ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಒಪ್ಪಿದ ಸರ್ಕಾರ – ಕಾರಣ ಏನು ಗೊತ್ತಾ..?

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಒಪ್ಪಿದ ಸರ್ಕಾರ – ಕಾರಣ ಏನು ಗೊತ್ತಾ..?

ಕನ್ನಡ ಚಿತ್ರರಂಗದ ಹೆಸರಾಂತ ನಟ ಅಂಬರೀಶ್. ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂತಾನೇ ಕರೆಸಿಕೊಳ್ತಿದ್ದ ಅಂಬಿ ಸಾಲು ಸಾಲು ಹಿಟ್ ಚಿತ್ರಗಳನ್ನ ನೀಡಿದವರು. ನಾಗರಹಾವು ಸಿನಿಮಾದಲ್ಲಿ ‘ಹೇ ಬುಲ್ ಬುಲ್ ಮಾತಡಕ್ಕಿಲ್ವಾ’ ಡೈಲಾಗ್ ಮೂಲಕ ಮನೆ ಮಾತಾದವರು. ಇದೀಗ ದಿವಂಗತ ಅಂಬರೀಶ್​ಗೆ ಗೌರವಾರ್ಥವಾಗಿ ಸರ್ಕಾರ ಬೆಂಗಳೂರಿನ ರಸ್ತೆಗೆ ಅವರ ಹೆಸರಿಡಲು ಮುಂದಾಗಿದೆ.

ನಟ ಅಂಬರೀಶ್ (Ambarish) ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ (Race Course) ರಸ್ತೆಗೆ (Road) ಇಡಲು ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಒಪ್ಪಿಗೆ ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದೇ ವಾರದಲ್ಲೇ ಹೆಸರು ಇಡುವ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅಂಬರೀಶ್ ಅವರ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ಇಡುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಮಂಡಳಿಯ ಮನವಿಗೆ ಸ್ಪಂದಿಸಿರುವ ಸರ್ಕಾರ ಇದೇ ವಾರದಲ್ಲೇ ಹೆಸರು ಇಡುವ ಒಪ್ಪಿಗೆ ಕೂಡ ನೀಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಹಲವು ದಿನಗಳ ಬೇಡಿಕೆ ಈ ಮೂಲಕ ಈಡೇರಿದಂತಾಗಿದೆ.

ಇದನ್ನೂ ಓದಿ : ಬಿಜೆಪಿಗೆ ಬೆಂಬಲವಷ್ಟೇ.. ಅಧಿಕೃತ ಸೇರ್ಪಡೆ ಇಲ್ಲ – ‘ಕಮಲ’ ಮುಡಿಯಲು ಸುಮಲತಾಗಿರುವ ಸವಾಲುಗಳೇನು..? 

ಕನ್ನಡ ಚಿತ್ರ ಜಗತ್ತಿಗೆ ಅಂಬರೀಶ್ ಕೊಟ್ಟಿರುವ ಕೊಡುಗೆ ಅಪಾರ. ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಸಾಕಷ್ಟು ಸಹಾಯವನ್ನೂ ಅಂಬರೀಶ್ ಮಾಡಿದ್ದಾರೆ. ರಾಜಕಾರಣಿಯಾಗಿಯೂ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಈ ಎಲ್ಲ ಸೇವೆಯನ್ನು ಪರಿಗಣಿಸಿರುವ ಸರಕಾರ ರೇಸ್ ಕೋರ್ಸ್ ರಸ್ತೆಗೆ ಹೆಸರು ಇಡಲು ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೇ, ಅಂಬರೀಶ್ ಸ್ಮಾರಕದ ಕೆಲಸ ಕೂಡ ಬಹುತೇಕ ಮುಗಿದಿದ್ದು, ಅತೀ ಶೀಘ್ರದಲ್ಲೇ ಸ್ಮಾರಕದ ಲೋಕಾರ್ಪಣೆ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕವು ಹಲವು ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದೆ. ಡಾ.ರಾಜ್ ಕುಮಾರ್ ಸ್ಮಾರಕದ ಪಕ್ಕದಲ್ಲೇ ಅಂಬರೀಶ್ ಸ್ಮಾರಕ ಕೂಡ ತಲೆಯೆತ್ತಿದೆ.

ದಿವಂಗತ ಅಂಬರೀಶ್ ಅವರು ಭಾರತದಲ್ಲೇ ಅತಿ ಹೆಚ್ಚು ಮಲ್ಟಿಸ್ಟಾರ್ ಸಿನಿಮಾದಲ್ಲಿ ಅಭಿನಯಿಸಿರುವ ಖ್ಯಾತಿ ಹೊಂದಿದ್ದಾರೆ. ರಾಜ್ ಕುಮಾರ್ ಜೊತೆ ಒಡಹುಟ್ಟಿದವರು, ವಿಷ್ಣು ಜೊತೆ ಸ್ನೇಹಿತರ ಸವಾಲ್, ಮಹಾ ಪ್ರಚಂಡರು, ಅವಳ ಹೆಜ್ಜೆ, ದಿಗ್ಗಜರು ಅಂತಹ ಹಿಟ್ ಸಿನಿಮಾ, ರಜನಿಕಾಂತ್, ರವಿಚಂದ್ರನ್, ಜಗ್ಗೇಶ್, ಉಪೇಂದ್ರ, ಶಂಕರ್ ನಾಗ್, ಅನಂತ್ ನಾಗ್, ದರ್ಶನ್, ಸುದೀಪ್, ಯಶ್, ಹೀಗೆ ಕನ್ನಡದ ಈಗಿನ ಬಹುತೇಕ ನಟರ ಜೊತೆಯಲ್ಲೂ ಬಣ್ಣಹಚ್ದಿದ್ದಾರೆ. ಇದು ಅಂಬಿಯ ವಿಶೇಷ ದಾಖಲೆ ಕೂಡ ಆಗಿದೆ.

ಶ್ವಾಸಕೋಶ ಸೋಂಕಿಗೆ ತುತ್ತಾಗಿದ್ದ ಅಂಬರೀಶ್ ಸಿಂಗಾಪೂರ್ ನಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ನವೆಂಬರ್ 24, 2018 ಮಧ್ಯಾಹ್ಯ ಮಂಡ್ಯದ ಹತ್ತಿರ ಬಸ್ ಕಾಲುವೆಗೆ ಉರುಳಿ 30 ಜನ ಮೃತಪಟ್ಟ ಸುದ್ದಿ ಕೇಳಿ ತೀವ್ರ ದುಃಖಿತರಾಗಿದ್ದರು. ಅದೇ ದಿನ ರಾತ್ರಿ ಸುಮಾರು 10 ಘಂಟೆಗೆ ತೀವ್ರ ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದರು. ಇವರ ಸಮಾಧಿಯನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಲಾಗಿತ್ತು.

suddiyaana