ಚುನಾವಣಾ ಪ್ರಚಾರಕ್ಕೆ ಕಿಚ್ಚ ಸುದೀಪ್ ಎಂಟ್ರಿ – ಕೇಸರಿ ಮಯವಾಗಲಿದೆ ಸಿಎಂ ತವರು ಕ್ಷೇತ್ರ

ಚುನಾವಣಾ ಪ್ರಚಾರಕ್ಕೆ ಕಿಚ್ಚ ಸುದೀಪ್ ಎಂಟ್ರಿ – ಕೇಸರಿ ಮಯವಾಗಲಿದೆ ಸಿಎಂ ತವರು ಕ್ಷೇತ್ರ

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ನಟ ಸುದೀಪ್ ಸೇರಿದಂತೆ ಹಲವು ಸಿನಿ ತಾರೆಯರು, ಹತ್ತಕ್ಕೂ ಹೆಚ್ಚು ಸಚಿವರು ಸಿಎಂ ಪರ ಪ್ರಚಾರ ಮಾಡಲಿದ್ದಾರೆ.

ಸಿಎಂ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ 4ನೇ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಏ.15ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಬೊಮ್ಮಾಯಿ ಬುಧವಾರ ಶಿಗ್ಗಾಂವಿಯಲ್ಲಿ ಭರ್ಜರಿ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ಫೀಲ್ಡಿಗಿಳಿದ ಐಟಿ – ಸಾವಿರ ಕೋಟಿ ಒಡೆಯ ಕೆಜಿಎಫ್ ಬಾಬುಗೆ ಬಿಗ್ ಶಾಕ್!

ಸಿಎಂ ಬೊಮ್ಮಾಯಿಯೊಂದಿಗೆ ಜೆ.ಪಿ.ನಡ್ಡಾ ಬುಧವಾರ ಬೆಳಗ್ಗೆ  ಹುಬ್ಬಳ್ಳಿಯಿಂದ ಹೊರಟು ಶಿಗ್ಗಾಂವಿಗೆ ಈಗಾಗಲೇ ಆಗಮಿಸಲಿದ್ದಾರೆ. ಶಿಗ್ಗಾಂವಿ ಸಂತೆ ಮೈದಾನದಿಂದ ಭರ್ಜರಿ ರೋಡ್‌ ಶೋ ನಡೆಸಲಿರುವ ನಾಯಕರು, ಹಳೇ ಬಸ್‌ ನಿಲ್ದಾಣದ ಮಾರ್ಗವಾಗಿ ತಾಲೂಕು ಕ್ರೀಡಾಂಗಣದ ವರೆಗೆ ಸಾಗಲಿದ್ದಾರೆ. ಅಲ್ಲಿ 12.15ರಿಂದ ಮಧ್ಯಾಹ್ನ 1.30ರ ವರೆಗೆ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 1.30ರಿಂದ 2ಗಂಟೆ ಅವಧಿಯಲ್ಲಿ ಶಿಗ್ಗಾಂವಿ ತಹಸೀಲ್ದಾರ್‌ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಇನ್ನು ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಈ ಹಿಂದೆಯೇ ಘೋಷಣೆ ಮಾಡಿದ್ದರೂ ಈವರೆಗೆ ಎಲ್ಲೂ ಪ್ರಚಾರಕ್ಕೆ ಆಗಮಿಸಿರಲಿಲ್ಲ. ಅಭಿಮಾನಿಗಳು ಸುದೀಪ್ ಯಾವಾಗ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಅಂತಾ ಕಾತುರದಿಂದ ಕಾಯುತ್ತಿದ್ದರು. ಇದೀಗ ಕಿಚ್ಚ ಇಂದಿನಿಂದ ಮುಖ್ಯಮಂತ್ರಿ ತವರು ಕ್ಷೇತ್ರದಿಂದಲೇ ಪ್ರಚಾರ ಆರಂಭಿಸುತ್ತಿದ್ದಾರೆ. ಈ  ರೋಡ್‌ ಶೋದಲ್ಲಿ ಹತ್ತು ಸಾವಿರಕ್ಕೂ ಅಧಿಕ ಪಾಲ್ಗೊಳ್ಳಲಿದ್ದು, ಇಡೀ ಶಿಗ್ಗಾಂವಿ ಪಟ್ಟಣ ಕೇಸರಿಮಯವಾಗಲಿದೆ.

suddiyaana