ಹಿರೋಶಿಮಾ, ನಾಗಸಾಕಿ ನಗರಗಳನ್ನ ಸುಟ್ಟ ಅಣುಬಾಂಬ್ ಜನಕನ ಚರಿತ್ರೆ – ‘ಓಪನ್ ಹೈಮರ್’ ಸಿನಿಮಾದಲ್ಲಿ ಭಗವದ್ಗೀತೆ ವಿವಾದ

ಹಿರೋಶಿಮಾ, ನಾಗಸಾಕಿ ನಗರಗಳನ್ನ ಸುಟ್ಟ ಅಣುಬಾಂಬ್ ಜನಕನ ಚರಿತ್ರೆ – ‘ಓಪನ್ ಹೈಮರ್’ ಸಿನಿಮಾದಲ್ಲಿ ಭಗವದ್ಗೀತೆ ವಿವಾದ

1945ರ ಜುಲೈ 16ರ ಬೆಳಗ್ಗೆ 5.29ರ ಸುಮಾರಿಗೆ ಇಡೀ ವಿಶ್ವವೇ ಬೆಚ್ಚಿ ಬೀಳುವಂತಹ ಘಟನೆ ನಡೆದಿತ್ತು.  ಎರಡು ಮಹಾನಗರಗಳು ಕ್ಷಣಾರ್ಧದಲ್ಲೇ ಭಸ್ಮವಾಗಿದ್ವು. ಲಕ್ಷಾಂತರ ಮಂದಿ ಪ್ರಾಣವನ್ನೇ ಬಿಟ್ಟಿದ್ರು. ಭೂಮಿ ಬಾನನ್ನೇ ಒಂದುಮಾಡಿ ದಟ್ಟಹೊಗೆ ಆವರಿಸಿತ್ತು. ಅಂದು ವಿನಾಶಕಾರಿ ಪರಮಾಣು ಯುಗಕ್ಕೆ ನಾಂದಿ ಹಾಡಿತ್ತು.  ಯೆಸ್ ಅಂದು ಪರಮಾಣು ಬಾಂಬ್​ನ ಅನ್ವೇಷಣೆ ಮಾಡಿದ್ದೇ ಡಾ.ಜೆ ರಾಬರ್ಟ್ ಓಪನ್ ಹೈಮರ್. ಇದೇ ರಾಬರ್ಟ್ ಓಪನ್ ಹೈಮರ್ ಈಗ ಜಗತ್ತಿನಾದ್ಯಂತ ಮತ್ತೊಮ್ಮೆ ಬಂದಿದ್ದಾರೆ.

ಡಾ.ಜೆ ರಾಬರ್ಟ್ ಓಪನ್ ಹೈಮರ್. ಹಲವರ ಪಾಲಿಗೆ ಹೀರೋ. ಲಕ್ಷಾಂತರ ಜನರಿಗೆ ಮೃತ್ಯುವಿನ ರೂವಾರಿ. ಜಗತ್ತಿಗೆ ಸರ್ವನಾಶದ ಪರಮಾಣು ಬಾಂಬ್ ಪರಿಚಯಿಸಿದಾತ. ಎರಡು ಮಹಾನಗರಗಳನ್ನ ಹೇಳಹೆಸರಿಲ್ಲದಂತೆ ಸುಟ್ಟು ಹಾಕಿದ ಕಾರಣಕರ್ತ. ಇದೇ ರಾಬರ್ಟ್ ಓಪನ್ ಹೈಮರ್ ಅವರ ಜೀವನಾಧಾರಿತ ಚಿತ್ರವೇ ಓಪನ್ ಹೈಮರ್. ಹಾಲಿವುಡ್​ನ ಮಾಂತ್ರಿಕ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ 2ನೇ ಮಹಾಯುದ್ಧವನ್ನ ಮತ್ತೊಮ್ಮೆ ಕಣ್ಮುಂದೆ ಕಟ್ಟಿಕೊಟ್ಟಿದೆ. ಜುಲೈ 21ಕ್ಕೆ ಸಿನಿಮಾ ರಿಲೀಸ್ ಆಗಿದ್ದು ಬಾಕ್ಸಾಫೀಸ್​ ನಲ್ಲೂ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ : ಆಕಾಶದಲ್ಲಿ ಕಾಣಿಸಲಿದೆ ಅಪರೂಪದ ಖಗೋಳ ವಿಸ್ಮಯ – ಆಗಸ್ಟ್ ನಲ್ಲಿ ಗೋಚರಿಸಲಿದೆ ಬ್ಲೂ ಮೂನ್, ಸೂಪರ್ ಮೂನ್

