ಕುರಿ ಕಾಯುತ್ತಿದ್ದ ಬಾಲಕನನ್ನು ಮತ್ತೆ ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ!

ಕುರಿ ಕಾಯುತ್ತಿದ್ದ ಬಾಲಕನನ್ನು ಮತ್ತೆ ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ!

ಚಿತ್ರದುರ್ಗ: ಶಾಲೆಗೆ ಹೋಗದೇ ಕುರಿಕಾಯುತ್ತಿದ್ದ ಬಾಲಕನೊಬ್ಬನನ್ನು ಸಿಎಂ ಸಿದ್ಧರಾಮಯ್ಯ ಅವರು ಮತ್ತೆ ಶಾಲೆಗೆ ಸೇರಿಸಿದ ಪ್ರಸಂಗ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರ ಗ್ರಾಮದ 11 ವರ್ಷದ ಬಾಲಕ ಯೋಗೇಶ್‌ ಶಾಲೆ ತೋರೆದಿದ್ದ ಬಾಲಕ. ಈತನ ಪೋಷಕರು ಬಡತನದ ಬೇಗೆಯಿಂದ ಬಳಲಿದ್ದು, ಕಳೆದ 2 ವರ್ಷಗಳಿಂದ ಯೋಗೇಶ್‌ನನ್ನು ಒತ್ತಾಯ ಪೂರ್ವಕವಾಗಿ ಶಾಲೆ ಬಿಡಿಸಿ ಕುರಿ ಕಾಯಲು ಕಳುಹಿಸುತ್ತಿದ್ದರು. ಇದನ್ನು ಗಮನಿಸಿದ ಚಳ್ಳಕೆರೆಯ ಮಹೇಂದ್ರ ಈ ಬಗ್ಗೆ ಟ್ವೀಟ್ ಮಾಡಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದರು. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಬಾಲಕನನ್ನು ಶಾಲೆಗೆ ಸೇರಿಸುವಂತೆ ಸೂಚಿಸಿದ್ದರು.

ಇದನ್ನೂ ಓದಿ: ಮೊರಾಕೋ ಭೂಕಂಪದ ಭೀಕರತೆಗೆ ನಿಲ್ಲದ ಮಾರಣ ಹೋಮ – ಸಾವಿನ ಸಂಖ್ಯೆ 2,862ಕ್ಕೆ ಏರಿಕೆ!

ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಬೆನ್ನಲ್ಲೆ ಎಚ್ಚೆತ್ತ ಅಧಿಕಾರಿಗಳು, ಒಂದೇ ದಿನದಲ್ಲಿ ಬಾಲಕನನ್ನು ಪತ್ತೆ ಹಚ್ಚಿದ್ದಾರೆ. ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಕರೆತಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಬಾಲ್ಯದಲ್ಲಿ ನಾನು ಸಹ ಶಿಕ್ಷಣದಿಂದ ವಂಚಿತನಾಗಿದ್ದೆ. ರಾಜಪ್ಪ ಎಂಬ ಮೇಷ್ಟ್ರು ನನಗೆ ಐದನೇ ತರಗತಿಗೆ ದಾಖಲಾತಿ ಮಾಡಿಸಿದ್ದರು ಎಂದು ಬರೆದುಕೊಂಡಿದ್ದಾರೆ.

ಅಂದು ನನಗೆ ಶಿಕ್ಷಣ ಸಿಕ್ಕಿದ್ದರಿಂದ ಇಂದು ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿದ ಬಾಲಕ ಯೋಗೇಶನ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದ್ದಾರೆ. ಇದರಿಂದ ಟ್ವೀಟ್ ಮೂಲಕ ಸಿಎಂ ಕಚೇರಿ ಗಮನ ಸೆಳೆದಿದ್ದ ಸ್ಥಳೀಯ ಮಹೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

Shwetha M