ವಿಧಾನಸಭಾ ಕಲಾಪದಲ್ಲಿ 40% ಕಮಿಷನ್ ಕಚ್ಚಾಟ – ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ!

ವಿಧಾನಸಭಾ ಕಲಾಪದಲ್ಲಿ 40% ಕಮಿಷನ್ ಕಚ್ಚಾಟ – ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ!

ವಿಧಾನಸೌಧದಲ್ಲಿ ನಡೆದ ವಿಧಾನಸಭೆ ಬಜೆಟ್​ ಅಧಿವೇಶನದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಗಲಾಟೆ, ಗದ್ಧಲಕ್ಕೆ ಸಾಕ್ಷಿಯಾಗಿತ್ತು. ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸಿದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದಿದ್ರು.

ಅಧಿವೇಶನದಲ್ಲಿ ಮಾತನಾಡಿದ ಸಿಎಂ ‘ಯಾಱರ ಕಾಲದಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಯಾಱರು ಶುದ್ಧಹಸ್ತರಿದ್ದಾರೆ ಅನ್ನೋದು ಅವರವರ ಆತ್ಮಕ್ಕೆ ಬಿಟ್ಟಿದ್ದು. ವರದಿಗಳ ಪ್ರಕಾರ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಂಬರ್ 1 ಆಗಿತ್ತು. ಅಂಥದ್ರಲ್ಲಿ ಇವರು ನಮಗೆ ಭ್ರಷ್ಟಾಚಾರದ ಬಗ್ಗೆ ಹೇಳುತ್ತಾರೆ. ಮೂರು ಸರ್ವೆಯಲ್ಲೂ ಕೂಡ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1. ಆದ್ರೆ ಕಾಂಗ್ರೆಸ್​ನವರು 40% ಕಮಿಷನ್ ಬಗ್ಗೆ ಮಾತಾಡ್ತಾರೆ ಅಂದ್ರು.

ಇದನ್ನೂ ಓದಿ : ಚಿರತೆ, ಹುಲಿ ದಾಳಿ ಬಳಿಕ ಕಾಡಾನೆ ಅಟ್ಟಹಾಸ – ಕಡಬದಲ್ಲಿ ಇಬ್ಬರನ್ನ ಕೊಂದು ಹಾಕಿದ ಮದಗಜ

ಸಿಎಂ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್, 40% ಕಮಿಷನ್ ಬಗ್ಗೆ ನಾವು ಮಾತಾಡುತ್ತಿಲ್ಲ. ಗುತ್ತಿಗೆದಾರರೇ ಮಾತನಾಡುತ್ತಿದ್ದಾರೆ. ಇತಿಹಾಸದಲ್ಲಿ ಮೊದಲ ಸಲ ಗುತ್ತಿಗೆದಾರರು ಪ್ರತಿಭಟನೆ ಮಾಡಿದ್ದಾರೆ. ಪ್ರಧಾನಮಂತ್ರಿಗೆ ನೇರವಾಗಿ ಪತ್ರ ಬರೆದಿದ್ದಾರೆ ಎಂದ್ರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ನಡೆಯಿತು.

ಖಾದರ್ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಗುತ್ತಿಗೆದಾರರ ಸಂಘದವ್ರು ಪ್ರತಿಭಟನೆ ಮಾಡಿದ್ರು. ಆದರೆ ಯಾವುದಕ್ಕೂ ದಾಖಲಾತಿ ಕೊಟ್ಟಿಲ್ಲ. ನಾನು ಕರೆದು ಮಾತನಾಡಿದಾಗಲೂ ನಿಮ್ಮ ಬಳಿ ದಾಖಲಾತಿ ಇದ್ದರೆ ಕೊಡಿ ಎಂದು ಕೇಳಿದ್ದೇನೆ. ಆದರೂ ಕೊಟ್ಟಿಲ್ಲ. ನಮ್ಮ ಸಚಿವ ಮುನಿರತ್ನ ಮೇಲೆ ಆರೋಪ ಮಾಡಿದ್ರು. ಈ ವೇಳೆ ಮುನಿರತ್ನ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ರು. ನಮ್ಮ ಮೇಲೆ ನಂಬಿಕೆ ಇಲ್ಲ ಸರಿ. ಆದ್ರೆ ಕೋರ್ಟ್​ಗೂ ದಾಖಲಾತಿ ಕೊಟ್ಟಿಲ್ಲ. ಲೋಕಾಯುಕ್ತಕ್ಕೂ ಕೊಡಬಹುದಿತ್ತು ಕೊಟ್ಟಿಲ್ಲ. ಎಲ್ಲಿಯೂ ದೂರು ಕೊಟ್ಟಿಲ್ಲ. ಬರೀ 40%, 40% ಅಂತಿದ್ದೀರಿ. ಬಿಬಿಎಂಪಿ ಟೆಂಡರ್ ಶೂರ್ ರಸ್ತೆ ಕಾಮಗಾರಿಯಲ್ಲಿ ನೀವು (ಕಾಂಗ್ರೆಸ್) 57  ಪರ್ಸೆಂಟ್ ಕಮಿಷನ್ ಪಡೆದಿದ್ದೀರಿ ಅಂದ್ರು. ಬೊಮ್ಮಾಯಿ ಆರೋಪಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ರು. ಈ ವೇಳೆ ಎರಡೂ ಪಕ್ಷಗಳ ನಾಯಕರ ನಡುವೆ ಗದ್ಧಲ ಉಂಟಾಯಿತು.

ಮಾತು ಮುಂದುವರಿಸಿದ ಸಿಎಂ ‘ಕಾಂಗ್ರೆಸ್ ತನ್ನ ವಿರುದ್ಧದ ಆರೋಪಗಳನ್ನ ಮುಚ್ಚಿ ಹಾಕಲೆಂದೇ ಲೋಕಾಯುಕ್ತವನ್ನ ಕೊನೆಗೊಳಿಸಿ ಎಸಿಬಿಯನ್ನ ಪ್ರಾರಂಭ ಮಾಡಿತು’ ಅಂದ್ರು. ಬೊಮ್ಮಾಯಿಯ ಈ ಹೇಳಿಕೆಗೆ ಯು.ಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ರು. ಲೋಕಾಯುಕ್ತವನ್ನ ಮುಚ್ಚಿಲ್ಲ. ಎಸಿಬಿಯನ್ನ ಹೊಸದಾಗಿ ಶುರು ಮಾಡಿದ್ದೇವೆ ಅಷ್ಟೇ ಅಂದ್ರು. ಈ ವೇಳೆ ಸಿಎಂ ‘ಸಿ’ ಅಂದರೆ ಕರಪ್ಷನ್, ‘ಸಿ’ ಅಂದರೆ ಕಾಂಗ್ರೆಸ್. ಇವೆರಡು ಅವಿಭಾಜ್ಯ ಅಂಗ ಎಂದು ಸಿಎಂ ಲೇವಡಿ ಮಾಡಿದ್ರು. ಇದಕ್ಕೆ ಪ್ರತಿಯಾಗಿ ಯು.ಟಿ ಖಾದರ್ ‘ಬಿ’ ಅಂದ್ರೆ ಬಿಜೆಪಿ ‘ಬಿ’ ಅಂದ್ರೆ ಭ್ರಷ್ಟಾಚಾರ ಅಂದ್ರು.

ಹಾಗೇ ಸರ್ಕಾರದ ವಿರುದ್ಧ ಸಾಲು ಸಾಲು ಸಮಸ್ಯೆಗಳ ಬಗ್ಗೆ ಆರೋಪಿಸಿದ ಖಾದರ್, ಕಳೆದ ಮೂರು ವರ್ಷಗಳಿಂದ ರೇಷನ್ ಕಾರ್ಡ್ ವಿರತಣೆ ಮಾಡಲಾಗುತ್ತಿಲ್ಲ. ಅಡಕೆಗೆ ಎಲೆ ಚುಕ್ಕಿ ರೋಗ ಬರುತ್ತಿದೆ. ಈ ಸಂಬಂಧ ಯಾವುದೇ ಸಂಶೋಧನೆ ನಡೆದಿಲ್ಲ. ಜನಸಾಮಾನ್ಯ ಸರ್ಕಾರದ ಕಚೇರಿಗಳಿಗೆ ಹೋದ್ರೆ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇಲ್ಲ. ಅನ್ಯಾಯವಾದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಹೋದ್ರೆ ಪ್ರಭಾವ ಇಲ್ಲದೆ, ದುಡ್ಡಿಲ್ಲದೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಯಾರಿಗೂ ಇಲ್ಲ. ಹೀಗಾಗಿ ಜನವಿರೋಧಿ ಸರ್ಕಾರ ಮತ್ತು ಈ ವಂದನಾ ನಿರ್ಣಯವನ್ನ ತೀವ್ರವಾಗಿ ವಿರೋಧಿಸಿ ಸಭಾತ್ಯಾಗ ಮಾಡುತ್ತೇನೆಂದು ಖಾದರ್ ಕಲಾಪದಿಂದ ಹೊರ ನಡೆದ್ರು.

suddiyaana