‘ಕೈ’ ಮನೆಯಲ್ಲಿ ಮತ್ತೆ ಸಿಎಂ ಕುರ್ಚಿ ಕದನ – ಕಾಂಗ್ರೆಸ್ ನಾಯಕರ ಹೇಳಿಕೆಯೇ ಬಿಜೆಪಿಗೆ ಅಸ್ತ್ರ
ಸ್ಪಷ್ಟ ಬಹುಮತ. ಸಿಎಂ, ಡಿಸಿಎಂ ಆಯ್ಕೆ. ಒಂದೊಂದೇ ಗ್ಯಾರಂಟಿಗಳ ಜಾರಿ. ಹೀಗೆ ಮೇಲ್ನೋಟಕ್ಕೆ ಕಾಂಗ್ರೆಸ್ನಲ್ಲಿ ಎಲ್ಲೂವೂ ಚೆನ್ನಾಗಿದೆ ಅನ್ನೋ ಹಾಗೇ ಕಂಡ್ರೂ ಕೂಡ ಸಿಎಂ ಕುರ್ಚಿ ಕಿಡಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಸಿದ್ದರಾಮಯ್ಯ ಬಣದ ನಾಯಕರು ಒಬ್ಬರ ಬೆನ್ನಿಗೆ ಒಬ್ಬರಂತೆ ನೀಡ್ತಿರೋ ಹೇಳಿಕೆಗಳೇ ಕಾಂಗ್ರೆಸ್ ಮನೆಯಲ್ಲಿ ಕಿಚ್ಚು ಹಚ್ಚುತ್ತಿದೆ.
ಇದನ್ನೂ ಓದಿ : ಫ್ರೀ ಬಸ್ ಟಿಕೆಟ್ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ! – ವಾರಕ್ಕೆ ಮುಂಚೆ ಟಿಕೆಟ್ ಬುಕ್ಕಿಂಗ್ ಕಡ್ಡಾಯ?
ಈ ಹಿಂದೆ ಸಚಿವ ಎಂ.ಬಿ ಪಾಟೀಲ್, ಸಿದ್ದರಾಮಯ್ಯರೇ ರಾಜ್ಯದಲ್ಲಿ 5 ವರ್ಷ ಸಿಎಂ ಎಂದಿದ್ದರು. ಇದು ಡಿಕೆಶಿ ಹಾಗೂ ಸಿದ್ದು ಬಣದ ನಾಯಕರ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಕೂಡ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಸಿದ್ದರಾಮಯ್ಯ ಅವರು 5 ವರ್ಷ ಅಧಿಕಾರದಲ್ಲಿರುತ್ತಾರೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸಿದ್ದು ಬಣದ ನಾಯಕರು ಈ ರೀತಿ ಹೇಳಿಕೆ ನೀಡುತ್ತಿರುವುದು ಡಿಸಿಎಂ ಡಿಕೆಶಿ ಬಣದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.. ಸಚಿವ ಮಹದೇವಪ್ಪಗೆ ಮಾಡೋಕೆ ಕೆಲಸ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಂದೆಡೆ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ ನಾಳೆಯೇ ಮುಖ್ಯಮಂತ್ರಿ ಸ್ಥಾನ ಬಿಡಿ ಎಂದು ಹೈಕಮಾಂಡ್ ಹೇಳಿದ್ರೆ ಸಿದ್ದರಾಮಯ್ಯ ಸಿಎಂ ಸ್ಥಾನವನ್ನು ತ್ಯಜಿಸುತ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ಸಿಎಂ ಜಟಾಪಟಿ ವಿಚಾರವೇ ಬಿಜೆಪಿಗೆ ಅಸ್ತ್ರವಾಗಿ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ನಾನೇ 5 ವರ್ಷ ಸಿಎಂ ಎಂದು ಸಿದ್ದರಾಮಯ್ಯರೇ ಡಿಕೆಶಿಗೆ ನೇರವಾಗಿ ಹೇಳಬಹುದಿತ್ತು. ಆದರೆ ಅದನ್ನ ಹೆಚ್.ಸಿ ಮಹದೇವಪ್ಪ ಕೈಯಲ್ಲಿ ಹೇಳಿಸುತ್ತಿದ್ದಾರೆ ಅಷ್ಟೇ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ಬಳಿಕವೂ ಸಿಎಂ ಕುರ್ಚಿ ಕದನ ಮತ್ತೊಮ್ಮೆ ಜಟಾಪಟಿಗೆ ಕಾರಣವಾಗಿದೆ.