ಮನೆ ಯಜಮಾನಿಗೆ ತಿಂಗಳಿಗೆ 2,000 ರೂಪಾಯಿ – ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಬೆಂಗಳೂರು: ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಂತೆ ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಕಾಂಗ್ರೆಸ್ ಚುನಾವಣೆ ವೇಳೆ ಹೇಳಿತ್ತು. ಇದೀಗ ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಮನೆ ಒಡತಿಯ ಖಾತೆಗೆ ಪ್ರತಿ ತಿಂಗಳು 2,000 ರೂ. ಬರುವಂತಹ ಗೃಹಲಕ್ಷ್ಮಿ ಯೋಜನೆ ಆಗಸ್ಟ್ 15 ರಿಂದ ಜಾರಿಗೆ ಬರುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಮನೆ ಯಜಮಾನಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ನೀಡುತ್ತೇವೆ. ಇದಕ್ಕಾಗಿ ಮನೆ ಯಜಮಾನಿ ಯಾರು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಹಾಗೂ ಅವರ ಬಳಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಡ್ಡಾಯವಾಗಿ ಇರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜುಲೈ 1 ರಿಂದ 200 ಯುನಿಟ್ ವಿದ್ಯುತ್ ಉಚಿತ – ಬಾಡಿಗೆ ಮನೆಯಲ್ಲಿ ಇರುವವರಿಗೆ ಫ್ರೀ ಇದೆಯೇ?
ಈ ಯೋಜನೆ ಆಗಸ್ಟ್ 15 ರಂದು ಯೋಜನೆ ಜಾರಿಗೆ ಬರಲಿದೆ. ಮನೆಯ ಯಜಮಾನಿ ಅತ್ತೆಯೋ ಅಥವಾ ಸೊಸೆಯೋ ಎಂಬುದನ್ನು ಆಯಾ ಮನೆಯವರೇ ಅರ್ಜಿಯಲ್ಲಿ ಉಲ್ಲೇಖಿಸಿ, ಸಂಬಂಧಿಸಿದ ದಾಖಲಾತಿ ಸಲ್ಲಿಸಬೇಕು. ಆದರೆ ಆಕೆಗೆ 18 ವರ್ಷ ತುಂಬಿರಬೇಕು. ಆಗಸ್ಟ್ 15 ಕ್ಕೆ ಕುಟುಂಬ ಯಜಮಾನಿಯ ಖಾತೆಗೆ ಹಣ ಬರುತ್ತದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರು ಎಲ್ಲರೂ ಇದಕ್ಕಾಗಿ ಅರ್ಜಿ ಹಾಕಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರಿಗೂ ಗೃಹಲಕ್ಷ್ಮಿ ಸಿಗಲಿದೆ. ಅಂಗವಿಕಲ, ವಿಧವಾವೇತನ ಸೇರಿ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುವವರಿಗೂ ಇದು ಅನ್ವಯ ಆಗುತ್ತದೆ. ಕುಟುಂಬದ ಯಜಮಾನಿಗೆ ಮಾತ್ರ ಹಣ ಬರುತ್ತದೆ. ಅರ್ಜಿ ಹಾಕಿದ ಮೇಲೆ ಅಕೌಂಟ್, ಆಧಾರ್, ಮಾಹಿತಿ ಪಡೆದು ಯೋಜನೆ ಜಾರಿಗೊಳಿಸುತ್ತೇವೆ. ಯಾವ ಷರತ್ತು ನಿಗದಿ ಮಾಡಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗಲು ಸರ್ಕಾರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮೊದಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕು. ಅರ್ಜಿಯಲ್ಲಿ ಮನೆಯ ಯಜಮಾನಿ ಯಾರು ಎಂಬುದನ್ನು ಆಯಾ ಮನೆಯವರೇ ಉಲ್ಲೇಖಿಸಬೇಕು. ಈ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕು. ಜೂನ್ 15 ರಿಂದ ಜುಲೈ 15 ರ ಅವಧಿಯಲ್ಲಿ ಅರ್ಜಿ ಹಾಕಬೇಕು. ಈ ಯೋಜನೆ ಆಗಸ್ಟ್ 15 ರಿಂದ ಚಾಲನೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.