ಇನ್ಮುಂದೆ 10ನೇ ತರಗತಿ ವಿದ್ಯಾರ್ಥಿಗಳಿಗೂ ವಾರಕ್ಕೆರಡು ಬಾರಿ ಸಿಗಲಿದೆ ಮೊಟ್ಟೆ ಭಾಗ್ಯ!
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗುವ ರೀತಿಯಲ್ಲಿ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಹಲವಾರು ಕೊಡುಗೆ ನೀಡಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನೀಡುವ ಊಟದಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ವಾರದಲ್ಲಿ 2 ಬಾರಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಬಿಸಿಯೂಟ ಯೋಜನೆಗೆ 280 ಕೋಟಿ ನೀಡಲು ನಿರ್ಧರಿಸಲಾಗಿದ್ದು, ಈ ಯೋಜನೆ ಇದೀಗ 9 ಮತ್ತು 10ನೇ ತರಗತಿಗೂ ವಿಸ್ತರಣೆಯಾಗಲಿದೆ.
ಇದನ್ನೂ ಓದಿ: ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್ ಗಿಫ್ಟ್ – ಆರೋಗ್ಯ ವಲಯಕ್ಕೂ ಹೆಚ್ಚಿನ ಆದ್ಯತೆ
ಇನ್ನು ಮಕ್ಕಳಲ್ಲಿನ ಕಲಿಕಾ ದೋಷಗಳ ನಿವಾರಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, 80 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ಕಾರ್ಯಕ್ರಮ ರೂಪಿಸಲು ನಿರ್ಧಾರ ಮಾಡಲಾಗಿದೆ. ಮರುಸಿಂಚನ ಯೋಜನೆಯಡಿ ಪ್ರೌಢಹಂತದ ಪರೀಕ್ಷೆಗೆ ಸಜ್ಜುಗೊಳಿಸಲು ಮಕ್ಕಳಿಗೆ ವಿಶೇಷ ತರಬೇತಿ ಜೊತೆಗೆ ಮಾಧ್ಯಮಿಕ, ಪದವಿ ಪೂರ್ವ ಕಾಲೇಜುಗಳಲ್ಲಿ ಲ್ಯಾಬ್ ಆರಂಭ ಮಾಡಲಾಗುವುದು. ಇನ್ನು 2 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯಗಳ ಸ್ಥಾಪನೆಗೆ ಅಸ್ತು ಎನ್ನಲಾಗಿದೆ. ಮತ್ತು ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ 4 ಲ್ಯಾಬ್ಗಳ ಸ್ಥಾಪನೆ ಮಾಡಲಾಗುವುದು.
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ., ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಅನುದಾನ ನೀಡಲಾಗಿದೆ. ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.