ಬರೋಬ್ಬರಿ 100 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕೊರಿಯೋಗ್ರಾಫರ್! – ಪೊಲೀಸರು ದಂಡ ವಿಧಿಸಿದ್ದೆಷ್ಟು ಗೊತ್ತಾ?
ಕೆಲ ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದ್ರಲ್ಲಿ ನಿಸ್ಸೀಮರು ಅಂತಾನೇ ಹೇಳಬಹುದು. ಯಾಕಂದ್ರೆ ಪೊಲೀಸರ ಕಣ್ಣು ತಪ್ಪಿಸಿ ವಾಹನವನ್ನು ಎಲ್ಲೆಂದರಲ್ಲಿ ನುಗ್ಗಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ವಾಹನ ಚಲಾಯಿಸುವಾಗ ಫೋನ್ ಬಳಕೆ, ಹೆಲ್ಮೆಟ್ ಧರಿಸದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಬಾರಿ ಸಿಕ್ಕಿಬೀಳುತ್ತಾರೆ. ಇದೀಗ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 100 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾನೆ. ಆತನಿಗೆ ಪೊಲೀಸರು ಹಾಕಿದ ಫೈನ್ ಮೊತ್ತ ಕೇಳಿದ್ರೆ ನೀವು ಶಾಕ್ ಆಗೋದಂತೂ ಪಕ್ಕಾ..
ಏನಿದು ಕೇಸ್?
ಈ ಘಟನೆ ಬೆಂಗಳೂರಿನ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ. ನಿಯಮ ಉಲ್ಲಂಘಿಸಿದ ಕೊರಿಯೋಗ್ರಾಫರ್ ನನ್ನು ಬಿಳೇಕಹಳ್ಳಿ ನಿವಾಸಿ ಹಸನ್ ರೆಹಮಾನ್ (25) ಎಂದು ಗುರುತಿಸಲಾಗಿದೆ. ರೆಹಮಾನ್ ಬಿಟಿಎಂ ಎರಡನೇ ಹಂತದಲ್ಲಿ ಡ್ಯಾನ್ಸ್ ಸ್ಟುಡಿಯೋ ನಡೆಸುತ್ತಿದ್ದಾರೆ. ಸಂಚಾರ ಉಲ್ಲಂಘನೆಗಳಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ 54 ಪ್ರಕರಣಗಳು, 34 ದೋಷಪೂರಿತ ನಂಬರ್ ಪ್ಲೇಟ್ ಪ್ರಕರಣಗಳು, ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ ಐದು ಪ್ರಕರಣಗಳು, ನೋ ಎಂಟ್ರಿ ಮೂರು ಮತ್ತು ನೋ ಪಾರ್ಕಿಂಗ್, ಜೀಬ್ರಾ ಕ್ರಾಸಿಂಗ್‌ನಲ್ಲಿ ಪಾರ್ಕಿಂಗ್ ಮತ್ತು ಟ್ರಿಪಲ್ ರೈಡಿಂಗ್ ಸೇರಿದಂತೆ ಈತನ ಮೇಲೆ ಸುಮಾರು 100 ಪ್ರಕರಣ ದಾಖಲಾಗಿದೆ. ಆತನ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಏರ್‌ಇಂಡಿಯಾದಿಂದ ಮರೆಯಾಗಲಿದೆ ಸೀರೆ ಟ್ರೆಂಡ್! – ಗಗನಸಖಿಯರಿಗೆ ಹೊಸ ಸಮವಸ್ತ್ರ ಡಿಸೈನ್ ಮಾಡೋದು ಯಾರು?
ವೈರಲ್ ಆದ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವೀಡಿಯೊದಲ್ಲಿ, ನೃತ್ಯ ನಿರ್ದೇಶಕ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಲ್ಲಿ ಅಪಾಯಕಾರಿಯಾಗಿ ಸವಾರಿ ಮಾಡುತ್ತಿರುವುದು, ಇತರ ಪ್ರಯಾಣಿಕರಿಗೆ ಬೆದರಿಕೆಯನ್ನುಂಟು ಮಾಡುತ್ತಿರುವುದು ಕಾಣುತ್ತಿದೆ. ಇದು ಕಾರಿನ ಡ್ಯಾಶ್‌ಕ್ಯಾಮ್‌ನಿಂದ ಸ್ಪಷ್ಟವಾಗಿ ಸೆರೆಹಿಡಿಯಲ್ಪಟ್ಟಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಅಗುತ್ತಿದೆ.
ರೆಹಮಾನ್ ಸಿಕ್ಕಿ ಬಿದ್ದಿದ್ದು ಹೇಗೆ?
99 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಕೊರಿಯೋಗ್ರಾಫರ್ ರೆಹಮಾನ್ 100ನೇ ಉಲ್ಲಂಘನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದು ಪೊಲೀಸರ ಗಮನಕ್ಕೆ ಬಂದಿದ್ದು, ಬಳಿಕ ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದಿದ್ದಾರೆ.
ಆತನಿಗೆ ಪೊಲೀಸರು ದಂಡ ಹಾಕಿದ್ದು ಎಷ್ಟು?
ಬರೋಬ್ಬರಿ ನೂರು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದಾತನಿಗೆ ಪೊಲೀಸರು ಸರಿಯಾಗಿಯೇ ದಂಡ ವಿಧಿಸಿದ್ದಾರೆ. ಆತನಿಗೆ ಪೊಲೀಸರು ಬರೋಬ್ಬರಿ 56,000 ರೂಪಾಯಿ ದಂಡವನ್ನು ಹಾಕಿದ್ದಾರೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಂಡ ಪಾವತಿಸಲು 2 ತಿಂಗಳ ಕಾಲಾವಕಾಶ!
ಕೊರಿಯೋಗ್ರಾಫರ್ ರೆಹಮಾನ್ ನ ಸ್ಕೂಟರ್ ವಶಕ್ಕೆ ಪಡೆದಿರುವ ಪೊಲೀಸರು, 56,000 ರೂ. ಪಾವತಿಸಲು ರೆಹಮಾನ್‌ಗೆ ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ. ಎರಡು ತಿಂಗಳಲ್ಲಿ ದಂಡ ಪಾವತಿಸುವಲ್ಲಿ ವಿಫಲವಾದರೆ, ಆತನ ವಾಹನವನ್ನು ಹರಾಜು ಮಾಡಲಾಗುವುದು ಎಂದು ಮೈಕೋ ಲೇಔಟ್ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಐಪಿಸಿ ಮತ್ತು ಭಾರತೀಯ ಮೋಟಾರ್ ವಾಹನ (ಐಎಂವಿ) ಕಾಯ್ದೆಯಡಿ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.