ಎರಡು ಮದುವೆಯಾಗಿದ್ರೆ ಕೆಲಸ ಇಲ್ಲ! – ಏನಿದು ಬಿಬಿಎಂಪಿ ರೂಲ್ಸ್?

ಎರಡು ಮದುವೆಯಾಗಿದ್ರೆ ಕೆಲಸ ಇಲ್ಲ! – ಏನಿದು ಬಿಬಿಎಂಪಿ ರೂಲ್ಸ್?

ಬೆಂಗಳೂರು: ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಬಿಬಿಎಂಪಿ  ಪೌರಕಾರ್ಮಿಕರ ನೇಮಕಾತಿ ಆರಂಭಗೊಂಡಿದ್ದು, ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ ಅದರಲ್ಲಿ ಎರಡು ಮದುವೆಯಾಗಿದ್ರೆ ಪೌರಕಾರ್ಮಿಕರಿಗೆ ಕೆಲಸ ಇಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಬಿಬಿಎಂಪಿಯಲ್ಲಿ 3,673 ಪೌರಕಾರ್ಮಿಕ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಆದರೆ ಅದರಲ್ಲಿ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಮಾತನಾಡಲು ಬರಬೇಕು. ಅಲ್ಲದೇ ಅರ್ಜಿ ಸಲ್ಲಿಸುವ ಪುರುಷ ಪೌರಕಾರ್ಮಿಕರಿಗೆ ಇಬ್ಬರು ಪತ್ನಿಯರಿರಬಾರದು, ಅದರ ಜತೆಗೆ ಮಹಿಳಾ ಪೌರಕಾರ್ಮಿಕರು ಪತ್ನಿ ಇರುವ ಪುರುಷನನ್ನು ವಿವಾಹವಾಗಿರಬಾರದು. ಅಲ್ಲದೆ, ಕ್ರಿಮಿನಲ್ ಪ್ರಕರಣ ಇರುವವರು, ಈ ಹಿಂದೆ ಸೇವೆಯಿಂದ ವಜಾಗೊಂಡವರು ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.

ಇದನ್ನೂ ಓದಿ:‘ಒಂದು ದೇಶ-ಒಂದು ಪೊಲೀಸ್ ಸಮವಸ್ತ್ರ’ಕ್ಕೆ ರಾಜ್ಯ ಗೃಹ ಇಲಾಖೆ ಅಸ್ತು!

ಅರ್ಜಿ ಸಲ್ಲಿಸುವವರು ಗುತ್ತಿಗೆ ಆಧಾರದಲ್ಲಿ ಕನಿಷ್ಠ 2 ವರ್ಷಗಳ ಕಾಲ ಪೌರಕಾರ್ಮಿಕರಾಗಿ ಕೆಲಸ ಮಾಡಿರಬೇಕು. ಅಭ್ಯರ್ಥಿಯ ವಯಸ್ಸು 23 ರಿಂದ 55 ವರ್ಷದ ಒಳಗಿರಬೇಕು. ಅಲ್ಲದೇ ಪ್ರತಿ ಅಭ್ಯರ್ಥಿಯೂ ಸಂಬಂಧಪಟ್ಟ ಆಸ್ಪತ್ರೆ ಅಥವಾ ಪ್ರಾಧಿಕಾರದಿಂದ ದೈಹಿಕ ದೃಢತೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಪೈಕಿ 2,600 ಕಾಯಂ ಪೌರಕಾರ್ಮಿಕರಿದ್ದಾರೆ. ಉಳಿದಂತೆ 18 ಸಾವಿರ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ 3,673 ಪೌರಕಾರ್ಮಿಕ ಹುದ್ದೆಗೆ ಕಾಯಂ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಲ್ಲಿ ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನೇ ನೇಮಕಕ್ಕೆ ಪರಿಗಣಿಸಲಾಗುತ್ತಿದೆ. ಅದರ ಜತೆಗೆ 3,673 ಪೌರಕಾರ್ಮಿಕ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ 430 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಉಳಿದ 3,243 ಹುದ್ದೆಗಳನ್ನು ರಾಜ್ಯದ ಇತರ ಜಿಲ್ಲೆಗಳವರೆಗೆ ನಿಗದಿ ಮಾಡಲಾಗಿದೆ.

suddiyaana