂದು ಕಿಡಿ ಕಾರಿದೆ.
ಇದಿಷ್ಟೇ ಅಲ್ದೇ ರಸ್ತೆ ನಿರ್ಮಾಣ, ರೈಲ್ವೆ ಯೋಜನೆಗಳಿಗೆ ಹಣ ಸೇರಿದಂತೆ ಅಂಕಿ ಅಂಶಗಳನ್ನ ನೀಡಿ ಬಿಜೆಪಿ ತಿರುಗೇಟು ನೀಡಿದೆ. ಬ್ರಿಟೀಷರು ಭಾರತವನ್ನು ಬಿಟ್ಟು ಹೋದಲ್ಲಿಂದ ಹಿಡಿದು 2014 ರಲ್ಲಿ ಕಾಂಗ್ರೆಸ್ ಅಧಿಕಾರ ಬಿಟ್ಟು ತೊಲಗುವವರೆಗೆ 67 ವರ್ಷಗಳಲ್ಲಿ ಕರ್ನಾಟಕದಲ್ಲಿ ಆದ ರೈಲ್ವೇ ವಿದ್ಯುದೀಕರಣ ಕೇವಲ 16 ಕಿಲೋಮೀಟರ್. ಆದರೆ ಕಾಂಗ್ರೆಸ್ಸನ್ನು ಉಚ್ಛಾಟಿಸಿ ಬಂದ ಮೋದಿ ಸರ್ಕಾರ ಮಾಡಿದ ರೈಲ್ವೆ ವಿದ್ಯುದೀಕರಣ ಬರೋಬ್ಬರಿ 3265 ಕಿಮೀ ಎಂದು ಆಕ್ರೋಶ ಹೊರ ಹಾಕಿದೆ. ಸದ್ಯ ರಾಜ್ಯ ರಾಜಕೀಯದಲ್ಲಿ ಅನುದಾನ ತಾರತಮ್ಯ ವಿಚಾರ ಕಿಚ್ಚು ಹಚ್ಚಿದೆ. ಫೆಬ್ರವರಿ 7ರಂದು ಕಾಂಗ್ರೆಸ್ ದೆಹಲಿಯಲ್ಲಿ ಪ್ರತಿಭಟನೆ ಮುಂದಾಗಿದ್ದು ಮತ್ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡ್ಬೇಕು.