ಚಾಕೊಲೇಟ್ ಟೊಮ್ಯಾಟೋ ನೀವು ತಿಂದಿದ್ದೀರಾ ? – ಇದರ ರುಚಿ ನೋಡಿದರೆ ಅಚ್ಚರಿ ಗ್ಯಾರಂಟಿ..!
ಚಾಕೊಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಚಾಕೊಲೇಟ್ ಅಂದರೆ ಸಾಕು ತಿನ್ನಲು ಬೇಕು ಎಂಬ ಆಸೆ ಸಹಜವಾಗಿಯೇ ಆಗುತ್ತದೆ. ಆದರೆ, ನೀವು ಎಂದಾದರೂ ಚಾಕೊಲೇಟ್ ಟೊಮ್ಯಾಟೊ ತಿಂದಿದ್ದೀರಾ?. ಬರೀ ಕೆಂಪು ಕೆಂಪಾದ ಟೊಮ್ಯಾಟೋ ಹಣ್ಣು ಗೊತ್ತು. ಇದ್ಯಾವುದು ಚಾಕೊಲೇಟ್ ಟೊಮ್ಯಾಟೊ ಅಂತೀರಾ. ಪಶ್ಚಿಮ ಬಂಗಾಳದಲ್ಲಿ ಚಾಕೊಲೇಟ್ ಟೊಮ್ಯಾಟೊ ಕೂಡಾ ಬೆಳೆಯುತ್ತಾರೆ.
ಈ ಚಾಕೊಲೇಟ್ ಟೊಮ್ಯಾಟೊಗಳು ಕಾಯಿಯಿದ್ದಾಗ ಎಲ್ಲಾ ಮಾಮೂಲಿ ಟೊಮ್ಯಾಟೋ ತರ ಹಸಿರು ಬಣ್ಣದಲ್ಲಿಯೇ ಕಾಣುತ್ತವೆ. ಆದರೆ ಮಾಗಿ, ಹಣ್ಣಾಗುವ ವೇಳೆ ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತವೆ. ಪಶ್ಷಿಮ ಬಂಗಾಳದ ಮುಸ್ತಫಾನಗರದ ದಂಪತಿ ಪ್ರಥಮ ಬಾರಿಗೆ ಈ ಚಾಕಲೇಟ್ ಟೊಮ್ಯಾಟೊ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ.
ಇದನ್ನೂ ಓದಿ: ಮಾವು ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಹಣ್ಣಿನ ಪ್ರದರ್ಶನ –ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟ..!
ಪಶ್ಚಿಮ ಬಂಗಾಳದ ಮುಸ್ತಫಾನಗರದ ದೀಪು ದೇಬ್ಶರ್ಮಾ ಮತ್ತು ಸಾಧಿ ದೇಬ್ಶರ್ಮಾ ದಂಪತಿ ಈ ಟೊಮ್ಯಾಟೊ ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಈ ಟೊಮ್ಯಾಟೊ ಬೀಜಗಳನ್ನು ಬಿತ್ತಿದ್ದರು. ಮತ್ತು ಜೂನ್-ಜುಲೈನಲ್ಲಿ ಟೊಮ್ಯಾಟೊಗಳು ಕಟಾವಿಗೆ ಬಂದಿದೆ. ಸಸಿಗಳನ್ನು ನೆಟ್ಟ 4ರಿಂದ 5 ತಿಂಗಳಲ್ಲೇ ತಮ್ಮ ಜಮೀನಿಗೆ ಉತ್ತಮ ಪ್ರಮಾಣದ ಫಸಲು ಬಂದಿದೆ ಎಂದು ದೀಪು ತಿಳಿಸಿದ್ದಾರೆ. ಈ ರೀತಿಯ ಟೊಮ್ಯಾಟೊಗಳನ್ನು ಮುಖ್ಯವಾಗಿ ಮಳೆಗಾಲದಲ್ಲಿ ಬೆಳೆಯಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಟೊಮ್ಯಾಟೊದಿಂದ ಚಟ್ನಿಯನ್ನು ತಯಾರಿಸಲಾಗುತ್ತದೆ. ಇವು ಇತರ ಟೊಮ್ಯಾಟೊಗಳಂತೆ ಹುಳಿಯಾಗಿರುವುದಿಲ್ಲ, ಬದಲಿಗೆ ಸಿಹಿಯಾಗಿರುತ್ತವೆ. ಹಾಗಾಗಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಟೊಮ್ಯಾಟೊಗಳನ್ನು ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ ಎಂದು ದೀಪು ದೇವಶರ್ಮಾ ತಿಳಿಸಿದ್ದಾರೆ.
ಈ ಚಾಕೊಲೇಟ್ ಟೊಮ್ಯಾಟೊಗಳ ಬಗ್ಗೆ ಕಲಿಯಾಗಂಜ್ ಬ್ಲಾಕ್‌ನ ಕೃಷಿ ಅಧಿಕಾರಿ ಮೌಮಿತಾ ಸರ್ಕಾರ್ ಕೂಡಾ ಕೆಲವೊಂದು ವಿಚಾರ ತಿಳಿಸಿದ್ದಾರೆ. ಈ ಚಾಕೊಲೇಟ್ ಟೊಮ್ಯಾಟೊ ಕೃಷಿಯನ್ನು ಪ್ರಾರಂಭಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ರೈತರು ಈ ಟೊಮ್ಯಾಟೊಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಮಳೆಗಾಲದಲ್ಲಿ ಇತರೆ ಟೊಮ್ಯಾಟೊಗಳು ಮಾರುಕಟ್ಟೆಯಲ್ಲಿ ಸಿಗದಿರುವಾಗ ಈ ಟೊಮ್ಯಾಟೊಗಳು ಮಾರುಕಟ್ಟೆಗೆ ಬರುತ್ತವೆ ಹಾಗಾಗಿ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದಿದ್ದಾರೆ. ಈ ಟೊಮ್ಯಾಟೊಗಳು ಮೂಲತಃ ಸೋಲಾನಮ್ ಲೈಕೋಪರ್ಸಿಕಮ್ ಜಾತಿಯಿಂದ ಬಂದವು. ಇವು ಕಾಯಿಯಾಗಿದ್ದಾಗ ಹಸಿರು ಮತ್ತು ಮಾಗಿದಾಗ ಚಾಕೊಲೇಟ್ ಬಣ್ಣವನ್ನು ಹೊಂದಿರುತ್ತವೆ. ಈ ಟೊಮೆಟೊ ಪ್ರಭೇದವು ಪಶ್ಚಿಮ ದಕ್ಷಿಣ ಅಮೆರಿಕಾ ಮತ್ತು ಮಧ್ಯ ಅಮೆರಿಕಾದಲ್ಲಿದೆ.