ಐದು ಗ್ಯಾರಂಟಿ ಬಳಿಕ ಶಾಲಾ ಮಕ್ಕಳಿಗೆ ಸಿದ್ದರಾಮಯ್ಯ ಹೊಸ ಗ್ಯಾರಂಟಿ – ರಾಜ್ಯೋತ್ಸವ ದಿನ ಏನಿದು ಗಿಫ್ಟ್?

ಐದು ಗ್ಯಾರಂಟಿ ಬಳಿಕ ಶಾಲಾ ಮಕ್ಕಳಿಗೆ ಸಿದ್ದರಾಮಯ್ಯ ಹೊಸ ಗ್ಯಾರಂಟಿ – ರಾಜ್ಯೋತ್ಸವ ದಿನ ಏನಿದು ಗಿಫ್ಟ್?

ಬೆಂಗಳೂರು: ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಶುಭದಿನದಂದೇ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ಕುಡಿಯುವ ನೀಡುವುದಾಗಿ ಭರವಸೆ ನೀಡಿದ್ದಾರೆ.

68ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇಂದಿನಿಂದ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೋಷಕರು ಹೆಚ್ಚಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಕಲಿತರೇ ಮೇದಾವಿಗಳಾಗಲ್ಲ, ಸಾಧಾನೆ ಮಾಡಲು ಸಾಧ್ಯವಿಲ್ಲ ಎಂಬುವ ತಪ್ಪು ಕಲ್ಪನೆ ಪೋಷಕರಲ್ಲಿ ಮೂಡಿದೆ. ನಮ್ಮ ಪ್ರಯತ್ನಗಳಿಗೆ ನ್ಯಾಯಾಲಯ ಸಹ ಸಹಕಾರ ನೀಡುತ್ತಿಲ್ಲ. ನ್ಯಾಯಾಲಯ ಕೂಡಾ ಪೋಷಕರು ಇಚ್ಛಿಸುವ ಮಾಧ್ಯಮದಲ್ಲಿಯೇ ಮಕ್ಕಳು ಓದಬೇಕು ಅಂತ ಹೇಳಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ನಮ್ಮ ಕಲಿಕೆ ಭಾಷೆ ಆಗಬೇಕು. ಇತ್ತೀಚೆಗೆ ಹೆಚ್ಚಿನ ಮಕ್ಕಳ ಖಾಸಗಿ ಶಾಲೆಗಳಲ್ಲಿ ವ್ಯಾಸಾಂಗ ಮಾಡಿಸುತ್ತಿರುವುದು ಅಪಾಯದ ಬೆಳವಣಿಗೆ. ಪೋಷಕರು ಖಾಸಗಿಯತ್ತ ಪೋಮುಖ ಮಾಡುತ್ತಿದ್ದಾರೆ. ಕನ್ನಡದಲ್ಲಿ ಓದಿದರೇ ಮೇದಾವಿಗಳಾಗುವುದಿಲ್ಲವೆಂಬುವುದು ಹಲವರಲ್ಲಿದೆ. ಕನ್ನಡ ಮಾಧ್ಯಮದಲ್ಲಿ ಓದಿದ  ಅನೇಕ ವಿಜ್ಞಾನಿಗಳು ಜಗತ್ಪ್ರಸಿದ್ಧರಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲೇ ಓದಬೇಕೆನ್ನುವುದು ತಪ್ಪು ಕಲ್ಪನೆ. ಪೋಷಕರು ನಮಗೆ ಸಹಕಾರ ಕೊಡಬೇಕು. ನಮ್ಮ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಅಂತ ಪೋಷಕರು ನಿರ್ಧರಿಸಬೇಕಿದೆ. ಕನ್ನಡ ಭಾಷೆಯಲ್ಲೇ ಕಲಿಯಬೇಕು ಅನ್ನೋ‌ ತೀರ್ಮಾನ ಪೋಷಕರು ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ – ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ

