ಲವ್ ಮಾಡಲು 1 ವಾರ ರಜೆ ನೀಡಿದ 9 ಕಾಲೇಜುಗಳು! – ಕಾರಣ ಏನು ಗೊತ್ತಾ?
ಬೀಜಿಂಗ್: ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂದೆನಿಸಿಕೊಂಡಿದ್ದ ಚೀನಾದಲ್ಲಿ ಇದೀಗ ಜನನ ಪ್ರಮಾಣ ಮಟ್ಟ ಕುಸಿಯುತ್ತಿದೆ. ಇದು ಚೀನಾದ ಆರ್ಥಿಕತೆ ಮೇಲೂ ಭಾರಿ ಪರಿಣಾಮ ಬೀಳುತ್ತಿದೆ. ಹೀಗಾಗಿ ಚೀನಾ ಸರ್ಕಾರ ಜನಸಂಖ್ಯೆ ಹೆಚ್ಚಿಸಲು ನಾನಾ ಯೋಜನೆ ರೂಪಿಸುತ್ತಿದೆ. ಅದರಲ್ಲೂ ಇತ್ತೀಚಿಗೆ ಜನಸಂಖ್ಯೆ ಹೆಚ್ಚಳಕ್ಕೆ ಚೀನಾ ತೆಗೆದುಕೊಂಡಿರುವ ನಿರ್ಧಾರ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಚೀನಾದಲ್ಲಿ ಜನನ ಪ್ರಮಾಣ ಇಳಿಕೆಯಾಗುತ್ತಿರುವುದು ಸರ್ಕಾರಕ್ಕೆ, ಶಿಕ್ಷಣ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಜನಸಂಖ್ಯೆ ಹೆಚ್ಚಿಸಲು ಚೀನಾದ ಕೆಲ ಕಾಲೇಜುಗಳು ಹೊಸ ಪ್ಲಾನ್ ಮಾಡಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಲವ್ವಲ್ಲಿ ಬೀಳಲು ಒಂದು ವಾರ ರಜೆ ನೀಡಿದೆ.
ಇದನ್ನೂ ಓದಿ: ಯುವಕರಿಲ್ಲದೆ ಕಂಗೆಟ್ಟ ಚೀನಾದಿಂದ ಹೊಸ ಪ್ರಯೋಗ – ವಯಸ್ಸಾದವರನ್ನೇ ಮತ್ತಷ್ಟು ದುಡಿಸಲು ಪ್ಲ್ಯಾನ್!
ಫ್ಯಾನ್ ಮೀ ಶೈಕ್ಷಣಿಕ ಸಮೂಹದಡಿಯಲ್ಲಿ ಬರುವ 9 ಕಾಲೇಜುಗಳು ವಿದ್ಯಾರ್ಥಿಗಳಿಗೆ ಫಾಲ್ ಇನ್ ಲವ್ ಎಂಬ ಯೋಜನೆ ಜಾರಿ ಮಾಡಲಾಗಿದೆ. ಈ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರೀತಿಯಲ್ಲಿ ಬೀಳಲು ಒಂದು ವಾರ ಅವಕಾಶ ನೀಡಿದೆ. ವಿದ್ಯಾರ್ಥಿಗಳಿಗೆ ಪ್ರೀತಿಸಲು ಏಪ್ರಿಲ್ 1 ರಿಂದ ಏಪ್ರಿಲ್ 7 ರವರೆಗೆ ರಜೆ ಘೋಷಿಸಲಾಗಿದೆ. ಈ ನಿರ್ಧಾರವು ದೇಶದಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಯನ್ನು ಎದುರಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ.
ಈ ಬಗ್ಗೆ ಅಲ್ಲಿನ ಪ್ರಾಧ್ಯಾಪಕರು ಮಾತನಾಡಿದ್ದು, ಇಂಥಾ ರಜೆಯಿಂದಾಗಿ ವಿದ್ಯಾರ್ಥಿಗಳು ಹಲವು ಪ್ರದೇಶಗಳನ್ನು ನೋಡಲು, ಅಲ್ಲಿನ ಪರಿಸರವನ್ನು ಅನುಭವಿಸಲು ಸಹಾಯಕವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ತರಗತಿಗಳಲ್ಲಿ ಕಲಿಸುವ ಬೋಧನಾ ವಿಷಯಕ್ಕೂ ಸಹಾಯವಾಗುತ್ತದೆ. ಜೊತೆಗೆ ಜನನದ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ ಎಂದು ಹೇಳಿದರು.
ಈ ಒಂದು ವಾರದಲ್ಲಿ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್ ಸಹ ನೀಡಲಾಗಿದೆ. ಡೈರಿಗಳನ್ನು ಬರೆಯುವುದು, ವೈಯಕ್ತಿಕ ಅಭಿವೃದ್ಧಿಯ ಬಗ್ಗೆ ನಿಗಾ ಇಡುವುದು ಮತ್ತು ಪ್ರಯಾಣದ ವಿಡಿಯೋಗಳನ್ನು ಮಾಡುವುದು ಒಳಗೊಂಡಿರುತ್ತದೆ. ಈ ಒಂದು ಪ್ರಯತ್ನವು ಜನನ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶವನ್ನು ಪೂರೈಸುವ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ.