ಮಾಲ್ಡೀವ್ಸ್‌ನಲ್ಲಿ ಚೀನಾ ಬೇಹುಗಾರಿಕಾ ಹಡಗು – ‘ದೋಸ್ತಿ-16’ ಹೆಸರಿನಲ್ಲಿ ಜಂಟಿ ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌!

ಮಾಲ್ಡೀವ್ಸ್‌ನಲ್ಲಿ ಚೀನಾ ಬೇಹುಗಾರಿಕಾ ಹಡಗು – ‘ದೋಸ್ತಿ-16’ ಹೆಸರಿನಲ್ಲಿ ಜಂಟಿ ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್‌!

ಪದೇ ಪದೇ ಭಾರತದ ವಿರುದ್ಧ ಕಾಲ್ಕೆದರಿ ಜಗಳ ಬರುತ್ತಿರೋ ಚೀನಾ ದೇಶ, ಇದೀಗ ಮತ್ತೆ ತನ್ನ ನರಿಬುದ್ದಿ ತೋರಿಸುತ್ತಿದ್ಯಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಕಾರಣ ಚೀನಾದಿಂದ ಹೊರಟಿರುವ ಶಂಕಿತ ಬೇಹುಗಾರಿಕಾ ಹಡಗು. ಹೌದು ಚೀನಾ ಶಂಕಿತ ಬೇಹುಗಾರಿಕಾ ಹಡಗೊಂಡು ಮಾಲ್ಡೀವ್ಸ್‌ನ ಮಾಲೆ ತೀರದ ಸಮೀಪಕ್ಕೆ ತಲುಪಿದ್ದು, ಇಲ್ಲೇ ಕೆಲವು ದಿನಗಳ ಕಾಲ ಲಂಗರು ಹಾಕಲಿದೆ ಎಂದು ಮೂಲಗಳು ಹೇಳುತ್ತಿವೆ. ಈ ಬೆನ್ನಲ್ಲೇ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನ ನೌಕಾಪಡೆಗಳು ಜಂಟಿ ಸಮರಾಭ್ಯಾಸ ಆರಂಭಿಸಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜೆಡಿಎಸ್ ಗೆ ಮೂರೇ ಕ್ಷೇತ್ರ! – ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್ ಗೆ ನೀಡುವುದು ಬಹುತೇಕ ಫಿಕ್ಸ್

ಹೌದು, ಚೀನಾದಿಂದ ಶಂಕಿತ ಬೇಹುಗಾರಿಕಾ ಹಡಗೊಂದು ಗುರುವಾರ ಹೊರಟಿದೆ. ಈ ಹಡಗು ಮಾಲ್ಡೀವ್ಸ್‌ನಲ್ಲಿ ಲಂಗರು ಹಾಕುವುದಕ್ಕಾಗಿ ಜ.23ರಂದು ಸರ್ಕಾರ ಅನುಮತಿ ನೀಡಿತ್ತು. ಸಮುದ್ರದ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಈ ಸಂಶೋಧನಾ ಹಡಗನ್ನು ಕಳುಹಿಸಲಾಗಿದೆ ಎಂದು ಚೀನಾ ಹೇಳಿದೆ. ಚೀನಾದ ಹಡಗು ಕ್ಸಿಯಾಂಗ್‌ ಯಾಂಗ್‌ ಹಾಂಗ್‌-03 ಮಾಲ್ಡೀವ್ಸ್‌ನ ಮಾಲೆ ಬಂದರಿಗೆ ತಲುಪಿದೆ. ಚೀನಾ ಸಮುದ್ರದ ಅಧ್ಯಯನಕ್ಕೆ ಈ ಹಡಗನ್ನು ಕಳುಹಿಸಿದ್ದರೂ ಸಹ ಇದೊಂದು ಬೇಹುಗಾರಿಕಾ ಹಡಗು ಆಗಿರಬಹುದು ಎಂಬ ಕಾರಣಕ್ಕೆ ನೆರೆಯ ದೇಶಗಳು ಇದರ ಮೇಲೆ ಕಣ್ಣಿಟ್ಟಿವೆ.

ಮಾಲ್ಡೀವಸ್‌ಗೆ ಚೀನಾ ಹಡಗು ತಲುಪುತ್ತಿದ್ದಂತೆ ಮಾಲ್ಡೀವ್ಸ್‌ ಕೋಸ್ಟ್‌ಗಾರ್ಡ್‌, ಭಾರತ ಮತ್ತು ಶ್ರೀಲಂಕಾದ ನೌಕಾಪಡೆಗಳು ‘ದೋಸ್ತಿ-16’ ಹೆಸರಿನಲ್ಲಿ ಜಂಟಿ ಸಮರಾಭ್ಯಾಸವನ್ನು ಗುರುವಾರ ಆರಂಭಿಸಿವೆ. ಇದು ಫೆ.25ರವರೆಗೆ ಮುಂದುವರೆಯಲಿದೆ. ಪರಸ್ಪರ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಸೇನಾ ಸಹಭಾಗಿತ್ವವನ್ನು ಉತ್ತಮಪಡಿಸಿಕೊಳ್ಳಲು ಈ ಅಭ್ಯಾಸವನ್ನು ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ.

Shwetha M