ಅರ್ಜುನನ ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಘೋಷಣೆ – ಮೈಸೂರಿನಲ್ಲಿಯೇ ಸ್ಮಾರಕ ಮಾಡಿ ಎಂದು ಮಾವುತ ವಿನು ಮನವಿ

ಕ್ಯಾಪ್ಟನ್ ಅರ್ಜುನ ಇನ್ನೇನಿದ್ದರೂ ಬರೀ ನೆನಪು ಮಾತ್ರ.. 8 ಬಾರಿ ದಸರಾ ಅಂಬಾರಿ ಹೊತ್ತ ಅರ್ಜುನ ಕಂಡಿದ್ದು ಮಾತ್ರ ದುರಂತ ಅಂತ್ಯ. ಯೋಧನಂತೆ ಉಸಿರು ಇರುವ ಕಡೇ ಕ್ಷಣದವರೆಗೂ ಹೋರಾಡಿ ಹುತಾತ್ಮನಾದ ಅರ್ಜುನನ ಸ್ಮಾರಕ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಿಸಿ ಎಂದು ಅರ್ಜುನನ ಮಾವುತ ವಿನು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: 64 ವರ್ಷದ ಅರ್ಜುನನನ್ನು ಕಾರ್ಯಾಚರಣೆಗೆ ಬಳಸಿಕೊಂಡಿದ್ದೇಕೆ – ಕಾಡಾನೆ ಆಪರೇಷನ್ ನಲ್ಲಿ ರೂಲ್ಸ್ ಫಾಲೋ ಮಾಡಲಿಲ್ವಾ?
ಅರ್ಜುನ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ. ಅಭಿಮಾನಿಗಳನ್ನು ನೋವಿನ ಕಡಲಲ್ಲಿ ಮುಳುಗಿಸಿ ಬಾರದ ಲೋಕಕ್ಕೆ ಹೋಗಿದ್ದಾನೆ. ಆದರೆ, ಅರ್ಜುನ ನೆನಪನ್ನು ಸದಾ ಹಸಿರಾಗಿಸಿಡಲು ಆತನ ಸ್ಮಾರಕ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅರ್ಜುನನ ಸಾವಿನ ಕುರಿತು ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಅರ್ಜುನ ಆನೆ ಸಕಲೇಶಪುರದಲ್ಲಿ ಎಲ್ಲಿ ಪ್ರಾಣ ಕಳೆದುಕೊಂಡಿದ್ದನೋ ಅಲ್ಲಿಯೇ ಸ್ಮಾರಕ ಮಾಡುತ್ತೇವೆ. ಹಾಗೂ ಹೆಗ್ಗಡದೇವನಕೋಟೆಯಲ್ಲಿಯೂ ಸ್ಮಾರಕ ಮಾಡಲು ತಿಳಿಸಿದ್ದೇವೆ ಎಂದರು. ಅರ್ಜುನ ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದವನ ಅಚಾನಕ್ ಸಾವಾಗಿದೆ. ಆತ ಇನ್ನೂ ಹೆಚ್ಚು ಕಾಲ ಬದುಕಬೇಕಿತ್ತು, ಇನ್ನೊಂದು ಆನೆ ಕಾರ್ಯಾಚರಣೆಗೆ ಅರ್ಜುನ ನನ್ನ ಉಪಯೋಗಿಸಿದ ಕಾರಣ ಸಾವನಪ್ಪಿದೆ ಎಂದು ಸಿಎಂ ಹೇಳಿದ್ದಾರೆ.
ಮತ್ತೊಂದೆಡೆ ಹಾಸನದಲ್ಲಿ ಮಾವುತ ವಿನು ಅರ್ಜುನನ್ನು ನೆನೆದು ಕಣ್ಣೀರು ಹಾಕುತ್ತಲೇ ಇದ್ದಾರೆ. ಕಾದಾಟದ ವೇಳೆ ಕಾಲಿನಲ್ಲಿ ರಕ್ತ ಬಂತು. ಆದರೂ ಮದಗಜದ ಜೊತೆಗೆ ಹೋರಾಡಿದ. ನಂತರ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ಬಿತ್ತು. ಪ್ರಶಾಂತ ಇಲ್ಲದಿದ್ದರೂ ಅರ್ಜುನ ಹೋರಾಡಿ ಗೆಲ್ಲುತ್ತಿದ್ದನು. ಆದರೆ ಕಾಲಿಗೆ ಬಿದ್ದ ಗಾಯದಿಂದ ಆಗಲಿಲ್ಲ. ಕಾಡಾನೆ ತಿವಿದು ಸಾಯಿಸಿತು. ಅರ್ಜುನ ಹತ್ತು ಜನರ ಪ್ರಾಣ ಉಳಿಸಿ ಸಾವನ್ನಪ್ಪಿದ್ದಾನೆ. ಹೀಗಾಗಿ ಮೈಸೂರಿನಲ್ಲೇ ಆತನ ಸ್ಮಾರಕ ಮಾಡಬೇಕು ಎಂದು ಕಣ್ಣೀರಿಡುತ್ತಲೇ ಸರ್ಕಾರಕ್ಕೆ ಒತ್ತಾಯಿಸಿದರು.