ವರ್ಕ್ ಫ್ರಂ ಹೋಮ್ ಕೊನೆಗೊಳ್ಳುತ್ತಿದ್ದಂತೆ ಭಾರತದಲ್ಲಿ ಸಿಗರೇಟ್ ಮಾರಾಟ ಹೆಚ್ಚಳ!
ಕೊರೋನಾ ವೈರಸ್ ಇಡೀ ಜಗತ್ತನ್ನೇ ಕಾಡಿತ್ತು. ಹಲವು ತಿಂಗಳ ಕಾಲ ಜನರು ಮನೆಯಲ್ಲೇ ಬಂಧಿಯಾಗುವಂತೆ ಈ ಮಹಾಮಾರಿ ಮಾಡಿತ್ತು. ಇದೀಗ ಅನೇಕ ರಾಷ್ಟ್ರಗಳು ಸಹಜ ಸ್ಥಿತಿಗೆ ಬಂದಿದೆ. ಭಾರತದಲ್ಲಿ ಕೂಡ ಕೊರೋನಾ ಸೋಂಕು ಹರಡುವಿಕೆ ನಿಂತಿದ್ದು, ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದೆ. ಇಷ್ಟು ದಿನಗಳ ಕಾಲ ವರ್ಕ್ ಫ್ರಂ ಹೋಂನಲ್ಲಿದ್ದ ಉದ್ಯೋಗಿಗಳು ಮತ್ತೆ ಆಫೀಸ್ಗಳತ್ತ ಮುಖಮಾಡುತ್ತಿದ್ದಾರೆ. ಇದೀಗ ಇನ್ನೊಂದು ಕುತೂಹಲ ಸಂಗತಿ ಗೊತ್ತಾಗಿದೆ. ಉದ್ಯೋಗಿಗಳು ಆಫೀಸ್ಗೆ ಬರಲು ಪ್ರಾರಂಭಿಸಿದಂತೆ ಸಿಗರೇಟ್ ಮಾರಾಟ ಹೆಚ್ಚಳವಾಗಿದೆ.
ಇದನ್ನೂ ಓದಿ: ಬ್ರಿಟನ್ನಲ್ಲಿ ಸಿಗರೇಟ್ ನಿಷೇಧಿಸಲು ಪ್ರಧಾನಿ ರಿಷಿ ಸುನಕ್ ಚಿಂತನೆ!
2020 ಹಾಗೂ 2022 ರಲ್ಲಿ ದೇಶದಾದ್ಯಂತ ಲಾಕ್ಡೌನ್ ಹೇರಲಾಗಿತ್ತು. ಈ ವೇಳೆ ಜನರು ಮನೆಯಲ್ಲೇ ಬಂಧಿಯಾಗಿದ್ದರು. ಇದೀಗ ಜನರು ಆಫೀಸ್ನತ್ತ ಮುಖಮಾಡಿದ್ದಾರೆ. 2020 ಮತ್ತು 2021ರ ಕೋವಿಡ್ ಸಾಂಕ್ರಾಮಿಕ ವರ್ಷಗಳಲ್ಲಿ ಸಿಗರೇಟ್ ಮಾರಾಟ ಬಹಳ ಕಡಿಮೆ ಇತ್ತು. 2022ರಲ್ಲಿ ಸಿಗರೇಟ್ ಮಾರಾಟ ಶೇ. 18ರಷ್ಟು ಹೆಚ್ಚಾಗಿತ್ತು. ಆದರೆ ಈ ಹಣಕಾಸು ವರ್ಷದಲ್ಲಿ ಸಿಗರೇಟ್ ಮಾರಾಟ ಶೇ. 7ರಿಂದ 9ರಷ್ಟು ಹೆಚ್ಚಿದೆ. ಕೋವಿಡ್ ಬಳಿಕ ಸಿಗರೇಟ್ ಮಾರಾಟದಲ್ಲಿ ಕ್ರಮೇಣ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಕಚೇರಿಗೆ ಹೋಗಿ ಕೆಲಸ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಮತ್ತು ಸರ್ಕಾರದಿಂದ ತೀರಾ ತೆರಿಗೆ ಹೆಚ್ಚಳ ಆಗಿಲ್ಲದೇ ಇರುವುದು. ಇದೇ ಸ್ಥಿತಿ ಮುಂದುವರಿದರೆ ವರ್ಷಕ್ಕೆ ಸರಾಸರಿಯಾಗಿ ಶೇ. 5ರಷ್ಟು ಸಿಗರೇಟ್ ಮಾರಾಟ ಹೆಚ್ಚಳ ಆಗುವ ನಿರೀಕ್ಷೆ ಇದೆ ಎಂದು ವಿಶ್ಲೇಷಣೆಗಳು ತಿಳಿಸಿವೆ.
