ಸರ್ಕಾರಿ ಶಾಲೆಗಳಲ್ಲಿ ‘ವಿವೇಕ ಕೊಠಡಿ’- ಗೋಡೆಗೆ ಕೇಸರಿ ಬಣ್ಣ ಬಳಿಯುತ್ತಾ ಸರ್ಕಾರ?
‘ಕೇಸರಿ’ ಕಿರಿಕಿರಿಗೆ ಸಿಎಂ ಬೊಮ್ಮಾಯಿ ಗರಂ ಆಗಿದ್ದೇಕೆ?

ಸರ್ಕಾರಿ ಶಾಲೆಗಳಲ್ಲಿ ‘ವಿವೇಕ ಕೊಠಡಿ’-  ಗೋಡೆಗೆ ಕೇಸರಿ ಬಣ್ಣ ಬಳಿಯುತ್ತಾ ಸರ್ಕಾರ?‘ಕೇಸರಿ’ ಕಿರಿಕಿರಿಗೆ ಸಿಎಂ ಬೊಮ್ಮಾಯಿ ಗರಂ ಆಗಿದ್ದೇಕೆ?

ರಾಜ್ಯದ ಸರ್ಕಾರಿ ಶಾಲೆಗಳಿಗೆ ಏಕರೂಪದ ಬಣ್ಣ ಮೂಡಿಸಲು ಸರ್ಕಾರ ಮುಂದಾಗಿದೆ. ಸರ್ಕಾರದ ವಿವೇಕ ಕೊಠಡಿ ನಿರ್ಮಾಣ ಯೋಜನೆಯಂತೆ ಎಲ್ಲಾ ಸರ್ಕಾರಿ ಶಾಲೆಗಳಿಗೆ ಏಕರೂಪದ ಬಣ್ಣ ಬಳಿಯಲು ಸರ್ಕಾರ ಮುಂದಾಗಿದೆ. ಶಾಲಾ ಕೊಠಡಿಗಳಿಗೂ ಸ್ವಾಮಿ ವಿವೇಕಾನಂದ ಎಂದು ಹೆಸರಿಡಲಾಗುತ್ತದೆ. ಜೊತೆಗೆ ವಿವೇಕಾನಂದರ ಉಡುಗೆಯ ಬಣ್ಣ ಕೇಸರಿಯನ್ನೇ ಏಕರೂಪವಾಗಿ ಶಾಲಾ ಕೊಠಡಿಗಳಿಗೂ ಬಳಿಯಲು ಸರ್ಕಾರ ಚಿಂತನೆ ನಡೆಸಿದೆ. 992 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿವೇಕ ಯೋಜನೆಗೆ ಸೋಮವಾರ ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ:ಸಂಸದ ಪ್ರತಾಪ್ ಸಿಂಹ ಬೆದರಿಕೆ- ಬಸ್ ಶೆಲ್ಟರ್ ಮೇಲೆ ಬಂತು ಕಳಶ..!

‘ವಿವೇಕ ಯೋಜನೆ’ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಉದಯವಾದ ಮೇಲೆ ಒಂದೇ ವರ್ಷದಲ್ಲಿ ಇಷ್ಟೊಂದು ಕೊಠಡಿ ನಿರ್ಮಿಸುವ ಕೆಲಸ ಎಂದಿಗೂ ನಡೆದಿರಲಿಲ್ಲ. ಆದರೆ ನಮ್ಮ ಸರ್ಕಾರವು ಒಂದೇ ಬಾರಿಗೆ 7,601 ಕೊಠಡಿ ನಿರ್ಮಿಸಲು ಮುಂದಾಗಿದೆ ಎಂದಿದ್ದಾರೆ. ರಾಜ್ಯದ ಸರ್ಕಾರಿ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚುವ ವಿಚಾರದಲ್ಲಿ ಎದ್ದಿರುವ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಶಾಲಾ ಕೊಠಡಿಗಳ ನಿರ್ಮಾಣದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ. ಕೇಸರಿ ಎಂದರೆ ನಿಮಗೆ ಭಯವೇಕೆ? ನಮ್ಮ ರಾಷ್ಟ್ರಧ್ವಜದಲ್ಲೂ ಕೇಸರಿ ಇದೆ. ಸ್ವಾಮಿ ವಿವೇಕಾನಂದರು ಕೂಡ ಕೇಸರಿ ಬಟ್ಟೆ ಹಾಕಿಕೊಳ್ಳುತ್ತಿದ್ದರು ಎಂದು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡಾ ವಿವೇಕ ಯೋಜನೆಯ ಬಗ್ಗೆ ವಿವರಿಸಿದ್ದಾರೆ. ‘ವಿವೇಕ ಯೋಜನೆ’ಯು ಶಿಕ್ಷಣಕ್ಕೆ ಆದ್ಯತೆ ನೀಡುವ ಪ್ರಯತ್ನದ ಒಂದು ಭಾಗವಷ್ಟೇ ಆಗಿದೆ. ಮಕ್ಕಳಿಗೆ ವಿವೇಕಾನಂದರ ವಿಚಾರದ ಬಗ್ಗೆ ಪರಿಚಯವಾಗಬೇಕು. ಹೀಗಾಗಿ ವಿವೇಕ ಯೋಜನೆ ಎಂಬ ಹೆಸರನ್ನು ಇಡಲಾಗಿದೆ. ಎಲ್ಲಾ ತಾಲೂಕುಗಳಲ್ಲಿಯೂ ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತೇವೆ.

ವಿವೇಕ ಯೋಜನೆಯಡಿ ನಿರ್ಮಿಸುವ ಕೊಠಡಿಗಳಿಗೆ ಹೋದ ಮೇಲೆ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಬಲಿಷ್ಠವಾಗಬೇಕು. ವಿವೇಕ ಎಂದರೆ ಮಕ್ಕಳ ಜ್ಞಾನ ಹೆಚ್ಚಾಗಬೇಕು, ಅವರಿಗೆ ವಿವೇಕಾನಂದರ ವಿಚಾರಗಳ ಪರಿಚಯವಾಗಬೇಕು. ಹೀಗಾಗಿ ವಿವೇಕ ಅಂತ ಹೆಸರು ಇಡಲಾಗಿದೆ. ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ವಿವೇಕ ಶಾಲಾ ಕೊಠಡಿಗಳ ಶಂಕುಸ್ಥಾಪನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕೇಸರಿ ಬಣ್ಣ ಹಚ್ಚಲು ನಾನು ಆದೇಶ ಮಾಡಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಕೊಠಡಿ ನಿರ್ಮಿಸುವ ಎಂಜಿನಿಯರ್ ಕೇಸರಿ ಬಣ್ಣ ಹಚ್ಚಿದರೆ ಹಚ್ಚಬಹುದು. ಅದರಿಂದ ತಪ್ಪೇನೂ ಇಲ್ಲ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಪ್ರತಿಯೊಂದನ್ನೂ ವಿವಾದ ಮಾಡುತ್ತಿವೆ ಎಂದು ಹೇಳಿದ್ದಾರೆ.

suddiyaana