ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ಪುರುಷರಿಗೆ ಶೇ. 50 ರಷ್ಟು ಸೀಟ್ ಮೀಸಲು!

ಬೆಂಗಳೂರು: ಫ್ರೀ..ಫ್ರೀ..ಫ್ರೀ…ಅಂತಾನೆ ಚುನಾವಣೆ ಪ್ರಚಾರದ ವೇಳೆ ಭರವಸೆ ನೀಡಿದ್ದ ಐದು ಘೋಷಣೆಗಳನ್ನು ಇಂದು ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಆ ಪೈಕಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಯನ್ನು ಜೂನ್ 11ರಿಂದ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 10 ಕೆ.ಜಿ ಪಡಿತರ – ಯಾವಗಿನಿಂದ ಈ ಯೋಜನೆ ಜಾರಿ?
ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಎಲ್ಲಾ ವಿದ್ಯಾರ್ಥಿನಿಯರು, ಮಹಿಳೆಯರಿಗೆ ʼಶಕ್ತಿʼ ಯೋಜನೆ ಅನ್ವಯವಾಗಲಿದೆ. ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಬಹುದು ಎಂದು ಹೇಳಿದರು.
ಸಮಾಜದಲ್ಲಿ 50%ರಷ್ಟು ಮಹಿಳೆಯರಿದ್ದು, ಸ್ಥಾನಮಾನ ಪರಿಗಣಿಸದೇ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್ 11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್‌ಪ್ರೆಸ್, ರಾಜಹಂಸ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ (ಎಸಿ ಬಸ್,ಐಶಾರಾಮಿ ಬಸ್,ಎಸಿ ಸ್ಲೀಪರ್,ರಾಜಹಂಸ ಬಸ್ ಗೆ ಉಚಿತ ಪ್ರಯಾಣ ಅನ್ವಯ ಇಲ್ಲ) ಬಸ್‌ಗಳಲ್ಲಿ ಉಚಿತ ಪ್ರಯಾಣ ಇರಲಿದೆ. KSRTC ಬಸ್‌ನಲ್ಲಿ 50% ರಷ್ಟು ಆಸನ ಪುರುಷರಿಗೆ ಮೀಸಲಾಗಿರುತ್ತೆ. ಇಡೀ ಬಸ್‌ನಲ್ಲಿ ಪೂರ್ಣ ಮಹಿಳೆಯರೇ ಹೋಗುವಂತಿಲ್ಲ, ಜೊತೆಗೆ ಬಿಎಂಟಿಸಿ ಬಸ್ ನಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಪ್ರತ್ಯೇಕ ಸೀಟು ಮೀಸಲಾತಿ ಇರೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.