ಲೀಲಾವತಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ
ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಶುಕ್ರವಾರ ನಿಧನರಾದ್ದಾರೆ. ಬೆಂಗಳೂರಿನ ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಿಎಂ ಸಿದ್ಧರಾಮಯ್ಯ ಅವರು ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ವಿನೋದ್‌ರಾಜ್‌ಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: ಅಜ್ಜಿಯ ಮೃತದೇಹದ ಮುಂದೆ ಮೌನಕ್ಕೆ ಶರಣಾದ ಮೊಮ್ಮಗ – ಪಕ್ಕದಲ್ಲೇ ಕುಳಿತು ಅಪ್ಪನಿಗೆ ಧೈರ್ಯ ತುಂಬಿದ ಯುವರಾಜ್
ಶನಿವಾರ ಲೀಲಾವತಿಯವರ ಅಂತ್ಯಸಂಸ್ಕಾರಕ್ಕೆ ಮುನ್ನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಅಂತಿಮ ದರ್ಶನ ಪಡೆದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿರಿಯ ನಟಿ ಲೀಲಾವತಿಯವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಸೋಲದೇವನಹಳ್ಳಿಯ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದೆ. ಆಗ ಅವರ ಪುತ್ರ ಅಲ್ಲಿದ್ದರು. ಅವರ ಮಗ ವಿನೋದ್ ನಲ್ಲಿ ತಾಯಿಯನ್ನು ಕೊನೆಕಾಲದಲ್ಲಿ ಚೆನ್ನಾಗಿ ನೋಡಿಕೋ ಎಂದು ಹೇಳಿ ಬಂದಿದ್ದೆ. ತಾಯಿ-ಮಗನ ಬಾಂಧವ್ಯ ಅನ್ಯೋನ್ಯವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇವತ್ತು ಲೀಲಾವತಿಯವರಿಗೆ ಸರ್ಕಾರದ ಎಲ್ಲಾ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲು ನಾನು ಆದೇಶ ನೀಡಿದ್ದೇನೆ. ಅವರು ಕರ್ನಾಟಕ ಚಲನಚಿತ್ರ ಕಂಡ ಅಪರೂಪದ ನೈಜ ನಟನೆಯ ಕಲಾವಿದೆ. ರಂಗಭೂಮಿಯಿಂದ ಸಿನಿಮಾರಂಗಕ್ಕೆ ಬಂದು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಮಾಡಿದ್ದಾರೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ, ಡಿಸಿಎಂ ಡಿಕೆ ಶಿವಕುಮಾರ್ ಕೂಡ ಲೀಲಾವತಿ ಅವರ ಅಂತಿಮ ದರ್ಶನ ಪಡೆದು, ವಿನೋದ್ ರಾಜ್‌ಗೆ ಸಾಂತ್ವನ ಹೇಳಿದ್ದಾರೆ. ಇನ್ನು ನಟಿ ಲೀಲಾವತಿ ಅವರಿಗೆ ಹಿರಿಯ ನಟ ದ್ವಾರಕೀಶ್ ಅಂತಿಮ ನಮನ ಸಲ್ಲಿಸಿದ್ದಾರೆ. ಲೀಲಾವತಿ ಅವರ ಜೊತೆ ನಾನು ಮಗನಾಗಿ ನಟಿಸಿದ್ದೇ ನನ್ನ ಭಾಗ್ಯ ಎಂದಿದ್ದಾರೆ. ವಿನೋದ್‌ರಾಜ್- ಲೀಲಾವತಿ ದೇವರು ಮಾಡಿಸಿದ ತಾಯಿ, ಮಗ ಎಂದು ಅವರ ಬಾಂಧವ್ಯದ ಬಗ್ಗೆ ದ್ವಾರಕೀಶ್ ಮಾತನಾಡಿದ್ದಾರೆ.