ನಮ್ಮ ಆಡಳಿತ ಜನರಿಗೆ ತಲುಪಬೇಕಾದರೇ ಕನ್ನಡ ಭಾಷೆ ಬಹಳ ಮುಖ್ಯ. ಆಗ ಮಾತ್ರ ಅನೇಕರಿಗೆ ಈ ಸೇವೆ ಸಲ್ಲುತ್ತದೆ. ಬರೀ ಯೋಚನೆ ರೂಪಿಸಿದರೇ ಸಾಲದು, ಕಾರ್ಯಗತವಾಗಬೇಕು. ರಾಜಕಾರಣಿಗಳು, ಅಧಿಕಾರಿಗಳು‌ ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸಬೇಕು.ಈ ಕುರಿತು ಪ್ರಧಾನಿಗಳಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ನಮ್ಮ ಐದು ಯೋಜನೆಗಳ ಪೈಕಿ ನಾಲ್ಕು ಜಾರಿಗೊಳಿಸಿದ್ದೇವೆ. 86 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಅಡಿಯಲ್ಲಿ 1.28 ಲಕ್ಷ ಕುಟುಂಬಗಳಿಗೆ ಅಕ್ಕಿ ಬದಲಿಗೆ ತಲಾ 170 ರೂ. ನೀಡಲಾಗಿದೆ. ಗೃಹಜ್ಯೋತಿ‌ ಅಡಿಯಲ್ಲಿ 1 ಕೋಟಿ 38 ಲಕ್ಷ ಮನೆಗಳಿಗೆ ಈ ಯೋಜನೆ ತಲುಪಿದೆ. ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ 1.7 ಕೋಟಿ ಮಹಿಳೆಯರಿಗೆ ಹಣ ನೀಡಿದ್ದೇವೆ. ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಹಾಲು ವಿತರಣೆ ಮಾಡುತ್ತಿದ್ದೇವೆ. ಹಿಂದಿನ ನಮ್ಮ ಸರ್ಕಾರದಿಂದಲೂ ಈ ಯೋಜನೆ ಮುಂದುವರೆಸುತ್ತಾ ಬಂದಿದ್ದೇವೆ. ಮಕ್ಕಳು ಸ್ವಾಭಿಮಾನದಿಂದ ಬೆಳೆಯುವ ವಾತಾವರಣ ನಿರ್ಮಾಣ ಮಾಡೋಣ ಎಂದರು.

ಕನ್ನಡಿಗರು ಹೆಮ್ಮೆಯಿಂದ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಮೈಸೂರು ರಾಜ್ಯಕ್ಕೆ ಕರ್ನಾಟಕ‌ ಎಂದು ನಾಮಕರಣ ಮಾಡಿ ಇಂದಿಗೆ 50 ವರ್ಷ ತುಂಬಿದೆ. ಸಂಪ್ರದಾಯಯವನ್ನು ರಾಜ್ಯದ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷ ವಾಕ್ಯ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 2024ರ ನವೆಂಬರ್ 1ರ ವರೆಗೂ ಈ ಉತ್ಸವ ನಡೆಯಲಿದೆ. ಕನ್ನಡ ಭಾಷೆಯಲ್ಲೇ ವ್ಯವಹರಿಸುತ್ತೇವೆ ಅಂತಾ ಪ್ರತಿಜ್ಞೆ ಮಾಡಬೇಕಿದೆ. ಬೇರೆ ಭಾಷೆಯಲ್ಲಿ ವ್ಯವಹರಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕಿದೆ. ಭಾಷೆ, ಜಲ, ಸಂಸ್ಕೃತಿ, ಕಲೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಿದೆ. ಕನ್ನಡಿಗರು ಕನ್ನಡದಲ್ಲೇ ಮಾತನಾಡುವುದನ್ನು ಕಲಿಯಬೇಕು. ಬೇರೆ ಭಾಷೆ ಕಲಿಯಬೇಡಿ ಅಂತಲ್ಲ, ಕನ್ನಡ ಭಾಷೆಯನ್ನು ಮಾತನಾಡಿ ಎಂದು ಹೇಳಿದರು.

Shwetha M