ಲೋಕಸಭೆ ಸಮರಕ್ಕೆ ಕೇಂದ್ರದ ಸಿಎಎ ದಾಳ – ಮುಂದಿನ ಏಳು ದಿನದೊಳಗೆ  ಪೌರತ್ವ ಕಾಯ್ದೆ ಜಾರಿ?

ಲೋಕಸಭೆ ಸಮರಕ್ಕೆ ಕೇಂದ್ರದ ಸಿಎಎ ದಾಳ – ಮುಂದಿನ ಏಳು ದಿನದೊಳಗೆ  ಪೌರತ್ವ ಕಾಯ್ದೆ ಜಾರಿ?

ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ, ತೀವ್ರ ವಿವಾದದ ಹಿನ್ನೆಲೆಯಲ್ಲಿ 4 ವರ್ಷಗಳಿಂದ ನೇಪಥ್ಯಕ್ಕೆ ಸರಿದಿದ್ದ ಪೌರತ್ವ ತಿದ್ದುಪಡಿ ಕಾಯಿದೆಯನ್ನು(ಸಿಎಎ) ಬತ್ತಳಿಕೆಯಿಂದ ಹೊರತೆಗೆಯಲು ಮುಂದಾಗಿದೆ. ‘ಪೌರತ್ವ ತಿದ್ದುಪಡಿ ಕಾಯಿದೆ-2019’ರ ನಿಯಮಾವಳಿಗಳ ಜಾರಿಗೆ ಲೋಕಸಭೆ ಚುನಾವಣೆಗೂ ಮುನ್ನ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಈ ಕಾಯ್ದೆಯನ್ನು ಮುಂದಿನ ಏಳು ದಿನಗಳಲ್ಲಿ ದೇಶದಾದ್ಯಂತ ಜಾರಿಗೆ ತರುತ್ತೇವೆ ಎಂದು ಕೇಂದ್ರ ಸಚಿವ ಶಂತನು ಠಾಕೂರ್​ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಸಿರಿಯಾದಲ್ಲಿ ಅಮೆರಿಕ ಸೇನೆ ಮೇಲೆ ಡ್ರೋನ್ ದಾಳಿ! – ಇರಾನ್‌ ಬೆಂಬಲಿತ ಉಗ್ರಗಾಮಿಗಳದ್ದೇ ಕೈವಾಡ ಎಂದು ಜೋ ಬೈಡೆನ್‌ ಆರೋಪ!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಂತನು ಠಾಕೂರ್, ನಾನು ಗ್ಯಾರಂಟಿ ನೀಡುತ್ತೇನೆ, ಪಶ್ಚಿಮ ಬಂಗಾಳ ಮಾತ್ರವಲ್ಲ, ದೇಶದಾದ್ಯಂತ ಸಿಎಎ ಜಾರಿಗೆ ಬರಲಿದೆ. ಮುಂದಿನ ಏಳು ದಿನಗಳಲ್ಲಿ ದೇಶದಾದ್ಯಂತ ಈ ಕಾಯ್ದೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಠಾಕೂರ್ ಅವರು, ಪಶ್ಚಿಮ ಬಂಗಾಳದ ಬಂಗಾನ್ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಡಿಸೆಂಬರ್​​ನಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಸಿಎಎ ಜಾರಿ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಯಾರೊಬ್ಬರೂ ಕೂಡ ಸಿಎಎ ಜಾರಿಯನ್ನು ತಡೆಯಲು ಆಗುವುದಿಲ್ಲ. ನಾವು ಜಾರಿ ಮಾಡಿಯೇ ತೀರುತ್ತೇವೆ ಎಂದಿದ್ದರು.

ಏನಿದು ಪೌರತ್ವ ಕಾಯ್ದೆ..?

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಪೌರತ್ವ (ತಿದ್ದುಪಡಿ) ಕಾಯ್ದೆ (Citizenship Act, 2019) ಜಾರಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು 2019ರಲ್ಲಿ ಸಂಸತ್ ಅಂಗೀಕರಿಸಿದೆ. ಈ ಮಸೂದೆಯು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಇಲ್ಲಿನ ಪೌರತ್ವ ನೀಡುವುದನ್ನು ಪ್ರತಿಪಾದಿಸುತ್ತದೆ. ಮುಸ್ಲಿಮರನ್ನು ಈ ಕಾಯ್ದೆಯಿಂದ ದೂರ ಇಡಲಾಗಿದೆ. 2014 ಡಿಸೆಂಬರ್ 31ರ ಮೊದಲು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುತ್ತದೆ.

ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ಆಗುತ್ತಿದ್ದಂತೆಯೇ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಇದೇ ಕಾರಣಕ್ಕೆ ಕಾನೂನಿನ ಅಧಿನಿಯಮವನ್ನು ಇಲ್ಲಿಯವರೆಗೆ ತಿಳಿಸಿಲ್ಲ. ನಿಯಮ ಜಾರಿಗೊಳಿಸುವ ವಿಚಾರದಲ್ಲಿ ಭಾರತ ಸರ್ಕಾರ ಪದೇ ಪದೆ ಮುಂದೂಡಿಕೆ ಮಾಡುತ್ತಿದೆ. ಇದೀಗ ಕೇಂದ್ರ ಸರ್ಕಾರ ಅದಕ್ಕೆ ಅಂತಿಮ ಟಚ್ ನೀಡಲು ನಿರ್ಧರಿಸಿದ್ದು, ಆನ್​ಲೈನ್ ಪೋರ್ಟಲ್ ಕೂಡ ತಯಾರಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಭಾರತ ಪೌರತ್ವ ಪಡೆದುಕೊಳ್ಳೋದು ಸಂಪೂರ್ಣ ಆನ್​ಲೈನ್ ಪ್ರಕ್ರಿಯೆ ಆಗಿರಲಿದ್ದು, ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.

Shwetha M