ಆಫೀಸ್ ಟೈಮ್ನಲ್ಲೇ ಸಿಗರೇಟ್ ಮಾರಾಟ ಹೆಚ್ಚಳ ಯಾಕೆ?
ಆಫೀಸ್ ಅವಧಿಯಲ್ಲೇ ಸಿಗರೇಟ್ ಮಾರಾಟ ಹೆಚ್ಚಳವಾಗಲು ಕಾರಣ ಏನು ಎಂಬುದವುದರ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ. ಅಧ್ಯಯನ ಪ್ರಕಾರ, ಆಫೀಸ್ ವೇಳೆ ಮಧ್ಯೆ ಮಧ್ಯೆ ಸಿಗರೇಟ್ಗಾಗಿ ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯ. ಅಂತೆಯೇ, ರಸ್ತೆಬದಿಯ ಚಹಾ ಅಂಗಡಿ, ಬೇಕರಿಗಳಲ್ಲಿ ಬಹಳಷ್ಟು ಮಂದಿ ಟೀ ಮತ್ತು ಸಿಗರೇಟ್ ಸೇವಿಸುತ್ತಾರೆ. ಕೆಲಸಕ್ಕೆ ಹೊರಗೆ ಅಥವಾ ಆಫೀಸ್ಗೆ ಹೋಗುವವರಲ್ಲಿ ಇದು ಹೆಚ್ಚು. ಹೀಗಾಗಿ ಸಿಗರೇಟ್ ಖರೀದಿ ಹೆಚ್ಚಳವಾಗಿದೆ ಎಂಬುವುದು ಗೊತ್ತಾಗಿದೆ.
ಕಚೇರಿಗೆ ಹೋಗಿ ಕೆಲಸ ಮಾಡುವವರ ಸಂಖ್ಯೆ 2023ರ ಹಣಕಾಸು ವರ್ಷದಲ್ಲಿ ಶೇ. 40ರಷ್ಟಿತ್ತು. ಈ ಹಣಕಾಸು ವರ್ಷದಲ್ಲಿ ಈ ಪ್ರಮಾಣವು ಶೇ. 65ರಿಂದ 70ರಷ್ಟಿರಬಹುದು ಎಂದು ನಿರೀಕ್ಷಿಸಲಾಗಿದೆ.
ಹೊಸ ಪ್ರಯೋಗದತ್ತ ಸಿಗರೇಟ್ ಮಾರಾಟಗಾರರು
ಜನರಿಗೆ ಸಿಗರೇಟ್ ಹೆಚ್ಚ ಆಕರ್ಷಕವಾಗಿಸಲು ಕಂಪನಿಗಳು ಈಗೀಗ ಪ್ರಯೋಗ ಹೆಚ್ಚಿಸುತ್ತಿವೆ. ಸಿಗರೇಟ್ ಹೊಗೆಯ ದಟ್ಟ ವಾಸನೆಯನ್ನು ತಗ್ಗಿಸಲು ಹೊಸ ಫ್ಲೇವರ್, ಅಡಿಟಿವ್ಸ್ ಇತ್ಯಾದಿಯನ್ನು ಪರಿಚಯಿಸಲಾಗುತ್ತಿದೆ.