ಸರ್ಕಾರದ ತಪ್ಪಿಗೆ ಚಿನ್ನಸ್ವಾಮಿಗೆ ಶಿಕ್ಷೆ – ವಿಶ್ವಕಪ್ ಶಿಫ್ಟ್ ನಿಂದ ಎಷ್ಟೆಲ್ಲಾ ಲಾಸ್?
2026ಕ್ಕೆ RCB ಪಂದ್ಯಗಳೂ ಎತ್ತಂಗಡಿ!

ಚಿನ್ನಸ್ವಾಮಿ ಕ್ರೀಡಾಂಗಣ.. ಬೆಂಗಳೂರಿನ ಹೃದಯಭಾಗದಲ್ಲೇ ಇರೋ ಕ್ರಿಕೆಟಿಗರ ಪಾಲಿನ ಪವಿತ್ರ ಮೈದಾನ. ದಶಕಗಳ ಇತಿಹಾಸ ಹೊಂದಿರೋ ಈ ಸ್ಟೇಡಿಯಮ್ನಲ್ಲಿ ಆರ್ಸಿಬಿ ಪಂದ್ಯಗಳನ್ನ ನೋಡೋದೇ ಹೆಮ್ಮೆ. ಭಾರತ ತಂಡಕ್ಕೆ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್, ಕೆಎಲ್ ರಾಹುಲ್ ಸೇರಿದಂತೆ ಸಾಕಷ್ಟು ಪ್ರತಿಭಾವಂತ ಆಟಗಾರರನ್ನ ನೀಡಿರೋ ಮೈದಾನ. ಆದ್ರೀಗ ಯಾರದ್ದೋ ತಪ್ಪಿಗೆ ಯಾರದ್ದೋ ನಿರ್ಲಕ್ಷ್ಯಕ್ಕೆ, ಮತ್ತಿನ್ಯಾರದ್ದೋ ಬೇಜವಾಬ್ದಾರಿಗೆ ಚಿನ್ನಸ್ವಾಮಿ ಅಂಗಳ ಶಿಕ್ಷೆ ಅನುಭವಿಸುವಂತಾಗಿದೆ.
ಇದನ್ನೂ ಓದಿ : ಪಾಕಿಸ್ತಾನದೊಂದಿಗೆ ಸಂಪರ್ಕ – ಮೂವರು ಭಯೋತ್ಪಾದಕ ಸಹಚರರು ಅರೆಸ್ಟ್
ಎಲ್ಲವೂ ಸರಿಯಾಗಿದ್ದಿದ್ರೆ ಚಿನ್ನಸ್ವಾಮಿ ಮೈದಾನ ಹಲವು ಪಂದ್ಯಗಳಿಗೆ ಸಾಕ್ಷಿಯಾಗ್ಬೇಕಿತ್ತು. ಆದ್ರೆ ಜೂನ್ 4ರಂದು ಸಂಭವಿಸಿದ ಕಾಲ್ತುಳಿತ ದುರಂತದಿಂದಾಗಿ ಒಂದೊಂದೇ ಪಂದ್ಯಗಳನ್ನ ಕಳೆದುಕೊಳ್ತಿದೆ. ಇದೀಗ ಮಹಿಳಾ ವಿಶ್ವಕಪ್ನ ಪಂದ್ಯಗಳು ಕೂಡ ಚಿನ್ನಸ್ವಾಮಿ ಮೈದಾನದಿಂದ ಶಿಫ್ಟ್ ಆಗ್ತಿವೆ. ರಾಜ್ಯ ಕ್ರಿಕೆಟ್ ಅಭಿಮಾನಿಗಳ ಕನಸು ಭಗ್ನವಾಗಿದೆ. ಸೆ.30ರಂದು ಉದ್ಘಾಟನಾ ಪಂದ್ಯ, ಸೆಮಿಫೈನಲ್, ಫೈನಲ್ ಸೇರಿ ಒಟ್ಟು ಪಂದ್ಯಗಳನ್ನು ಬೆಂಗಳೂರಲ್ಲಿ ನಡೆಸಲು ಐಸಿಸಿ ಯೋಜಿಸಿತ್ತು. ಆದರೆ, ಆದರೆ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟು, ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ
ಯಾರೋ ಮಾಡಿದ ತಪ್ಪಿಗೆ, ನಮ್ಮ ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಿಂದ, ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಗಳು, ಬೇರೆಡೆ ಸ್ಥಳಾಂಗತಗೊಳ್ಳುತ್ತಿದೆ. ಇದರಿಂದ ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಬ್ರ್ಯಾಂಡ್ ಬೆಂಗಳೂರು ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆದಿವೆ. ಟೆಸ್ಟ್, ಏಕದಿನ, ಟಿ-20 ಕ್ರಿಕೆಟ್ ಸೇರಿದಂತೆ, 700ಕ್ಕಿಂತ ಹೆಚ್ಚು ಪಂದ್ಯಗಳನ್ನ ಈ ಮೈದಾನದಲ್ಲಿ ಆಡಿಸಲಾಗಿದೆ. ಆದ್ರೆ ಯಾವತ್ತೂ ಕೂಡ ಪಂದ್ಯಾವಳಿಗಳ ವೇಳೆ, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಒಂದೇ ಒಂದು ಸಣ್ಣ ಲೋಪ ಕೂಡ ಕಂಡುಬಂದಿಲ್ಲ. ಹೀಗಿದ್ರೂ ಮಹಿಳಾ ವಿಶ್ವಕಪ್ ಎತ್ತಂಗಡಿ ಆಗ್ತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಮಹಿಳಾ ವಿಶ್ವಕಪ್ನ ಉದ್ಘಾಟನಾ ಪಂದ್ಯ ಸೇರಿದಂತೆ, ಚಿನ್ನಸ್ವಾಮಿಯಲ್ಲಿ ಒಟ್ಟು 3 ಲೀಗ್ ಪಂದ್ಯಗಳು ನಡೆಯಬೇಕಿತ್ತು. ಸೆಮಿಫೈನಲ್ ಮತ್ತು ಫೈನಲ್ನಂತಹ ಬಿಗ್ ಮ್ಯಾಚ್ಗಳ ಆತಿಥ್ಯ ಕೂಡ ನಮ್ಮ ಹೆಮ್ಮೆಯ ನಗರಿಗೆ ನೀಡಲಾಗಿತ್ತು. ಆದ್ರೆ ಈ ಎಲ್ಲಾ 5 ಪಂದ್ಯಗಳನ್ನ ಚಿನ್ನಸ್ವಾಮಿ ಕಳೆದುಕೊಂಡಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೆಲವು ಪಂದ್ಯಗಳನ್ನು ಕಾರ್ಯವತ್ತಂನಲ್ಲಿರುವ ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಬಗ್ಗೆ ಐಸಿಸಿ ಈಗ ಕೇರಳ ಕ್ರಿಕೆಟ್ ಅಸೋಸಿಯೇಷನ್ ಜೊತೆ ಚರ್ಚೆ ನಡೆಸುತ್ತಿದೆ. 50,000 ಪ್ರೇಕ್ಷಕರ ಸಾಮರ್ಥ್ಯವಿರುವ ಕೇರಳ ಕ್ರಿಕೆಟ್ ಕ್ರೀಡಾಂಗಣವು 6 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರುವ ದಾಖಲೆ ಹೊಂದಿದೆ. ಆಸನ ಸಾಮರ್ಥ್ಯದ ವಿಷಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ದೊಡ್ಡದಿದೆ. ಹೀಗಾಗಿ ಬಿಸಿಸಿಐ ಮತ್ತು ಐಸಿಸಿ ಚಿನ್ನಸ್ವಾಮಿ ಪರ್ಯಾಯವಾಗಿ ಕೇರಳದಲ್ಲಿ ಪಂದ್ಯಗಳನ್ನ ಆಯೋಜನೆ ಮಾಡೋಕೆ ಯೋಜಿಸುತ್ತಿದೆ.
ಇನ್ನು ಇದಕ್ಕೂ ಮುನ್ನ ಕಾಲ್ತುಳಿತ ನಡೆದ ಕೆಲ ದಿನಗಳಲ್ಲೇ ಭಾರತ-ದ.ಆಫ್ರಿಕಾ ‘ಎ’ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಚಿನ್ನಸ್ವಾಮಿಯಿಂದ ರಾಜ್‌ಕೋಟ್‌ಗೆ ಸ್ಥಳಾಂತರಿಸಿ ಬಿಸಿಸಿಐ ಆದೇಶಿಸಿತ್ತು. ಚೊಚ್ಚಲ ಆವೃತ್ತಿಯ ಕೆಎಸ್‌ಎ ಮಹಾರಾಣಿ ಟ್ರೋಫಿ ಪಂದ್ಯಗಳನ್ನು ಚಿನ್ನಸ್ವಾಮಿ ಬದಲು ಆಲೂರಿನಲ್ಲಿ ನಡೆಸಲಾಗುತ್ತಿದೆ. ಈಗ ಮಹಾರಾಜ ಟ್ರೋಫಿ ಟೂರ್ನಿಯನ್ನೂ ಕೂಡ ಮೈಸೂರಿಗೆ ಶಿಫ್ಟ್ ಮಾಡಲಾಗಿದೆ. ಟೂರ್ನಿಯ ಪಂದ್ಯಗಳು ಆಗಸ್ಟ್ 11ರಿಂದ 27ರ ವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಟೂರ್ನಿಯನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಆಯೋಜಿಸಲು ಕೆಎಸ್‌ಸಿಎ ನಿರ್ಧರಿಸಿತ್ತು. ಆದರೆ ಪೊಲೀಸ್ ಇಲಾಖೆ ಟೂರ್ನಿಗೆ ಅನುಮತಿ ನೀಡದ ಕಾರಣ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ.

ನೋಡಿರಿ

