ಅಭಿನಯ ಸರಸ್ವತಿಗೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ – ನೇತ್ರದಾನದ ಮೂಲಕ ಸರೋಜಾದೇವಿ ಅಮರ

ಅಭಿನಯ ಸರಸ್ವತಿಗೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ – ನೇತ್ರದಾನದ ಮೂಲಕ ಸರೋಜಾದೇವಿ ಅಮರ

ನಟಿಸಿದಂತೆ ಬದುಕುವುದು ಬೇರೆ.. ಬದುಕಿದಂತೆ ನಟಿಸುವುದು ಕೂಡಾ ಬೇರೆ. ಆದರೆ, ಅಭಿನಯ ಸರಸ್ವತಿ ಬದುಕಿಗೂ, ನಟನೆಗೂ ಎರಡಕ್ಕೂ ಪ್ರೇರಣೆಯಾದವರು. ಅಮ್ಮನಿಗೆ ಕೊಟ್ಟ ಮಾತಂತೆ, ಗಂಡನ ಆದರ್ಶದಂತೆ, ಮಕ್ಕಳಿಗೆ ಪ್ರೀತಿಯ ಅಮ್ಮನಾಗಿ, ಕಲಾವಿದರ ಪಾಲಿಗೆ ಪ್ರೀತಿಯ ಸರೋಜಮ್ಮನಾಗಿ ಸ್ಪೂರ್ತಿ ತುಂಬಿದವರು. ಈಗ ಮಹಾನ್ ಕಲಾವಿದೆ ಮರೆಯಾಗಿದ್ದಾರೆ. ಸಿನಿಮಾ ಮೂಲಕ ಮರೆಯಲಾಗದಷ್ಟು ನೆನಪಿನ ಬುತ್ತಿ ಉಳಿಸಿ ಅಮರರಾಗಿದ್ದಾರೆ.

ಇದನ್ನೂ ಓದಿ: ಅಭಿನವ ಸರಸ್ವತಿಯ ಬದುಕಿನಲ್ಲಿ ನೋವುಗಳ ಸರಮಾಲೆ – ಅಮ್ಮನಿಗೆ ಕೊಟ್ಟ ಮಾತನ್ನು ಕೊನೆತನಕ ಉಳಿಸಿಕೊಂಡಿದ್ದರು ಸರೋಜಾದೇವಿ

ನಟಿ ಬಿ. ಸರೋಜಾದೇವಿ ಅವರು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದ್ದರು. ಈಗ ನೇತ್ರದಾನದ ಮೂಲಕ ನಿಧನದ ನಂತರವೂ ಸಾರ್ಥಕತೆ ಮೆರೆದಿದ್ದಾರೆ. 87 ವರ್ಷದ ಹಿರಿಯ ತಾರೆಯ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ. ನಾರಾಯಣ ನೇತ್ರಾಲಯದ ವೈದ್ಯರು ಆಗಮಿಸಿ ಕಣ್ಣುಗಳನ್ನು ತೆಗೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನೇತ್ರದಾನಕ್ಕೆ ಮಾದರಿ ಆದವರು ಡಾ. ರಾಜ್​ಕುಮಾರ್. ನಿಧನದ ಬಳಿಕ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಅದೇ ರೀತಿ ಪುನೀತ್ ರಾಜ್​ಕುಮಾರ್ ಅವರ ಕಣ್ಣುಗಳನ್ನು ಕೂಡ ದಾನ ಮಾಡಲಾಯಿತು. ಈಗ ನಟಿ ಸರೋಜಾದೇವಿ ಅವರು ಸಹ ಈ ವಿಚಾರದಲ್ಲಿ ಮಾದರಿ ಆಗಿದ್ದಾರೆ.

ಬಿ. ಸರೋಜಾದೇವಿಯವರ ಅಂತಿಮದರ್ಶನಕ್ಕೆ ಹಲವಾರು ಗಣ್ಯರು, ಸಿನಿಮಾರಂಗದ ಕಲಾವಿದರು ಆಗಮಿಸಿದರು. ಮಂಗಳವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಹಿರಿಯ ನಟಿಗೆ ಅಂತಿಮ ನಮನ ಸಲ್ಲಿಸಿದರು.

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಸರೋಜಾದೇವಿಯವರ ಅಂತ್ಯಕ್ರಿಯೆ ನಡೆಯಲಿದೆ. ಇದೇ ಜಾಗದಲ್ಲಿ ಬಿ. ಸರೋಜಾದೇವಿ ಅವರ ತಾಯಿ ರುದ್ರಮ್ಮ ಸಮಾಧಿ ಕೂಡ ಇದೆ. ಮಂಗಳವಾರ  ಮಧ್ಯಾಹ್ನ ಒಕ್ಕಲಿಗ ಸಂಪ್ರದಾಯದಂತೆ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರ ನಡೆಯುತ್ತದೆ.

Sulekha