ಆ. 5 ರಂದು ಗೃಹಜ್ಯೋತಿ ಯೋಜನೆಗೆ ಸಿಎಂ ಸಿದ್ದರಾಮಯ್ಯರಿಂದ ಅಧಿಕೃತ ಚಾಲನೆ
ಬೆಂಗಳೂರು: ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆ. ರಾಜ್ಯದ ಲಕ್ಷಾಂತರ ಗ್ರಾಹಕರು ಈ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದೀಗ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಆ. 5 ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಆಗಸ್ಟ್ 5ರಂದು ಕಲಬುರಗಿಯ ಎನ್‌ವಿ ಮೈದಾನದಲ್ಲಿ ‘ಗೃಹ ಜ್ಯೋತಿ’ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯಸಭೆಯ ಪತ್ರಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಿರಿಯ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಎಸ್‌ಐಟಿ ಸಮಿತಿ ರಚನೆ ಬೇಡಿಕೆ ತಳ್ಳಿ ಹಾಕಿದ ಸಿಎಂ
200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವ ಯೋಜನೆ ಕೇವಲ ವಿದ್ಯುತ್ ಶುಲ್ಕದ ಕಡಿಮೆ ಮಾಡುತ್ತಿಲ್ಲ, ಬದಲಾಗಿ ಕುಟುಂಬದ ಆರ್ಥಿಕ ಪ್ರಗತಿಯ ಮೂಲಕ ಸಾಮಾಜಿಕ ಭದ್ರತೆ ನೀಡಲಿದೆ. ಮಧ್ಯಮ ವರ್ಗದ ಜನರ ಜೀವನ ಸುಧಾರಣೆ ಮಾಡುವ ಮಹಾತ್ವಾಕಾಂಕ್ಷಿ ಯೋಜನೆ ಗೃಹಜ್ಯೋತಿ. ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಮೊದಲ ತಿಂಗಳಿನಲ್ಲೇ ಸುಮಾರು 1.42 ಕೋಟಿ ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ ಎಂದು ಹೇಳಿದ್ದಾರೆ.
ಜುಲೈ 27ರ ಮೊದಲು ಅರ್ಜಿ ಸಲ್ಲಿಸಿದವರು ಮಾತ್ರ ಜುಲೈ ತಿಂಗಳ ವಿದ್ಯುತ್ ಬಳಕೆಯ ಶುಲ್ಕದಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಜುಲೈ 27ರ ನಂತರ ಅರ್ಜಿ ಸಲ್ಲಿಸಿದವರು ಆಗಸ್ಟ್‌ನಲ್ಲಿ ಅವರ ಬಳಕೆಯ ಆಧಾರದ ಮೇಲೆ ಸೆಪ್ಟೆಂಬರ್‌ನ ಬಿಲ್ಲಿಂಗ್‌ನಲ್ಲಿ ಪ್ರಯೋಜನ ಪಡೆಯುತ್ತಾರೆ. ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಅಂತಿಮ ದಿನಾಂಕ ಘೋಷಿಸಿಲ್ಲ. ಯಾವುದೇ ಸಮಯದಲ್ಲಿ ನೋಂದಾಯಿಸಿಕೊಂಡರೂ ಅದರ ನಂತರದ ತಿಂಗಳಿನಿಂದ ಪ್ರಯೋಜನ ಪಡೆಯಬಹುದು. 1.42 ಕೋಟಿ ಅರ್ಜಿದಾರರ ಪೈಕಿ ಸುಮಾರು 18 ಲಕ್ಷ ಮಂದಿ ‘ಭಾಗ್ಯ ಜ್ಯೋತಿ’, ಕುಟೀರ ಜ್ಯೋತಿ’ ಮತ್ತು ‘ಅಮೃತ್ ಜ್ಯೋತಿ’ ಯಂತಹ ಹಾಲಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
2.14 ಕೋಟಿ ಗೃಹಬಳಕೆದಾರರ ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲು ಈಗಾಗಲೇ ಒಂದು ವರ್ಷದ ವಿದ್ಯುತ್ ಬಳಕೆಯ ಸರಾಸರಿ ಲೆಕ್ಕಾಚಾರ ಮಾಡಲಾಗಿದೆ. 2022- 2023 ಹಣಕಾಸು ವರ್ಷದ ಸರಾಸರಿ ಬಳಕೆಯನ್ನು ಪರಿಗಣಿಸಿ, ಪ್ರತಿ ಗ್ರಾಹಕರ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ 10 ಪ್ರತಿಶತವನ್ನು ನೀಡುವ ಮೂಲಕ ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲಾಗುತ್ತದೆ. ಆದರೆ ಗರಿಷ್ಠ ಉಚಿತ ವಿದ್ಯುತ್ ಬಳಕೆಯ ಮಿತಿಯನ್ನು 200 ಯುನಿಟ್‌ಗಳಿಗೆ ನಿರ್ಬಂಧಿಸಲಾಗಿದೆ ಎಂದು ಕೆ.ಜೆ ಜಾರ್ಜ್ ಹೇಳಿದ್ದಾರೆ.