ಸಿನಿಮಾ ನೋಡಿದವರಿಗೆ ನಿಜಕ್ಕೂ ತಾವೇ ಸ್ವತಃ ಅಣುಬಾಂಬ್ ತಯಾರಿಕಾ ಪ್ರಯೋಗಾಲಯವೊ೦ದಕ್ಕೆ ಹೋಗಿ ಬಂದ ಅನುಭವವಾಗಿರುತ್ತದೆ. ಯಾಕಂದ್ರೆ ಪರಮಾಣುವಿನ ಗರ್ಭದಲ್ಲಿ ಹುದುಗಿದ್ದ ಅಪಾರವಾದ ಶಕ್ತಿ ಒಮ್ಮೆಲೇ ಬಿಡುಗಡೆಯಾದಾಗ ಅಲ್ಲಿ ವಿರಾಟರೂಪದ ಮಹಾಸ್ಫೋಟವೊಂದು ಹೇಗೆ ಘಟಿಸುತ್ತೆ. ಕಣ್ಣುಕುಕ್ಕುವ ಬೆಳಕು, ಬೆಂಕಿ ಉಂಡೆಗಳು, ಗಗನವನ್ನೇ ಮುಚ್ಚುವ ಹೊಗೆ ವಿನಾಶಕಾರಿ ಅಣುಬಾಂಬ್​ನ ಶಕ್ತಿಯ ಅರಿವು ಮೂಡಿಸುತ್ತೆ.   ಎಲ್ಲಾ ದೃಶ್ಯಗಳನ್ನ ನೈಜವಾಗಿ ಕಟ್ಟಿಕೊಡಬೇಕು ಎಂಬ ಆಶಯದೊಂದಿಗೆ ನಿರ್ದೇಶಕರು ಈ ಚಿತ್ರಕ್ಕೆ ಕಂಪ್ಯೂಟರ್ ಜನರೇಟೆಡ್ ಇಮೇಜ್ ಎಲ್ಲಿಯೂ ಬಳಸಿಲ್ಲ. ನೈಜವಾಗಿ ಚಿತ್ರಿಸುವುದಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಹಾಗೇ ಈ ಸಿನಿಮಾವನ್ನ ಅತ್ಯಾಧುನಿಕ ಐಮ್ಯಾಕ್ಸ್ ಕ್ಯಾಮೆರಾದಲ್ಲಿ ಶೂಟ್ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇದ್ರಿಂದಾಗಿಯೇ ಸ್ಫೋಟದ ದೃಶ್ಯ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

ಜಪಾನ್​ನ ಹಿರೋಶಿಮಾ ನಾಗಾಸಾಕಿ ನಗರಗಳ ಮೇಲಿನ ಅಣುಬಾಂಬ್ ದುರಂತವನ್ನು ಜಗತ್ತು ಈಗಲೂ ಮರೆತಿಲ್ಲ. ಅಣುಬಾಂಬ್ ಆವಿಷ್ಕರಿಸಿದ ರಾಬರ್ಟ್‌ ಓಪನ್‌ಹೈಮರ್ ಎಂಬ ಅಮೆರಿಕದ ವಿಜ್ಞಾನಿಯ ಬದುಕು ಹೇಗಿತ್ತು. ಅಣುಬಾಂಬ್ ಸೃಷ್ಟಿಯಾಗಿದ್ದು ಹೇಗೆ ಅನ್ನೋದನ್ನು ಜಗತ್ತಿಗೆ ಪರಿಚಯಿಸಲಾಗಿದೆ.. ನಿರ್ದೇಶಕ ನೋಲನ್ ಹಿಂದಿನ ಸಿನಿಮಾಗಳ ಶೈಲಿಯಲ್ಲೇ ಇಲ್ಲಿಯೂ ಮೂರು ಕಡೆಗಳಿಂದ, ಎರಡು ಕಾಲಘಟ್ಟಗಳಲ್ಲಿ ಕಥೆ ಸಾಗುತ್ತದೆ. ವಿಶೇಷ ಅಂದ್ರೆ ಇದು ಜೀವನಚರಿತ್ರೆಯ ಕಥೆಯಾಗಿದ್ದರಿಂದ ಕಲ್ಪನೆ, ತರ್ಕಗಳಿಗೆ ಅವಕಾಶವಿಲ್ಲದೆ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ. ಸಿನಿಮಾದ ಆರಂಭದಲ್ಲಿ ಅಣುವಿಜ್ಞಾನಿ ಓಪನ್‌ಹೈಮರ್ ಅವರನ್ನು ನ್ಯಾಯಾಲಯ ವಿಚಾರಿಸುವ ಸಂದರ್ಭ ಒಂದೆಡೆಯಾದರೆ, ಅವರ ಸಂಶೋಧನೆ ಇನ್ನೊಂದು ಕಾಲಘಟ್ಟ. ಜರ್ಮನಿಯಲ್ಲಿದ್ದ ಓಪನ್‌ಹೈಮರ್‌ ಅಮೆರಿಕಕ್ಕೆ ವಾಪಸ್ ಬಂದು ದೇಶದಲ್ಲಿಯೇ ಮೊದಲ ಸಲ ಭೌತಶಾಸ್ತ್ರದ ತರಗತಿ ಪ್ರಾರಂಭಿಸುವುದರಿಂದ ಕಥೆ ಶುರುವಾಗುತ್ತದೆ. ಹೈಮರ್ ಪ್ರೀತಿ, ಸಂಬಂಧಗಳು, ನಾಜಿ, ಕಮ್ಯುನಿಸ್ಟ್ ರಾಜಕೀಯದ ನಡುವೆ ಒಂದಷ್ಟು ಭೌತವಿಜ್ಞಾನದ ಅಂಶಗಳು ಬಂದು ಹೋಗುತ್ತವೆ. ರಾಬರ್ಟ್ ಡೌನೀ ಜ್ಯೂನಿಯರ್, ಫ್ಲಾರೆನ್ಸ್, ಮ್ಯಾಟ್‌ ಡೇಮನ್‌, ಎಮಿಲಿ ಬ್ಲಂಟ್ ಮುಂತಾದ ಸಹ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಣುಬಾಂಬ್ ಸ್ಫೋಟ, ಸಂಶೋಧನೆ ನಗರವಾದ ಲಾಸ್ ಆಲೋಸ್ ಪ್ರಯೋಗಾಲಯದ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ.

ಭಾರತದಲ್ಲಿ ಅತಿ ಹೆಚ್ಚು ಅಡ್ವಾನ್ಸ್ ಬುಕಿಂಗ್ ಪಡೆದುಕೊಂಡ ಹಾಲಿವುಡ್ ಸಿನಿಮಾ ಎಂಬ ಖ್ಯಾತಿಗೆ ಆಪನ್ ಹೈಮರ್ ಪಾತ್ರವಾಗಿದೆ. ಸಿನಿಮಾದ 1.68 ಲಕ್ಷ ಟಿಕೆಟ್​ಗಳು ಸಿನಿಮಾ ಬಿಡುಗಡೆಗೂ ಮುನ್ನವೇ ಮಾರಾಟವಾಗಿವೆ ಅಂದ್ರೆ ಈ ಸಿನಿಮಾ ಬಗೆಗಿನ ಕ್ರೇಜ್ ಎಷ್ಟರ ಮಟ್ಟಿಗಿದೆ ಅನ್ನೋದನ್ನ ಊಹಿಸಿಕೊಳ್ಳಿ. ಇನ್ನು ಚಿತ್ರದಲ್ಲಿ ಭಗವದ್ಗೀತೆ ಕೂಡ ಭಾರೀ ಸದ್ದು ಮಾಡ್ತಿದೆ. ಯಾಕಂದ್ರೆ ಓಪನ್ ಹೈಮರ್ ಗೆ ಸಂಸ್ಕೃತ ತಿಳಿದಿತ್ತು ಹಾಗೇ ಅವರು ಸಂಸ್ಕೃತದಲ್ಲೇ ಭಗವದ್ಗೀತೆಯನ್ನ ಓದಿದ್ದರು. ಅಲ್ಲದೆ ಅಣುಬಾಂಬ್ ತಯಾರಿಕೆಗೂ ಮುನ್ನ ಭಗವದ್ಗೀತೆಯಲ್ಲಿ ಬರುವ ಸಾಲಿನಂತೆ ನಾನೇ ಮರಣ ನಾನೇ ಜಗತ್ ಸಂಹಾರಿ ಎನ್ನುವ ಕೃಷ್ಣನ ವಿರಾಟ್‌ ರೂಪದ ಮಾತುಗಳಿಂದ ಪ್ರೇರಿತರಾಗಿದ್ದರು. ಆದ್ರೀಗ ಭಗವದ್ಗೀತೆ ವಿಚಾರವಾಗಿ ವಿವಾದವೊಂದು ಭುಗಿಲೆದ್ದಿದೆ. ಯಾಕಂದ್ರೆ ಸಿನಿಮಾದಲ್ಲಿ ಇಂಟಿಮೇಟ್ ದೃಶ್ಯಗಳನ್ನು ಮಾಡುವಾಗ ಭಗವದ್ಗೀತೆ ಓದಿರುವುದು ತೀವ್ರ ಟೀಕೆಗೆ ಕಾರಣವಾಗಿದ್ದು ಭಾರತೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಏನೇ ಇದ್ರೂ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್​ ಮೇಲೆ ಅಮೆರಿಕ ಎರಡು ಬಾರಿ ಅಣು ಬಾಂಬ್​ ಹಾಕಿದ್ದು ಈಗ ಮನುಕುಲದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ.

 

suddiyaana